ಹಾನಗಲ್ಲ: ಜಾತ್ಯತೀತ ಸಮಾಜದ ಕನಸು ನನಸಾಗಿಸುವ ಜಗಜ್ಯೋತಿ ಬಸವಣ್ಣನವರ ಆಶಯ ಈಡೇರಲು ಈ ನಾಡಿನ ಪ್ರತಿ ವ್ಯಕ್ತಿ ಬಸವಣ್ಣನವರ ಸಿದ್ಧಾಂತ ಕಾಯಕ ಸತ್ಯದ ಶಕ್ತಿಯನ್ನು ಅರಿತು ನಡೆದರೆ ಮಾತ್ರ ಸಾಧ್ಯ. ಕಾಯಕವೇ ಕೈಲಾಸ ಎಂಬುದೇ ಸತ್ಯ ಎಂದು ಸಾಹಿತಿ ಡಾ. ಎಂ. ಪ್ರಸನ್ನಕುಮಾರ ತಿಳಿಸಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಶರಣ ಸಂಗಮ ಹಾಗೂ ಕಾಯಕ ದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಗತ್ತಿನ ಮೊದಲ ಸಂವಿಧಾನ ಕೊಟ್ಟವರು ಬಸವಣ್ಣನವರು. ಪ್ರಜಾ ಪ್ರಭುತ್ವದ ಸ್ಪಷ್ಟ ನಿಲುವು ಬಸವಣ್ಣನವರ ವೈಚಾರಿಕೆತೆಯಲ್ಲಿದೆ. ಇಂದು ಆಳುವವ ಆಳಿಸಿಕೊಳ್ಳುವವರಿಗೆ ಸಮಾನ ನೀತಿ ನಿಯಮಗಳು ಅನ್ವಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಅಸಮಾನತೆ ತಾಂಡವಾಡುತ್ತಿದೆ. ಎಲ್ಲರಿಗೂ ಸಮಾನ ಗೌರವ ಸೌಲಭ್ಯಗಳು ಲಭ್ಯವಾಗಬೇಕು. ಮೇಲು ಕೀಳಿಲ್ಲದೆ ಸಮಾಜ ವ್ಯವಸ್ಥೆ ನಮ್ಮದಾಗಬೇಕು. ಬಸವಣ್ಣನವರ ದಾಸೋಹದ ಕಲ್ಪನೆ ಜಾರಿಯಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಚಿಕ್ಕೇರಿ, ನಮ್ಮ ಕೆಲಸಗಳಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯ. ಬಸವಣ್ಣನವರ ಕಾಯಕ ತತ್ವದ ನಡೆ ನಮ್ಮದಾದರೆ ನಿಜಕ್ಕೂ ಸಮಾನತೆ ಸಹಜವಾಗಿಯೇ ಬರಲು ಸಾಧ್ಯ. ತಾರತಮ್ಯ ವ್ಯವಸ್ಥೆಯಲ್ಲಿರುವ ನಮಗೆ ಸಮಾನತೆ ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಶೋಭಾ ಪಾಟೀಲ, ಬಸವಣ್ಣನವರ ಕಾಯಕ ಧರ್ಮವನ್ನು ಶಾಲೆ ಕಾಲೇಜುಗಳಲ್ಲಿ ಪ್ರಮುಖ ವಿಷಯವಾಗಿ ಅನುಭವಕ್ಕೆ ತಂದುಕೊಡುವ ತೀರ ಅಗತ್ಯವಿದೆ. ಸಮಾಜಮುಖಿ ಚಿಂತನೆಗೆ ಸಹಕಾರಿಯಾಗುವ ಯಾವುದೇ ವಿಚಾರಗಳನ್ನು ಅಲ್ಲಗಳೆಯದೆ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಬೇಕಾಗಿದೆ. ಈಗ ಉತ್ತಮ ಸಂಸ್ಕಾರದ ಅಗತ್ಯ ಪ್ರತಿ ಮಗುವಿಗೆ ಇದೆ. ಅದನ್ನು ಸಾಕಾರ ಮಾಡಲು ಇಂತಹ ಕಾರ್ಯಕ್ರಮಗಳು ಶಾಲೆ ಕಾಲೇಜುಗಳಲ್ಲಿ ನಡೆಯುವಂತಾಗಬೇಕು ಎಂದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ ಪ್ರಾಸ್ತಾವಿಕ ಮಾತನಾಡಿದರು. ಅಕ್ಕಮ್ಮ ಶೆಟ್ಟರ, ವಿಕಾಸ ಬೈಲಪ್ಪನವರ, ನೇಹಾ ಬೈಲಪ್ಪನವರ, ಸಾನ್ವಿ ಬೈಲಪ್ಪನವರ, ಶ್ರೀನವಿ ಬೈಲಪ್ಪನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನ್ಯಾಯವಾದಿ ಎಂ.ಎಸ್. ಹುಲ್ಲೂರ ಸ್ವಾಗತಿಸಿದರು. ಉಪಾಧ್ಯಕ್ಷ ಶಂಭುಲಿಂಗಯ್ಯ ಹೇಮಗಿರಿಮಠ ಸ್ವಾಗತಿಸಿದರು. ಸುಭಾಸ ಹೊಸಮನಿ ನಿರೂಪಿಸಿದರು.