ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಬಸವರಾಜ ದಢೇಸ್ಗೂರು ಆಯ್ಕೆ

| Published : Jan 30 2025, 12:32 AM IST

ಸಾರಾಂಶ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಸವರಾಜ ದಢೋಸ್ಗೂರು ಅವರನ್ನು ಬುಧವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

- ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ । ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನಿತರ ಬೇಸರಕನ್ನಡಪ್ರಭ ವಾರ್ತೆ ಕೊಪ್ಪಳ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಸವರಾಜ ದಢೋಸ್ಗೂರು ಅವರನ್ನು ಬುಧವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನವೀನ್ ಗುಳಗಣ್ಣವರ ಜಿಲ್ಲಾಧ್ಯಕ್ಷರಾಗಿ ಕೇವಲ ಒಂದು ವರ್ಷ ಆಗಿರುವಾಗಲೇ ಅವರನ್ನು ಹಿಂದೆ ಸರಿಸಿ, ಈಗ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಬಿಜೆಪಿ ಪಾಳೆಯದಲ್ಲಿ ಭಾರಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ನವೀನ್ ಗುಳಗಣ್ಣವರ ರಾಜೀನಾಮೆ ನೀಡಿರಲಿಲ್ಲ ಮತ್ತು ಬದಲಾವಣೆಗೆ ಕಾರಣವೂ ಇರಲಿಲ್ಲ. ಆದರೆ, ರಾಜ್ಯಾದ್ಯಂತ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿರುವ ಹಿನ್ನೆಲೆ ಜಿಲ್ಲೆಯಲ್ಲಿಯೂ ಬಿಜೆಪಿ ತನ್ನ ಜಿಲ್ಲಾಧ್ಯಕ್ಷರನ್ನು ಬದಲಾಯಿಸಿದೆ.

ಬಸವರಾಜ ದಢೇಸ್ಗೂರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ವಿಧಾನಪರಿಷತ್‌ ಸದಸ್ಯ ಹನುಮಂತ ನಿರಾಣಿ ಘೋಷಣೆ ಮಾಡಿದರು.

ಹಾಲಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣ ಅವರೇ ಸೂಚನೆ ಮಾಡಿದರು. ಅದಾದ ಮೇಲೆ ಪ್ರಕ್ರಿಯೆ ಪೂರ್ಣಗೊಳಿಸಿ ಆಯ್ಕೆ ಮಾಡಲಾಗಿದೆ.

ಬಿಜೆಪಿಯಲ್ಲಿ ಕೊತಕೊತ:

ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಯ ಕುರಿತು ಕೊತ ಕೊತ ಕುದಿಯುತ್ತಿದೆ. ಅನೇಕ ಅಸಮಾಧಾನಿತರು ಆಯ್ಕೆ ಪ್ರಕ್ರಿಯೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಸಲ್ಲಿಸುವವರು ಸಾಕಷ್ಟು ಆಕಾಂಕ್ಷಿಗಳು ಇದ್ದರೂ ಸಹ ಪಕ್ಷದ ಹೈಕಮಾಂಡ್ ಸೂಚನೆಯಂತೆ ಎಲ್ಲವೂ ನಡೆದಿದ್ದರಿಂದ ಬಸವರಾಜ ದಢೇಸ್ಗೂರು ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ, ಆಯ್ಕೆ ಪ್ರಕ್ರಿಯೆ ಬಗ್ಗೆ ಕೆಲವರಿಗೆ ಬೇಸರ ಇದೆ.

ಆಯ್ಕೆಗೆ ಕಾರಣಗಳು:

ರಾಜ್ಯಾದ್ಯಂತ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದಿಂದ ಒಬ್ಬರನ್ನಾದರೂ ಅಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು. ಬೇರೆಡೆ ಅವಕಾಶ ಇರಲಿಲ್ಲವಾದ್ದರಿಂದ ಕೊಪ್ಪಳದಲ್ಲಿ ಬಸವರಾಜ ದಢೇಸ್ಗೂರು ಅವರಿಗೆ ಅವಕಾಶ ನೀಡಲಾಗಿದೆ. ಹಾಗೆ ಹಾಲಿ ಅಧ್ಯಕ್ಷರಾಗಿ ನವೀನ್ ಗುಳಗಣ್ಣವರ ಅವರಿಗೆ ಇನ್ನು ಚಿಕ್ಕ ವಯಸ್ಸಿದ್ದು, ಮುಂದಿನ ದಿನಗಳ ಅವಕಾಶ ನೀಡಿದರಾಯಿತು ಎಂದು ಹಿಂದೆ ಸರಿಸಲಾಗಿದೆ.

ರಾಜ್ಯ ಪರಿಷತ್ ಗೆ ಪರಣ್ಣ:

ಇದೇ ವೇಳೆಯಲ್ಲಿ ರಾಜ್ಯ ಪರಿಷತ್ ಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಹಿನ್ನೆಲೆ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಲು ಪರಣ್ಣ ಅವರನ್ನು ರಾಜ್ಯ ಪರಿಷತ್ ಗೆ ಆಯ್ಕೆ ಮಾಡಲಾಗಿದೆ.