ಶಿಕ್ಷಕರ ಕ್ಷೇತ್ರದ ಏನೇ ಸಮಸ್ಯೆ ಬಂದರೂ ಥಟ್ಟನೆ ನೆನಪಾಗುವುದು ಬಸವರಾಜ ಹೊರಟ್ಟಿ ಅವರು. ಶಿಕ್ಷಕರ, ಆ ಕ್ಷೇತ್ರದಲ್ಲಿ ಏನೆಲ್ಲ ಸಮಸ್ಯೆಗಳಿವೆ. ಏನೆಲ್ಲ ಆಗಬೇಕಿದೆ ಎಂಬುದೆಲ್ಲವೂ ಹೊರಟ್ಟಿ ಅವರಿಗೆ ಅಕ್ಷರಶಃ ಕಂಠಪಾಠ.
ಹುಬ್ಬಳ್ಳಿ:
"ನನ್ನ ಬಳಿ ಸಹಾಯ ಕೇಳಲು ಬಂದರೆ ಇಂದೇ ನಾನು ಸಹಾಯ ಮಾಡ್ತೇನೆ. ಯಾಕೆಂದ್ರ ನಾಳೆ ನನಗೆ ಸಹಾಯ ಮಾಡಲು ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ.. "ಇಂಥದೊಂದು ಧ್ಯೇಯವಾಕ್ಯದಿಂದಲೇ ಬರೋಬ್ಬರಿ 45 ವರ್ಷಗಳ ಸಹಾಯ ಅರಸಿ ಬಂದವರಿಗೆ ನೆರವು ನೀಡುತ್ತಿರುವುದು ಮುತ್ಸದ್ದಿ ರಾಜಕಾರಣಿ, ಮೇಲ್ಮನೆಯ ಸಭಾಪತಿ ಬಸವರಾಜ ಹೊರಟ್ಟಿ ಅವರು.ಶಿಕ್ಷಕರ ಜೀವಧ್ವನಿ, ಉತ್ತರ ಕರ್ನಾಟಕದ ಗಟ್ಟಿಧ್ವನಿ, ಹೋರಾಟದ ಬದುಕಿನಿಂದ ನುಡಿದಂತೆ ನಡೆದು ಜನರ ಪಾಲಿಗೆ ಬಸವ "ರಾಜ " ರಾಗಿ ಮಿಂಚುತ್ತಿದ್ದಾರೆ ಹೊರಟ್ಟಿ.
ಶಿಕ್ಷಕರ ಕ್ಷೇತ್ರದ ಏನೇ ಸಮಸ್ಯೆ ಬಂದರೂ ಥಟ್ಟನೆ ನೆನಪಾಗುವುದು ಬಸವರಾಜ ಹೊರಟ್ಟಿ ಅವರು. ಶಿಕ್ಷಕರ, ಆ ಕ್ಷೇತ್ರದಲ್ಲಿ ಏನೆಲ್ಲ ಸಮಸ್ಯೆಗಳಿವೆ. ಏನೆಲ್ಲ ಆಗಬೇಕಿದೆ ಎಂಬುದೆಲ್ಲವೂ ಹೊರಟ್ಟಿ ಅವರಿಗೆ ಅಕ್ಷರಶಃ ಕಂಠಪಾಠ. ನಾಲ್ಕೂವರೆ ದಶಕಗಳಿಂದ ಈ ಕ್ಷೇತ್ರದಿಂದ 8 ಬಾರಿ ಆರಿಸಿ ಗೆದ್ದು ಬೀಗಿದವರು ಅಲ್ಲದೇ, ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡವರು. ಆನೆ ನಡೆದಿದ್ದೆ ದಾರಿ ಎಂಬಂತೆ ಶಿಕ್ಷಕರ ಮತ ಕ್ಷೇತ್ರದಲ್ಲಿ ತಮ್ಮ ಪಥ ನಿರ್ಮಿಸಿಕೊಂಡವರು.ಹೊರಟ್ಟಿ ಅವರ ಸಂಘರ್ಷ, ಹೋರಾಟದ ಮೂಲಕವೇ ರಾಜಕೀಯ ಕ್ಷೇತ್ರದ ಜಾಗತಿಕ ಭೂಪಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಹಿಮಾಲಯದಂತೆ ಗೋಚರಿಸುತ್ತಿದ್ದಾರೆ. ಅವರ 45 ವರ್ಷಗಳ ಅವರ ರಾಜಕೀಯ ಜೀವನದಲ್ಲಿ ಪ್ರತಿಹೆಜ್ಜೆ, ಸಾಧನೆಯೂ ಮೈಲುಗಲ್ಲುಗಳಾಗಿ ಉಳಿದಿವೆ; ಉಳಿಯುತ್ತಿವೆ. ಇಡೀ ಬದುಕನ್ನೇ ಶಿಕ್ಷಕರಿಗೆ, ಶಿಕ್ಷಣಕ್ಕೆ ಅರ್ಪಿಸಿರುವ ಅತ್ಯದ್ಭುತ ಶಿಕ್ಷಣ ಪ್ರೇಮಿ. ಸದನದೊಳಗೆ, ಹೊರಗೆ ಶಿಕ್ಷಕರ ದನಿಯಾಗಿ ನಡೆಸಿದ ಒಂದೊಂದು ಹೋರಾಟವೂ ಇತಿಹಾಸದ ಪುಟಗಳಲ್ಲಿ ದಾಖಲಾರ್ಹವೆನಿಸಿವೆ. ನಾವು ಮಾತನಾಡಬಾರದು ನಮ್ಮ ಕೆಲಸಗಳೇ ಮಾತನಾಡಬೇಕು. ಕೆಲಸಗಳೇ ನಮ್ಮನ್ನು ಪರಿಚಯಿಸಬೇಕು ಎಂಬ ಮಾತಿನಂತೆ ಬದುಕುತ್ತಿರುವ ಹೊರಟ್ಟಿ ಅವರ ಜೀವನ ಮತ್ತು ಸಾಧನೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಿದೆ ಎಂದರೆ ಅತಿಶೋಯುಕ್ತಿಯಾಗಲಿಕ್ಕಿಲ್ಲ.ಜನನ- ಶಿಕ್ಷಣ:
ಇಂಥ ಮಹಾನ ಹೋರಾಟಗಾರ, ಶಿಕ್ಷಣ ಪ್ರೇಮಿ ಬಸವರಾಜ ಹೊರಟ್ಟಿಯವರು ಅಂದಿನ ವಿಜಾಪುರ ಹಾಗೂ ಈಗಿನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ 1946 ಏಪ್ರಿಲ್ 14ರಂದು ಶಿಕ್ಷಕರಾಗಿದ್ದ ತಂದೆ ಶಿವಲಿಂಗಪ್ಪ, ತಾಯಿ ಗುರವ್ವ ಅವರ ಉದರದಲ್ಲಿ ಜನಿಸಿದವರು. ಕಾಯಕಯೋಗಿ, ಬಸವ ತತ್ವಾದರ್ಶ ಅಳವಡಿಸಿಕೊಂಡು ಬದುಕು ಸಾಗಿಸುತ್ತಿದ್ದ ತಂದೆ, ಮಮತೆ, ವಾತ್ಸಲ್ಯಮೂರ್ತಿ, ಕರುಣಾಮತಿ ತಾಯಿ ಜತೆ ಬಸವರಾಜ ಬೆಳೆದರು. ಬಾಲ್ಯದಿಂದಲೂ ಚೂಟಿಯಾಗಿದ್ದ ಬಸವರಾಜ, ಆಟೋಟಗಳಲ್ಲಿ ಎಲ್ಲರಿಗಿಂತ ಮುಂದು.ಹುಟ್ಟೂರು ಯಡಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ, ತಾಲೂಕು ಕೇಂದ್ರ ಮುಧೋಳದಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದರು. ಪದವಿಪೂರ್ವ ಶಿಕ್ಷಣವನ್ನು ಬಾಗಲಕೋಟ ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಮಾಡಿದರು. ಆದರೆ, ಸೈನ್ಸ್‌ನಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ, ಕ್ರೀಡೆಯಲ್ಲಿ ಆಸಕ್ತಿ ಇದ್ದ ಬಸವರಾಜರಿಗೆ ಅಲ್ಲಿನ ಶಿಕ್ಷಕರು ಸಿಪಿಎಡ್ ಮಾಡಲು ಸಲಹೆ ಮಾಡಿದರು. ಅವರ ಸಲಹೆಯಂತೆ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಸಿಪಿಎಡ್ ಮುಗಿಸಿ, ಹುಬ್ಬಳ್ಳಿ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಬಿಎ ಪದವಿ, 1973ರಲ್ಲಿ ಬೆಂಗಳೂರಿನ ಸರಕಾರಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಬಿಪಿಎಡ್ ಪದವಿ ಪಡೆದರು. ಶಿಕ್ಷಕರಾಗಿ ಸೇವೆ... ಬಿಎ ಪದವಿ ಓದುವಾಗಲೇ ಫಾತಿಮಾ ಸ್ಕೂಲ್‌ನಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಿಪಿಇಡಿ ಸರ್ಕಾರಿ ಸೀಟು ಸಿಕ್ಕ ನಂತರ ಅದನ್ನು ಬಿಟ್ಟು ಬಿಪಿಇಡಿ ಮುಗಿಸಿ 1975ರಲ್ಲಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಶಿಕ್ಷಕರಾಗಿದ್ದಾಗಲೇ ನಿಯೋಜನೆ ಮೇಲೆ ಎಂಪಿಇಡಿ ಪದವಿ ಪಡೆದರು.ಹೋರಾಟದಿಂದಲೇ ಹೊರಟ್ಟಿ
ದೈಹಿಕ ಶಿಕ್ಷಕರಾಗಿ ಏನೋ ವೃತ್ತಿ ಆರಂಭಿಸಿದರು. ಆಗಲೇ ಶಿಕ್ಷಕರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಬಸವರಾಜ ಹೊರಟ್ಟಿಯವರು ಕೇವಲ ಐದು ವರ್ಷಗಳ ಕಾಲ ಮಾತ್ರ ಶಿಕ್ಷಕರಾಗಿದ್ದರು. 80ರ ದಶಕದಲ್ಲಿ ಶಾಲಾ ಶಿಕ್ಷಕರಿಗಾಗಲಿ, ಖಾಸಗಿ ಆಡಳಿತ ಮಂಡಳಿ ಅವರನ್ನು ಬಹಳಷ್ಟು ಕೀಳಾಗಿ ಕಾಣುವ ಕಾಲ, ಶಿಕ್ಷಕ ಕ್ಷೇತ್ರದ ಜನಪ್ರತಿನಿಧಿಗಳಿದ್ದರೂ ಶಿಕ್ಷಕರಿಗೆ, ಶಿಕ್ಷಣಕ್ಕೆ ಯಾವುದೇ ಕಾಳಜಿ ತೋರುತ್ತಿರಲಿಲ್ಲ. ಆಗ ಶಿಕ್ಷಕರ ಸಂಘದ ಅವಶ್ಯಕತೆ ಮನಗಂಡು 1976ರಲ್ಲಿ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಸ್ಥಾಪನೆಯಾಯಿತು. ಮುಂದಿನ ನಾಲ್ಕೈದು ವರ್ಷ ಸಂಘ, ಸಂಘಟನೆ ಬಲವರ್ಧನೆ ಮಾಡಲಾಯಿತು. ಹುಬ್ಬಳ್ಳಿಯ ಕೃಪಾದಾನಂ ಹೈಸ್ಕೂಲಿನ ಶ್ರೀ ಬಾಲಿರಡ್ಡಿ ಅವರನ್ನು ಅಮಾನತ್ತುಗೊಳಿಸಲಾಗಿತ್ತು. ಆಗಿನ್ನು ಕೀಶೋರಾವಸ್ಥೆಯಲ್ಲಿ ಸಂಘ ಸಿಡಿದೆದ್ದ ಹೋರಾಟಕ್ಕೆ ದುಮುಕಿತು. ಆ ಹೋರಾಟದಲ್ಲಿ ಯಶಸ್ವಿಯಾಗಿ ಶಿಕ್ಷಕ ಸಮುದಾಯಕ್ಕೆ ಸಂಘಟನೆ ಅವಶ್ಯಕತೆಯನ್ನು ಮನಗಾನಿಸಿಕೊಟ್ಟಿತು. ಇದೇ ಸಂದರ್ಭದಲ್ಲಿ ಸಂಘಟನೆಯು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳಿಗೆ ವಿಸ್ತಾರಗೊಂಡು ಪ್ರಬಲ ಸಂಘವಾಗಿ ರೂಪಗೊಂಡಿತು.ಸಂಘಟನೆ ಮುಂಚೂಣಿಯಲ್ಲಿದ್ದ ಬಸವರಾಜ ಹೊರಟ್ಟಿ ಅವರ ದೂರದೃಷ್ಟಿ, ಕ್ರಿಯಾಶೀಲ ಮನಸ್ಸು, ನ್ಯಾಯ ನಿಷ್ಟುರತನದಿಂದಾಗಿ ಹೊರಟ್ಟಿ ಸೈ ಎನಿಸಿಕೊಂಡರು. ಯಾವುದೇ ಹೋರಾಟ ಕೈಗೆತ್ತಿಕೊಂಡಾಗಲೂ ಏನೇ ಅಡೆತಡೆಗಳು ಬಂದರೂ ಅಲುಗಾಡದೇ ಕಲ್ಲುಬಂಡೆಯಂತೆ ಗಟ್ಟಿಯಾಗಿ ನಿಂತು ನ್ಯಾಯ ಕೊಡಿಸುವವರೆಗೆ ಹಿಂದೆ ಸರಿಯುತ್ತಿರಿರಲಿಲ್ಲ. ಹೀಗಾಗಿ ಹೋರಾಟ ಮತ್ತು ಹೊರಟ್ಟಿ ಒಂದಕ್ಕೊಂದು ಬಿಡಿಸಲಾರದ ನಂಟಿನಂತೆಯೇ ಬೆಳೆದು ಬಂದವು. ಮುಂದೆ ಹೊರಟ್ಟಿ ಇದ್ದಲ್ಲಿ ಹೋರಾಟ, ಹೋರಾಟ ನಡೆದಲ್ಲಿ ಹೊರಟ್ಟಿ ಎನ್ನುವ ಮಾತು ಶಿಕ್ಷಕ ವಲಯದಲ್ಲಿ ಜನಜನಿತವಾಯಿತು.ಗೋಕಾಕ ಚಳುವಳಿಯಲ್ಲಿ ಸಹ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಗತಿಪರ ಚಿಂತಕರ ಜತೆಗೆ ಹೆಗಲು ನೀಡಿದ್ದರು.
ಪರಿಷತ್‌ಗೆ ಹೊರಟ್ಟಿ ಶಿಕ್ಷಕರ ಸಂಘಟನೆ ಮೂಲಕ ಹೋರಾಟ ಮಾಡುತ್ತಿರುವಾಗಲೇ ತಾವು ಒಬ್ಬ ನಾಯಕನಾಗಿ ಬೆಳೆದಿದ್ದು ಸ್ವತಃ ಹೊರಟ್ಟಿಯವರಿಗೂ ಗೊತ್ತಿರಲಿಲ್ಲ. ಶಿಕ್ಷಕ ಮತಕ್ಷೇತ್ರ ಶಿಕ್ಷಕರಿಗೆ ಮೀಸಲು ಇರಬೇಕು ಎನ್ನುವ ಮಾತು ಕೇಳಿ ಬಂದಾಗ, ಸಂಘಟನೆ ಸ್ನೇಹಿತರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ 1980ರಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದರು. ಆಗ ಶಿಕ್ಷಕರ ಮತಕ್ಷೇತ್ರ ಶಿವಮೊಗ್ಗದಿಂದ ಹಿಡಿದು ಬಳ್ಳಾರಿ, ಧಾರವಾಡ ಮತ್ತು ರಾಯಚೂರ ಜಿಲ್ಲೆಯನ್ನೊಳಗೊಂಡಿತ್ತು. ರಾಜಕೀಯವಾಗಿ ಗಾಡ್‌ಪಾದರ್ ಇಲ್ಲದಿದ್ದರೂ ಸ್ನೇಹಿತರ ಒತ್ತಾಯಕ್ಕೆ ಕಣಕ್ಕಿಳಿದಿದ್ದ ಹೊರಟ್ಟಿ ಮೊದಲ ಪ್ರಯತ್ನದಲ್ಲೇ 243 ಮತಗಳಿಂದ ಆಯ್ಕೆಯಾದರು.ಅದಾದ ಮೇಲೆ ಹಿಂದಿರುಗಿ ನೋಡಲೇ ಇಲ್ಲ. ಮುಂದೆ ಇದೇ ಕ್ಷೇತ್ರದಿಂದ 1986, 1992, 1998, 2004, 2010, 2016, 2022 ಸತತ ಎಂಟು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ದೇಶದ ಅಷ್ಟೇ ಅಲ್ಲ ವಿಶ್ವ ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.ಮುಂದುವರಿದ ಹೋರಾಟ:ಪ್ರಥಮ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರವೂ ಸಂಘದ ಜತೆ ನಿಂತು ಹೋರಾಟ ಮಾಡುವ ಮೂಲಕ ತನ್ನ ಸದಸ್ಯರು ಸೇವಾ ಭದ್ರತೆ, ತ್ರಿವಿಧ ಯೋಜನೆ ಲಾಭ, ಆಡಳಿತ ಮಂಡಳಿಗಳ ಶೋಷಣೆ ವಿರುದ್ಧ ಒಳಗಿದ್ದೆ ಹೋರಾಟ ನಡೆಸಿ ಯಶಸ್ವಿಗೊಳಿಸಿದರು.
1983ರಲ್ಲಿ ಶಿಗ್ಲಿ ಹೈಸ್ಕೂಲಿನ ಹೋರಾಟದಿಂದ 12 ಜನ ಶಿಕ್ಷಕರಿಗೆ ಮರು ಜನ್ಮ ದೊರೆಯಿತು. ಇದೇ ಅವಧಿಯಲ್ಲಿ ಬೇರೆ ಬೇರೆ ಹಂತದ ಶಿಕ್ಷಕರ ಸಂಘಟನೆಗಳಿಗೆ ಚಾಲನೆ ನೀಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. 1986ರಿಂದ 92 ರವರೆಗೆ ಪ್ರೌಢಶಾಲಾ ಶಿಕ್ಷಕರ ವೇತನ ತಾರತಮ್ಯ ನಿವಾರಣೆ, ಗ್ರೇಡ್ -1 ಸಹಶಿಕ್ಷಕರ ಹುದ್ದೆಗೆ ಬಡ್ತಿ, ಗುತ್ತಿಗೆ ಶಿಕ್ಷಕರ ಖಾಯಂ, ಎಸ್ಸೆಸ್ಸೆಲ್ಸಿ ವೌಲ್ಯಮಾಪಕರ ಸಂಭಾವನೆ, ಭತ್ಯಗಳ ಪರಿಷ್ಕರಣೆ, ಅರ್ಥಿಕ ಮಿತವ್ಯಯ ಸಡಿಲಿಕೆ, ಪದವಿ ಪೂರ್ವ ಮಂಡಳಿ ರದ್ದತಿ ಸೇರಿದಂತೆ ಹತ್ತು ಹಲವು ಬೇಡಿಕೆಗಳಿಗೆ ಹೋರಾಟ ನಡೆಸಿ ಎಲ್ಲ ಬೇಡಿಕೆಗಳ ಈಡೇರಿಸುವಲ್ಲಿ ಯಶಸ್ವಿಯಾದರು.ಸಚಿವರಾಗಿ ಹಲವು ಮೈಗಲ್ಲು:
2005ರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ವಿಜ್ಞಾನ ತಂತ್ರಜ್ಞಾನ, ಕಾನೂನು ಹಾಗೂ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿ ಅವರು, ಖಾಲಿ ಇದ್ದ ಶಿಕ್ಷಕರ ಹುದ್ದೆ ಭರ್ತಿ, ಪದವಿಪೂರ್ವ ಕಾಲೇಜುಗಳಲ್ಲಿ ನಿಧನ, ನಿವೃತ್ತಿ, ರಾಜೀನಾಮೆ, ವರ್ಗಾವಣೆಯಿಂದ ತೆರವಾದ ಹುದ್ದೆಗಳನ್ನು ಅನುದಾನ ರಹಿತ ಹುದ್ದೆ ಪರಿಗಣಿಸುವುದನ್ನು ನಿಲ್ಲಿಸಿ ಹುದ್ದೆ ಭರ್ತಿಗೆ ಅವಕಾಶ, 25ಕ್ಕಿಂತ ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆ ಮುಚ್ಚಬೇಕೆಂಬ ಆದೇಶ ರದ್ದುಗೊಳಿಸಿದರು. ಅದೇ ಶಾಲೆಯಲ್ಲಿ ಪುನಃ ಶಾಲೆ ಆರಂಭಿಸಿರುವುದು, ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆ, ಮುಖ್ಯವಾಗಿ ಶಿಕ್ಷಕರ ವರ್ಗಾವಣೆಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಶಿಕ್ಷಕರಿಗೆ ಪ್ರತ್ಯೇಕ ವರ್ಗಾವಣೆ ನೀತಿ ಜಾರಿಗೆ ತಂದಿರುವುದು ಹೊರಟ್ಟಿ ಅವರ ಕ್ರಾಂತಿಕಾರಕ ನಿರ್ಣಯವಾಗಿದೆ. ಈಗಲೂ ಶಿಕ್ಷಕರು ಯಾವುದೇ ಶಿಫಾರಸ್ಸು ಇಲ್ಲದೇ ಕೌನ್ಸಲಿಂಗ್ ಮೂಲಕ ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಆಗುತ್ತಿದ್ದಾರೆ ಎಂದರೆ ಅದಕ್ಕೆ ಹೊರಟ್ಟಿ ಅವರ ಕಾರ್ಯವೈಖರಿಯೇ ಕಾರಣ. ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ 20 ತಿಂಗಳಲ್ಲಿ ಇಲಾಖೆಗೆ 1462 ಕೋಟಿ ರೂ. ಹೆಚ್ಚಿನ ಅನುದಾನ ಪಡೆದಿರುವುದು ಇಲಾಖೆ ಬಗ್ಗೆ ಇರುವ ಅವರ ಕಾಳಜಿಗೆ ಸಾಕ್ಷಿಯಾಗಿದೆ.ಕಾನೂನು ಸಚಿವರಾಗಿದ್ದಾಗಲೇ ಹುಬ್ಬಳ್ಳಿಗೆ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತು ನೀಡಿರುವುದು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾಗ ಪ್ರತಿ ಜಿಲ್ಲೆಯಲ್ಲೊಂದು ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಿರುವುದು ಇವರ ಹೆಗ್ಗಳಿಕೆ.
ಸಭಾಪತಿಯಾಗಿ ಹೊರಟ್ಟಿಶಾಸಕ, ಸಚಿವನಾಗಿ ಕರ್ನಾಟಕವೇ ನೆನಪಿಡುವ ನೂರಾರು ಕೆಲಸಗಳನ್ನು ಮಾಡಿರುವ ಬಸವರಾಜ ಹೊರಟ್ಟಿ ಅವರು, ಮೂರು ಬಾರಿ ವಿಧಾನಪರಿಷತ್ ಸಭಾಪತಿಗಳಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಸಭಾಪತಿಯಾಗಿ ನೇರ ನುಡಿಯಿಂದಲೇ ಸದನವನ್ನು ಮುನ್ನಡೆಸಿರುವ ಹೊರಟ್ಟಿ ಅವರು, ಇದೇ ಸಂದರ್ಭದಲ್ಲಿ 177 ಶಿಕ್ಷಣ ಸಂಸ್ಥೆಗಳ ವೇತನಾನುದಾನಕ್ಕೆ ಒಳಪಡಿಸಿದ್ದಾರೆ. ಇದೀಗ ಮೂರನೇ ಬಾರಿ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ 79ರ ಇಳಿ ವಯಸ್ಸಿನಲ್ಲೂ ಸತತ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಸಭಾಪತಿ ಸ್ಥಾನದಲ್ಲಿ ಕುಳಿತು ಸದನ ನಡೆಸಿರುವುದು ಸಹ ದಾಖಲೆಯೇ ಸರಿ.ಗಟ್ಟಿ ಮಾತಿನ ಹೊರಟ್ಟಿಬಸವರಾಜ ಹೊರಟ್ಟಿ ಅವರು ಬರೀ ಶಿಕ್ಷಕರ ಕ್ಷೇತ್ರದಿಂದ ಆರಿಸಿಬರುತ್ತಿದ್ದರು. ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾದವರಲ್ಲ. ಉತ್ತರ ಕರ್ನಾಟಕದ ಯಾವುದೇ ಸಮಸ್ಯೆ ಬಂದರೂ ಮೊಟ್ಟ ಮೊದಲು ಧ್ವನಿ ಕೇಳಿ ಬರುವುದು ಹೊರಟ್ಟಿ ಅವರದು.
ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿ ಜನಜನಿತವಾದವರು ಹೊರಟ್ಟಿ. ಶಿಕ್ಷಕರಾಗಿ, ಕೃಷಿಕರಾಗಿ, ಶಾಸಕರಾಗಿ, ಸಚಿವರಾಗಿ, ಒಬ್ಬ ಹೋರಾಟಗಾರರಾಗಿ ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲತೆ ವ್ಯಕ್ತಿತ್ವದ ಜತೆಗೆ ಸ್ವಂತಿಕೆಯನ್ನು ರೂಢಿಸಿಕೊಂಡವರು. ಯಾವುದೇ ಮುಲಾಜಿಗೆ ಒಳಗಾಗದೇ, ತಾವು ನಂಬಿಕೊಂಡು ಬಂದ ವಿಚಾರ ಬಲಿಕೊಟ್ಟು ಬದುಕಿದವರಲ್ಲ. ನ್ಯಾಯ ನಿಷ್ಟುರತನ, ನೇರ ನುಡಿಯಿಂದಲೇ ಹೆಸರಾದವರು. ಪ್ರಗತಿಪರ ರೈತ ಹೊರಟ್ಟಿಬಸವರಾಜ ಹೊರಟ್ಟಿಯವರು ಕೃಷಿ ಕುಟುಂಬದಿಂದ ಬಂದವರು. ಶಿಕ್ಷಕ, ಹೋರಾಟಗಾರ, ರಾಜಕಾರಣಿ, ಶಾಸಕ, ಸಚಿವ ಸಭಾಪತಿಯಾದರೂ ಅವರ ಒಲವು ಅನ್ನ ನೀಡುವ ಕೃಷಿಯತ್ತಲೇ ಇದೆ. ಎಂತಹದೇ ಧಾವಂತ ಇರಲಿ, ಶಿಕ್ಷಕರ ಪರ ಹೋರಾಟ ಇರಲಿ.. ಅವೆಲ್ಲವುಗಳ ನಡುವೆಯೇ ಬಿಡುವು ಮಾಡಿಕೊಂಡು ಕೃಷಿ ಕೈಂಕರ್ಯದಲ್ಲಿ ತೊಡಗುವುದನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದಾರೆ.
ಹುಬ್ಬಳ್ಳಿ ಸಮೀಪದ ವರೂರ ಬಳಿ ಪಿ.ಬಿ. ರಸ್ತೆಗೆ ಹೊಂದಿಕೊಂಡು ಸುಮಾರು 45 ಎಕರೆಯಲ್ಲಿ "ನಿಸರ್ಗ ಫಾರ್ಮ್ ಹೌಸ್ " ರೂಪಿಸಿದ್ದಾರೆ. ಅದರಲ್ಲಿ ಮಾವು, ಚಿಕ್ಕು, ಹಲಸು ಸೇರಿದಂತೆ ಹತ್ತಾರು ಹಣ್ಣು ಹಂಪಲಗಳ ಗಿಡಗಳನ್ನು ಬೆಳೆಸಿದ್ದಾರೆ. ಒಣ ಬೇಸಾಯದಲ್ಲಿ ಗೋವಿನ ಜೋಳ, ಶೇಂಗಾ, ಹತ್ತಿ, ಕಡಲೆ, ಜೋಳ, ಗೋದಿ ಬೆಳೆಯುತ್ತಾರೆ. ನೀರಾವರಿ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ. ಅಷ್ಟೇ ಅಲ್ಲದೇ ಸುಮಾರು ನೂರಕ್ಕೂ ಹೆಚ್ಚು ಆಕಳುಗಳನ್ನು ಸಾಕಿದ್ದಾರೆ. ಹೊರಟ್ಟಿಯವರು ಫಾರ್ಮ್‌ಹೌಸ್‌ಗೆ ಕಾಲಿಟ್ಟರೇ ಸಾಕು, ಆಕಳುಗಳು ಅಂಬಾ ಎಂದು ಜೋರಾಗಿ ಧ್ವನಿ ಎತ್ತಿ ಇವರತ್ತ ಓಡಿ ಬರುತ್ತವೆ. ಹೊಲಕ್ಕೆ ಹೋದರೆ ಆಳುಗಳೇನಾದರೂ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದರೇ, ಅವರನ್ನು ಟ್ರ್ಯಾಕ್ಟರ್‌ನಿಂದ ಕೆಳಗಿಳಿಸಿ ತಾಸುಗಟ್ಟಲೇ ತಾವೇ ಹೊಲ ಉಳುಮೆ ಮಾಡುತ್ತಾರೆ. ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಒತ್ತು ನೀಡುತ್ತಿರುವ ಹೊರಟ್ಟಿ ಅವರು, ತಮ್ಮದೇ ಆದ ಬೃಹತ್ ಎರೆಹುಳು ಗೊಬ್ಬರ ಘಟಕ ಸ್ಥಾಪಿಸಿದ್ದಾರೆ. ನಿತ್ಯ ಸುಮಾರು ಹತ್ತಾರು ಕ್ವಿಂಟಾಲ್ ಎರೆಹುಳು ಗೊಬ್ಬರ ತಯಾರಿಸುತ್ತಿರುವುದು ಇವರ ಕೃಷಿ ಪ್ರೀತಿಗೆ ಹಿಡಿದ ಕೈಗನ್ನಡಿ. ಹುಟ್ಟೂರಿಗೆ ಕೊಡುಗೆಶಿಕ್ಷಕನ ಮಗನಾಗಿ ತಾವೂ ಒಬ್ಬ ಶಿಕ್ಷಕನಾಗಿ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಸವರಾಜ ಹೊರಟ್ಟಿ ಅವರು, ಹುಟ್ಟೂರು ಯಡಹಳ್ಳಿಯಲ್ಲಿ ಸರ್ಕಾರಿ ಶಾಲಾ, ಕಾಲೇಜು ತೆರೆಯಲು ಕೋಟ್ಯಾಂತರ ರೂ. ಬೆಲೆ ಬಾಳುವ ಏಳು ಎಕರೆ ಜಮೀನನ್ನೇ ದಾನವಾಗಿ ನೀಡಿದ್ದಾರೆ.
ಶಿಕ್ಷಣ ಸಚಿವರಾಗಿದ್ದಾಗ ₹30 ಕೋಟಿ ಅನುದಾನ ನೀಡಿ ಮಾದರಿ ಎನ್ನಬಹುದಾದ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಜತೆಗೆ ₹2 ಕೋಟಿ ವೆಚ್ಚದಲ್ಲಿ ಬಾಲಕಿಯರ ಹೈಟೆಕ್ ರೀತಿಯ ವಸತಿ ನಿಲಯ, ₹1 ಕೋಟಿ ವೆಚ್ಚದಲ್ಲಿ ಬಿಸಿಎಂ ವಸತಿ ನಿಲಯ, ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪಿಸಿ ₹20 ಸಾವಿರ ವೌಲ್ಯದ ಪುಸ್ತಕ ನೀಡಿದ್ದಾರೆ. ₹2 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ₹70 ಲಕ್ಷ ವೆಚ್ಚದಲ್ಲಿ ವಿಜ್ಞಾನ ಪಾರ್ಕ್, ₹65 ಲಕ್ಷ ವೆಚ್ಚದಲ್ಲಿ ಬಿಸಿಯೂಟ ಕೊಠಡಿ ನಿರ್ಮಾಣ, ₹10 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಐಟಿಐ ಕಾಲೇಜು ಸ್ಥಾಪನೆ, ಮಹಿಳಾ ಪದವಿ ಮಹಾವಿದ್ಯಾಲಯ ಸ್ಥಾಪನೆ, ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಹೀಗೆ ಹಲವು ಶೈಕ್ಷಣಿಕ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಇದರ ಜತೆಯಲ್ಲಿ ತಾವು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಲ್ಯಾಮಿಂಗ್ಟನ್ ಪ್ರೌಢಶಾಲೆಯ ಸುಧಾರಣೆಗೆ ₹1.38 ಕೋಟಿ ಅನುದಾನವನ್ನು ಸರ್ಕಾರದಿಂದ ಕೊಡಿಸಿದ್ದಾರೆ. ಆ ಮೂಲಕ ಶಿಕ್ಷಣದ ಬಗ್ಗೆ ಇದ್ದ ತಂದೆಯ ಸದಾಶಯಕ್ಕೆ ನೀರೆರೆದು ಪೋಷಣೆ ಮಾಡಿದವರು ಬಸವರಾಜ ಹೊರಟ್ಟಿ.ಬಸವರಾಜ ಹೊರಟ್ಟಿ ಅವರು ಒಬ್ಬ ವ್ಯಕ್ತಿಯಲ್ಲ. ಒಂದು ಶಕ್ತಿ. ಇಟ್ಟ, ನಂಬಿಕೆ, ಕೊಟ್ಟ ಮಾತುಗಳಿಗೆ ತಪ್ಪದ ನಡೆದುಕೊಂಡವರು. ವಿಧಾನಪರಿಷತ್‌ಗೆ ಶಿಕ್ಷಕರ ಕ್ಷೇತ್ರದಿಂದ ಬರೋಬ್ಬರಿ 8 ಬಾರಿ ಆಯ್ಕೆಯಾಗುವ ಮೂಲಕ ವಿಶ್ವದಾಖಲೆ ನಿರ್ಮಿಸಿದವರು. ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಹುಬ್ಬಳ್ಳಿಗರಾದ ನಮ್ಮೆಲ್ಲರ ಹೆಮ್ಮೆ. ಅವರ ಅಭಿಮಾನಿಗಳೇ ಸೇರಿಕೊಂಡು ಅಭಿನಂದನಾ ಸಮಾರಂಭ ಮಾಡುತ್ತಿದ್ದೇವೆ. ಪಕ್ಷಾತೀತವಾಗಿ ಈ ಕಾರ್ಯಕ್ರಮ ಮಾಡುತ್ತೇವೆ.
- ಶಂಕರಣ್ಣ ಮುನವಳ್ಳಿ, ಅಧ್ಯಕ್ಷರು, ಹೊರಟ್ಟಿ ಅಭಿನಂದನಾ ಸಮಿತಿ