ಕರಡಿ ಕೈತಪ್ಪಿದ ಟಿಕೆಟ್‌ ಡಾ. ಬಸವರಾಜಗೆ ಮಣೆ

| Published : Mar 14 2024, 02:07 AM IST

ಸಾರಾಂಶ

ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಬಿಜೆಪಿಯಿಂದಲೇ ಸತತವಾಗಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ.

ಕುಟುಂಬದ ಪ್ರೀತಿಗೆ ಪಕ್ಷದ ವಿಶ್ವಾಸ ಕಳೆದುಕೊಂಡ ಸಂಸದ ಸಂಗಣ್ಣ ಕರಡಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಕೊನೆಗೂ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಮಾಜಿ ಶಾಸಕ ಕೆ. ಶರಣಪ್ಪ ಅವರ ಪುತ್ರ ಹಾಗೂ ವೈದ್ಯ ಡಾ. ಕೆ. ಬಸವರಾಜ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಬಿಜೆಪಿಯಿಂದಲೇ ಸತತವಾಗಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಈ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ.

ಈ ಹಿಂದೆಯೂ ಹಾಲಿ ಸಂಸದ ಶಿವರಾಮಗೌಡ ಅವರಿಗೆ ಟಿಕೆಟ್ ತಪ್ಪಿಸಿ, ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಈಗ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿದರೂ ಟಿಕೆಟ್ ತಪ್ಪಿಸಿ, ಮತ್ತೆ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕಿದೆ.

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೊಡದಿರುವಂತೆ ಅನೇಕರು ದೆಹಲಿಗೂ ಹೋಗಿ ಮನವಿ ಮಾಡಿ ಬಂದಿದ್ದು ವರ್ಕೌಟ್ ಆದಂತೆ ಆಗಿದೆ. ಇದಕ್ಕೆ ತೇಪೆ ಹಚ್ಚುವ ಕೆಲಸ ಮಾಡಲಾಯಿತಾದರೂ ಅದು ವರ್ಕೌಟ್ ಆಗಿಲ್ಲ.

ಈ ನಡುವೆ ಸಂಸದ ಸಂಗಣ್ಣ ಕರಡಿ ಅವರ ಜೊತೆಗೆ ಮುನಿಸಿಕೊಂಡಿದ್ದವರನ್ನು ಒಗ್ಗೂಡಿಸುವಲ್ಲಿ ಡಾ. ಬಸವರಾಜ ಯಶಸ್ವಿಯಾದರು. ಅವರನ್ನು ಬಹಿರಂಗವಾಗಿಯೇ ಸಂಸದ ಸಂಗಣ್ಣ ಕರಡಿ ಅವರ ವಿರುದ್ಧ ದೆಹಲಿಯವರೆಗೂ ಕರೆದುಕೊಂಡು ಹೋಗಿ, ಹೈಕಮಾಂಡ್ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾದರು. ಪರಿಣಾಮ ಇತ್ತೀಚೆಗೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಡಾ. ಕೆ. ಬಸವರಾಜ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲೇ ಗೊತ್ತಿತ್ತು:

ಡಾ. ಕೆ. ಬಸವರಾಜ ಅವರಿಗೆ ಕಳೆದ ಆರು ತಿಂಗಳ ಹಿಂದೆಯೇ ಟಿಕೆಟ್ ಸಿಗುವ ಭರವಸೆಯನ್ನು ದೆಹಲಿ ಹೈಕಮಾಂಡ್ ನೀಡಿತ್ತು. ಈ ಕಾರಣಕ್ಕಾಗಿಯೇ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ಸುತ್ತಾಡಿ, ಪ್ರತಿಯೊಬ್ಬ ನಾಯಕರ ಮನೆಗೂ ಹೋಗಿ ವಿನಂತಿಸಿಕೊಂಡು ಬಂದಾಗಲೇ ಬಿಜೆಪಿ ಪಾಳೆಯದಲ್ಲಿ ಇದು ಚರ್ಚೆಯಾಗುತ್ತಿತ್ತು. ಈಗ ಅದು ಪಕ್ಕಾ ಆಗಿದೆ.

ಟಿಕೆಟ್ ತಪ್ಪಿದ್ಯಾಕೆ:

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ವಯಸ್ಸಾಗಿದೆ ಎನ್ನುವುದು ಪ್ರಮುಖ ಕಾರಣವಾಗಿದೆ. ಆದರೆ, ಹಾಲಿ ಸಂಸದ ಸಂಗಣ್ಣ ಕರಡಿ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ನಡೆದುಕೊಂಡಿದ್ದು ಬಿಜೆಪಿ ಹೈಕಮಾಂಡ್‌ಗೆ ಇರುಸುಮುರುಸಾಗಿತ್ತು. ಇದಕ್ಕಾಗಿ ಮಿಗಿಲಾಗಿ ಸಂಸದ ಸಂಗಣ್ಣ ಕರಡಿ ಪಕ್ಷ ಕಟ್ಟವುದಕ್ಕಾಗಿ ಶ್ರಮಿಸಲಿಲ್ಲ ಎನ್ನುವ ಆರೋಪ ಅವರ ಮೇಲೆ ಬಲವಾಗಿತ್ತು. ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಷ್ಟಾಗಿ ಶ್ರಮಿಸಲಿಲ್ಲ ಎನ್ನುವ ಆರೋಪವೂ ಅವರ ಮೇಲೆ ಇದೆ.

ಕರಡಿ ಕೈಗಿಲ್ಲ ಅಸ್ತ್ರ:

ಹಾಲಿ ಸಂಸದ ಸಂಗಣ್ಣ ಕರಡಿ ಅವರ ಟಿಕೆಟ್ ಕಸರತ್ತಿಗೆ ಈ ಬಾರಿ ಅಂತಹ ಯಾವುದೇ ಅಸ್ತ್ರ ಇಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದಾಗ ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ನೀಡಬೇಕು ಎನ್ನುವ ಅಸ್ತ್ರ ಪ್ರಯೋಗ ಮಾಡಿದ್ದರು. ಆದರೆ, ಈ ಬಾರಿ ಅಂಥ ಯಾವುದೇ ಅಸ್ತ್ರ ಅವರ ಬಳಿ ಇಲ್ಲ. ಕಾರಣ ಈಗ ಟಿಕೆಟ್ ಘೋಷಣೆಯಾಗಿರುವ ಡಾ. ಕೆ. ಬಸವರಾಜ ಸಹ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಸಮುದಾಯದ ಅಸ್ತ್ರವೂ ಇಲ್ಲದಂತೆ ಆಗಿದೆ.