ಮಹಿಳಾ ಸ್ವಾತಂತ್ರ್ಯದ ಕಲ್ಪನೆ ಕೊಟ್ಟಿದ್ದು ಬಸವಣ್ಣನವರ ಅನುಭವ ಮಂಟಪ

| Published : Aug 25 2025, 01:00 AM IST

ಮಹಿಳಾ ಸ್ವಾತಂತ್ರ್ಯದ ಕಲ್ಪನೆ ಕೊಟ್ಟಿದ್ದು ಬಸವಣ್ಣನವರ ಅನುಭವ ಮಂಟಪ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಸ್ವಾತಂತ್ರ್ಯದ ಕಲ್ಪನೆಯನ್ನು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಕೊಟ್ಟಿದ್ದು ಅನುಭವ ಮಂಟಪ ಹಾಗೂ ಅಕ್ಕಮಹಾದೇವಿ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಮಹಿಳಾ ಸ್ವಾತಂತ್ರ್ಯದ ಕಲ್ಪನೆಯನ್ನು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಕೊಟ್ಟಿದ್ದು ಅನುಭವ ಮಂಟಪ ಹಾಗೂ ಅಕ್ಕಮಹಾದೇವಿ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಅಶ್ರಯದಲ್ಲಿ ನಡೆದ ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದಶಕಗಳ ಹಿಂದೆ ಮಹಿಳೆಯರಿಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶ ಮಾಡುವುದಕ್ಕೆ ಪುರುಷ ಪ್ರಧಾನ ಸಮಾಜದಲ್ಲಿ ಅವಕಾಶ ಇದ್ದಿಲ್ಲ. ಆದರೆ ಇವತ್ತು ಮಹಿಳೆಯರಿಗೆ ಆಸ್ತಿ ಹಕ್ಕೂ ಸಹ ಸಿಗುವಂತಾಗಿದೆ.ರಾಜೀವ ಗಾಂಧಿ ಮಾಡಿದ ತಿದ್ದುಪಡಿಯಿಂದಾಗಿ ಮಹಿಳೆಯರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿತು. ಇವತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪುರುಷರಿಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡುತ್ತಿದ್ದಾರೆ ಎಂದರು.ಕುಟುಂಬದಲ್ಲಿನ ಬಡತನವನ್ನು ಮೊದಲು ಅನುಭವಿಸುವವರು ಮಹಿಳೆಯರು. ಅಂತ ಮಹಿಳೆಗೆ ಸ್ವಾವಲಂಬಿ, ಸ್ವಾಭಿಮಾನಿಯಾಗಬೇಕು ಎನ್ನುವ ಕಾರಣಕ್ಕೆ ನಮ್ಮ ಸರಕಾರ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5 ಸಾವಿರ ತಲುಪಿಸಿ ಅವರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುತ್ತಿದೆ ಎಂದರು.ಹೊಸ ಪೀಳಿಗೆಯು ವೈವಾಹಿಕ ಜೀವನದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಶಾಂತಿಯ ವಾತಾವರಣ ಕಳೆದುಕೊಂಡಿದ್ದೇವೆ. ಆಧ್ಯಾತ್ಮಿಕ ಆಸಕ್ತಿ ಕೊರತೆ ಭೌತಿಕ ಆಸೆ, ದುರಾಸೆ ಜೀವನವನ್ನು ಅಶಾಂತಮಯವಾಗಿ ಮಾಡುತ್ತಿದೆ. ಹೀಗಾಗಿ ಮಹಿಳಾ ವರ್ಗದಲ್ಲಿ ಆಧ್ಯಾತ್ಮಿಕ ಜ್ಞಾನ ಹೆಚ್ಚಿಸಿಕೊಂಡು ನೆಮ್ಮದಿಯ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದರು.ಕದಳಿ ಬೆಳಗು ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಪ ಸದಸ್ಯ ಎಸ್.ವಿ. ಸಂಕನೂರ, ಇಂದಿನ ಕಲುಷಿತ ವಾತಾವರಣದಲ್ಲಿ ಶರಣರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಸಮಾನತೆ,‌ ಮಹಿಳಾ ಸ್ವಾತಂತ್ರ್ಯ,‌ ಕಾಯಕ ಮತ್ತು ದಾಸೋಹ ತತ್ವಕ್ಕಾಗಿ ಶರಣ ಚಳವಳಿ ನಡೆಯಿತು. ಶರಣರ ಆ ಚಿಂತನೆಗಳನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದರು ಎಂದರು.ಇದೇ ಸಂದರ್ಭದಲ್ಲಿ ಜಿಲ್ಲೆಯ 8 ಜನ ಸಾಧಕಿಯರಾದ ರತ್ನಕ್ಕ ಪಾಟೀಲ, ಅನ್ನಪೂರ್ಣ ಪಾಟೀಲ, ಪ್ರತಿಮಾ ಮಹಾಜನಶೆಟ್ಟರ, ಮಂಗಳಾ ಪಾಟೀಲ, ದಾಕ್ಷಾಯಿಣಿ ಹಲಸೂರ, ಗೌರಮ್ಮ ಬಡ್ನಿ, ಕಸ್ತೂರೆಮ್ಮ ಹಿರೇಮಠ, ಕಾವೇರಿ ಬೋಲ ಅವರಿಗೆ ಶಿವಶರಣೆ ಮುಕ್ತಾಯಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.‌ ಸಿ.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮತಾಯಿ ಅಸುಂಡಿ, ಸಮ್ಮೇಳನದ ಸರ್ವಾಧ್ಯಕ್ಷೆ ಗಿರಿಜಕ್ಕ ಧರ್ಮರೆಡ್ಡಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಅಕ್ಬರ್‌ಸಾಬ ಬಬರ್ಚಿ, ಎಸ್.ಎಸ್. ಪಟ್ಟಣಶೆಟ್ಟಿ, ಸುಧಾ ಹುಚ್ಚಣ್ಣವರ, ಸುಶೀಲಾ ಸೋಮಶೇಖರ, ಕೆ.ಎ. ಬಳಿಗಾರ, ಸೋಮಶೇಖರ ಗಾಂಜಿ, ಡಾ. ಧನೇಶ ದೇಸಾಯಿ ಇತರರು ಉಪಸ್ಥಿತರಿದ್ದರು.