ಬಸವಣ್ಣ ಭಾವಚಿತ್ರ ಮೆರವಣಿಗೆ ಮಾಡಿ ಜಯಂತಿ ಆಚರಣೆ

| Published : May 11 2024, 12:34 AM IST

ಸಾರಾಂಶ

ಮೆರವಣಿಗೆಯುದ್ದಕ್ಕೂ ಭಕ್ತರು ಜೈ ಬಸವೇಶ, ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ. ಸಕಲರಿಗೆ ಲೇಸು ಬಯಸಿದ ಬಸವಾದಿ ಶಿವ ಶರಣರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಉಳವಿ ಚನ್ನಬಸವೇಶ್ವರ ಧರ್ಮ ಫಂಡ ಸಂಸ್ಥೆ ವತಿಯಿಂದ ಶುಕ್ರವಾರ ಬಸವೇಶ್ವರ ಜಯಂತಿಯು ಅದ್ದೂರಿಯಾಗಿ ನಡೆಯಿತು.

ಬೆಳಗ್ಗೆ 7ಕ್ಕೆ ಅವಿರಳಜ್ಞಾನಿ ಶ್ರೀ ಚನ್ನಬಸವಣ್ಣನವರಿಗೆ ರುದ್ರಾಭಿಷೇಕ ಹಾಗೂ ಎಲೆ ಪೂಜೆ ನೆರವೇರಿಸಿ ಷಟಸ್ಥಲ ಧ್ವಜಾರೋಹಣ ನೆರವೇರಿತು. ನಂತರ ಬಸವಣ್ಣನವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಭವ್ಯ ಮಂಟಪದ ಮೂಲಕ ಜೊಡೆತ್ತುಗಳ ಹಾಗೂ ಬಸವ ಭಕ್ತರ ಸಮ್ಮುಖದಲ್ಲಿ ಚನ್ನಬಸವಣ್ಣನವರ ದೇವಸ್ಥಾನದಿಂದ ಮೆರವಣಿಗೆ ಹೊರಟಿತು.

ಸ್ಟೇಶನ್ ರಸ್ತೆ, ಮಹಿಷಿ ರಸ್ತೆ, ಬಾಗಲಕೋಟ ಪೆಟ್ರೋಲ್ ಪಂಪ, ಹೊಸಯಲ್ಲಾಪೂರ ರಸ್ತೆ, ಕಾಮನಕಟ್ಟಿ, ನಗರೇಶ್ವರ ದೇವಸ್ಥಾನ, ಹೆಬ್ಬಳ್ಳಿ ಅಗಸಿ, ಶಿವಾಜಿ ರೋಡ್‌, ಗಾಂಧಿಚೌಕ್‌, ಕೆಸಿಸಿ ಬ್ಯಾಂಕ್ ರಸ್ತೆ, ಸುಭಾಸ ರಸ್ತೆ, ಜುಬಲಿ ವೃತ್, ಕೋರ್ಟ್‌ ಸರ್ಕಲ್ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ಭಕ್ತರು ಜೈ ಬಸವೇಶ, ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ. ಸಕಲರಿಗೆ ಲೇಸು ಬಯಸಿದ ಬಸವಾದಿ ಶಿವ ಶರಣರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.ಮೆರವಣಿಗೆಯಲ್ಲಿ ಜೊಡೆತ್ತುಗಳು, ಕರಡಿ ಮಜಲು, ಡೊಳ್ಳು, ಜಗ್ಗಲಗಿ, ಭಜನಾ ಮೇಳ, ವಾದ್ಯ ಮೇಳ, ಕಲಾ ತಂಡ, ಸ್ಥಬ್ದಚಿತ್ರ ಸೇರಿದಂತೆ ವಿವಿಧ ವೇಷ ಭೂಷಣದ ಕಲಾವಿದರು ಭಾಗವಹಿಸಿದ್ದರು. ಮಾರ್ಗ ಮಧ್ಯೆ ಸ್ವಾಮಿ ವಿವೇಕಾನಂದ, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿತು.ಮೆರವಣಿಗೆ ದೇವಸ್ಥಾನ ತಲುಪಿ ಮಂಗಲ ಮಾಡಿ, ವಚನ ಸಂಗೀತ ನೆರವೇರಿಸಿ ಮಹಾಪ್ರಸಾದ ಏರ್ಪಡಿಸಿತು. ಈ ಸಂದರ್ಭದಲ್ಲಿ ಶ್ರೀ ಉಳವಿ ಚನ್ನಬಸವೇಶ್ವರ ಧರ್ಮ ಫಂಡ ಸಂಸ್ಥೆ ಅಧ್ಯಕ್ಷ ಕೆ.ಎಂ. ಗೌಡರ, ಉಪಾಧ್ಯಕ್ಷ ಡಾ. ಎಸ್.ಆರ್. ಜಂಬಗಿ, ಗೌರವ ಕಾರ್ಯದರ್ಶಿ ರಾಮಣ್ಣ ಸುಳ್ಳದ, ಬಿ.ಎಂ. ಸೂರಗೊಂಡ, ವಿಜೇಂದ್ರ ಪಾಟೀಲ, ಟಿ.ಎಸ್. ಪಾಟೀಲ, ಸುರೇಶ ಹೆಗ್ಗೆರಿ, ಎನ್.ಬಿ. ಗೋಲಣ್ಣವರ, ರಾಜು ಕೋಟಿ, ಜಿ.ಬಿ.ಅಳಗವಾಡಿ ಮತ್ತಿತರರು ಇದ್ದರು.

ಬಸವಣ್ಣನವರ ದಾಸೋಹ ಪರಿಕಲ್ಪನೆ ವೃತ್ತಿಯಲ್ಲಿ ಅಳವಡಿಸಿಕೊಳ್ಳಲಿ

ಕನ್ನಡಪ್ರಭ ವಾರ್ತೆ ಧಾರವಾಡಎಲ್ಲ ಜಾತಿ, ಧರ್ಮ, ಪಂಗಡದವರು ಸೇರಿ ಸಹಬಾಳ್ವೆ ನಡೆಸಬೇಕಾದುದು ಇಂದಿನ ಅಗತ್ಯ. ಬಸವಣ್ಣನವರ ದಾಸೋಹ ಪರಿಕಲ್ಪನೆಯನ್ನು ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ ಸಾಂಸ್ಕೃತಿಕ ನಾಯಕ ಮರುನಾಮಕರಣದಲ್ಲಿ ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರ ತತ್ವದಂತೆ ಎಲ್ಲರೂ ಜೊತೆಗೂಡಿ ಕಾಯಕ ಮಾಡಬೇಕಾದ ಅಗತ್ಯವಿದೆ. ಬಸವಣ್ಣನವರು ಹಾಕಿಕೊಟ್ಟ ಸಂಸ್ಕೃತಿ ಎಲ್ಲರೂ ಅನುಸರಿಸಬೇಕಾಗಿದೆ. ಎಲ್ಲರೂ ಸೇರಿ ಸಮನಾಗಿ ಕಾಯಕ ಮಾಡಬೇಕಾಗಿದೆ ಎಂದರು.ದಾರ್ಶನಿಕರ ಶರಣ ಸಂಸ್ಕೃತಿ ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಸಮಾಜದಲ್ಲಿನ ಮೇಲು ಕೀಳು ಕಿತ್ತೊಗೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ ಚೆನ್ನಪ್ಪ ಮಾತನಾಡಿ, ಶತ-ಶತಮಾನದಿಂದಲೂ ಬಸಣ್ಣವರನ್ನು ನೆನಪಿಸಿಕೊಳ್ಳುತ್ತಿರುವುದು ಅವರ ಸಾಮಾಜಿಕ ಕ್ರಾಂತಿ ಕಾರಣ. ಅನುಭವ ಮಂಟಪದ ಮೂಲಕ ಸಮಾನತೆಗೆ ಹೆಚ್ಚು ಒತ್ತು ನೀಡಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಜೀವನದ ಸಂದೇಶ ಅಡಗಿದೆ. ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಿದೆ ಎಂದರು.ಮೌಲ್ಯಮಾಪನ ಕುಲಸಚಿವರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ್ ಮಾತನಾಡಿ, ಬಸವೇಶ್ವರ ಅವರ ತತ್ವದ ಅನುಗುಣವಾಗಿ ಇಂದು ಬಸವ ಉದ್ಯಾನವನಕ್ಕೆ ಸಫಾಯಿ ಕರ್ಮಚಾರಿಯಿಂದ ಉದ್ಘಾಟಿಸಿದ್ದು ಶ್ಲಾಘನೀಯ. ಅಲಕ್ಷಿತ ಸಮುದಾಯದ ಏಳ್ಗೆಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಮಹಾನ್ ದಾರ್ಶನಿಕರು ಎಂದರು.

ಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರತರಾದ ಎಲ್ಲರೂ ಬಸವಣ್ಣನವರನ್ನು ಅಧ್ಯಯನ ಮಾಡಬೇಕಾಗಿದೆ ಎಂದರು. ಪೌರ ಕಾರ್ಮಿಕರಾದ ಲಕ್ಷ್ಮೀ ಬಳ್ಳಾರಿ ಇದ್ದರು. ಇದೇ ಸಂದರ್ಭದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಚನಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಬಿ.ಎಚ್ .ನಾಗೂರ, ಪ್ರಾಚಾರ್ಯರಾದ ಡಾ. ಡಿ.ಬಿ. ಕರಡೋಣಿ , ಡಾ. ಎಂ.ಎಸ್. ಸಾಳುಂಕೆ, ಜಿಮಖಾನಾದ ಉಪಾಧ್ಯಕ್ಷರಾದ ಡಾ. ವಿ.ಬಿ. ಸಾವಿರಮಠ, ಡಾ. ಜಗದೀಶ್ ಗುಡಗೂರ, ಡಾ. ಆರ್.ಬಿ. ಬೂದಿಹಾಳ್, ಡಾ. ಮುಕುಂದ ಲಮಾಣಿ, ಡಾ. ಎಂ.ಆರ್. ಹಿರೇಮಠ, ಶಂಕರ ಕುಂಬಿ, ಶಿವಾನಂದ ಬಾವಿಕಟ್ಟಿ ಇದ್ದರು.