ಕುಷ್ಟಗಿ: ಬಸವಣ್ಣನವರ ವಚನಗಳು ಮಾನವ ಬದುಕಿನುದ್ದಕ್ಕೂ ಮಾರ್ಗದರ್ಶಿಯಾಗಿವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ತಾಲೂಕಾಡಳಿತ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬಸವಣ್ಣನವರು ರಚಿಸಿಕೊಟ್ಟಿರುವ ವಚನಗಳು ಎಲ್ಲ ಕಾಲಕ್ಕೂ ಸತ್ಯವಾಗಿದ್ದು ಸಾರ್ವಕಾಲಿಕವಾಗಿವೆ ಎಂದರು.
ಸಮಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಮಾಡಿರುವ ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ತಿಳಿದುಕೊಂಡು ಸ್ವಯಂಪ್ರೇರಿತರಾಗಿ ನಾವು ಜಯಂತಿಯಲ್ಲಿ ಭಾಗವಹಿಸಬೇಕು. ಕೇವಲ ಆಚರಣೆಗೆ ಸೀಮಿತಗೊಳಿಸದೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ಉತ್ತಮ ಬದುಕು ಸಾಗಿಸುತ್ತ ಮುನ್ನಡೆಯಬೇಕು ಎಂದರು.ಬಸವ ಧರ್ಮ ಎಲ್ಲ ಧರ್ಮಕ್ಕೂ ಅನ್ವಯವಾಗಲಿದೆ. ಒಂದು ಜಾತಿ, ಧರ್ಮಕ್ಕೆ ಸೀಮಿತಗೊಂಡಿಲ್ಲ. ಎಲ್ಲ ಮಾನವ ಧರ್ಮಕ್ಕೂ ಅನ್ವಯವಾಗಲಿದ್ದು, ನಮ್ಮಲ್ಲಿನ ಮೌಢ್ಯವನ್ನು ಕಿತ್ತೆಸೆದು ಬಸವಾದಿ ಶಿವಶರಣರು ಕೊಟ್ಟಿರುವ ವಚನಗಳನ್ನು ಅರಿತುಕೊಂಡು ಜೀವಿಸಿ ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರವಚನಕಾರ ಲಾಲ್‌ಸಾಬ ಕಂದಗಲ್ ಮಾತನಾಡಿ, ಬಸವಣ್ಣನವರು ಸಮಾಜದಲ್ಲಿದ್ದ ಜಾತೀಯತೆ, ಅಸಮಾನತೆ, ಮೂಢನಂಬಿಕೆಗಳ ವಿರುದ್ಧ 12ನೇ ಶತಮಾನದಲ್ಲಿ ಮಹತ್ವದ ಸಾಮಾಜಿಕ ಹೋರಾಟ ನಡೆಸಿದ ಮಹಾನ್ ಸಮಾಜ ಸುಧಾರಕ. ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ.
ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕು ದೊರಕಬೇಕು ಎಂಬ ಧೋರಣೆಯನ್ನು ಅವರು ಪ್ರತಿಪಾದಿಸಿದರು. ಮಹಿಳಾ ಶರಣರಿಗೂ ಸಮಾನ ಸ್ಥಾನಮಾನ ನೀಡಿ ಸಮಾಜದಲ್ಲಿ ಸಮಾನತೆಯ ಚಿಂತನೆ ಬೆಳೆಸಿದರು.
ಕಾಯಕವೇ ಕೈಲಾಸ ಹಾಗೂ ದಾಸೋಹ ತತ್ವಗಳ ಮೂಲಕ ದುಡಿಯುವ ಜೀವನವೇ ಶ್ರೇಷ್ಠ ಎಂಬ ಸಂದೇಶವನ್ನು ಬಸವಣ್ಣರು ನೀಡಿದರು ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೂ ಪ್ರೇರಣೆಯಾಗಿವೆ ಎಂದರು.ಸಿಪಿಐ ವಿಶ್ವನಾಥ ಹಿರೇಗೌಡರ ಮಾತನಾಡಿದರು, ಪ್ರಾಸ್ತಾವಿಕವಾಗಿ ಹಂಪಣ್ಣ ತಾವರಗೇರಾ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ. ಬಸವರಾಜ, ತಹಸೀಲ್ದಾರ ಅಶೋಕ ಶಿಗ್ಗಾಂವಿ ಬಿಇಒ ಉಮಾದೇವಿ ಬಸಾಪುರು, ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪನವರು, ಪುರಸಭೆ ಮಾಜಿ ಸದಸ್ಯ ವಸಂತ ಮೇಲಿನಮನಿ, ಗೌರಮ್ಮ ಕುಡತೀನಿ, ಶಂಕರಗೌಡ ವಕೀಲರು, ಸಂಗನಗೌಡ ವಕೀಲರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಮಹಾಂತೇಶ ವಂಕಲಕುಂಟಿ, ಮಹಾಂತೇಶ ತೆಂಗಿನಕಾಯಿ, ಚಿದಾನಂದ ಬಡಿಗೇರ ತಂಡದವರು ವಚನ ಪ್ರಾರ್ಥನೆಗೈದರು. ಬಸವ ಸಮಿತಿ ಕಾರ್ಯದರ್ಶಿ ಮಹೇಶ ಹಡಪದ ಅವರು ಗಣ್ಯರನ್ನು ಸ್ವಾಗತಿಸಿದರು. ತಿಪ್ಪಣ್ಣ ತಾವರಗೇರಾ ನಿರೂಪಿಸಿದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.ವಚನಕಟ್ಟು ಮೆರವಣಿಗೆ
ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯಲ್ಲಿ 101 ಮಹಿಳೆಯರು ವಚನ ಕಟ್ಟುಗಳನ್ನು ತಲೆ ಮೇಲೆ ಹೊತ್ತುಕೊಂಡು ಬಸವ ಭವನದಿಂದ ಮಾರುತಿ ವೃತ್ತ, ಕನಕದಾಸ ವೃತ್ತ, ಪುರಸಭೆ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಬಸವ ಭವನವನ್ನು ತಲುಪಿದರು. ಮೆರವಣಿಗೆಯಲ್ಲಿ ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ ದೋಟಿಹಾಳ, ದೊಡ್ಡಬಸವನಗೌಡ ಬಯ್ಯಾಪೂರ ಸೇರಿದಂತೆ ಅಧಿಕಾರಿಗಳು ಹಾಗೂ ಬಸವಣ್ಣನ ಅನುಯಾಯಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.