ಲಲಿತ್‌ ರಾಘವ್‌ಗೆ ವಿದ್ಯುತ್ ನಿಗಮ ಅಧ್ಯಕ್ಷ ಸ್ಥಾನ; ಶ್ರೇಯಸ್‌ ಪಟೇಲ್‌ ಸಂತಸ

| Published : Mar 14 2024, 02:07 AM IST

ಲಲಿತ್‌ ರಾಘವ್‌ಗೆ ವಿದ್ಯುತ್ ನಿಗಮ ಅಧ್ಯಕ್ಷ ಸ್ಥಾನ; ಶ್ರೇಯಸ್‌ ಪಟೇಲ್‌ ಸಂತಸ
Share this Article
  • FB
  • TW
  • Linkdin
  • Email

ಸಾರಾಂಶ

ಲಲಿತ್ ರಾಘವ್ ಅವರ ಸರಳತೆ, ಉದಾರತೆ, ಉತ್ತಮ ವ್ಯಕ್ತಿತ್ವವನ್ನು ಗುರುತಿಸಿ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ತಮಗೆ ಸಂತಸ ತಂದಿದೆ ಎಂದು ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ತಿಳಿಸಿದರು. ಚನ್ನರಾಯಪಟ್ಟಣದ ಹಿರೀಸಾವೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಅಭಿನಂದನಾ ಸಮಾರಂಭ । ಹರ್ಷ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಅಭ್ಯರ್ಥಿ ಶ್ರೇಯಸ್‌ ಪಟೇಲ್‌

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನೆಚ್ಚಿನ ಅಣ್ಣನಾದ ಲಲಿತ್ ರಾಘವ್ ಅವರ ಸರಳತೆ, ಉದಾರತೆ, ಉತ್ತಮ ವ್ಯಕ್ತಿತ್ವವನ್ನು ಗುರುತಿಸಿ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ತಮಗೆ ಸಂತಸ ತಂದಿದೆ ಎಂದು ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ತಿಳಿಸಿದರು.

ತಾಲೂಕಿನ ಹಿರೀಸಾವೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ‘ನಮ್ಮ ತಾತ ಹಾಗೂ ಮಾಜಿ ಸಚಿವರಾದ ದಿವಂಗತ ಎಚ್.ಸಿ. ಶ್ರೀಕಂಠಯ್ಯ, ಜಿ.ಪುಟ್ಟಸ್ವಾಮಿಗೌಡ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿ ಬೇರೂವುದಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಅವರ ಹಾದಿಯಲ್ಲಿ ನಾವು ನಿರಂತರವಾಗಿ ಸಾಗುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಲವಾರು ಬಾರಿ ಮಾಜಿ ಪ್ರಧಾನಿ ಕುಟುಂಬದ ವಿರುದ್ಧ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರೂ ಸಹ ನಾವು ದೃತಿಗಿಡದೆ ಕಾರ್ಯಕರ್ತರ ಮಧ್ಯೆ ಸದಾ ನಮ್ಮನ್ನು ತೊಡಗಿಸಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸುವತ್ತ ನಿರತರಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿ ಕಳಿಸಿದರೆ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಯಶೀಲರಾಗಲು ಶಕ್ತಿಮೀರಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ವಿದ್ಯುತ್ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷ ಲಲಿತ ರಾಘವ್ ಮಾತನಾಡಿ, ‘ನನಗೆ ಸಿಕ್ಕಿರುವ ಹುದ್ದೆಯಿಂದ ಸಮರ್ಪಕವಾಗಿ ಸಹಾಯವನ್ನು ಮಾಡುತ್ತೇನೆ, ನನಗೆ ಕರ್ನಾಟಕ ರಾಜ್ಯ ವಿದ್ಯುತ್ ಕೈಗಾರಿಕಾ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಇದರಲ್ಲಿ ೨೫ ಕೆವಿಯಿಂದ ೫೦೦ ಕೆವಿ ವರೆಗೆ ಟಿಸಿಗಳನ್ನು ಹೊಸದಾಗಿ ನಿರ್ಮಾಣ ಮಾಡುವುದು ನನ್ನ ಆಡಳಿತದಲ್ಲಿ ಇರುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುವ ಟಿಸಿಗಳನ್ನು ಸಹ ಪ್ರಮಾಣಿಕವಾಗಿ ನೀಡುವಂತೆ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಮಾರ್ಗದರ್ಶನ ನೀಡುತ್ತೇನೆ. ನನ್ನನ್ನು ಇಂದು ಈ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಲು ಕಾರಣರಾದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲೆಯ ಉಸ್ತವಾರಿ ಸಚಿವ ರಾಜಣ್ಣ ಮತ್ತು ಜಿಲ್ಲಾ ಎಲ್ಲಾ ಕಾಂಗ್ರೆಸ್ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇನ್ನೂ ಅನೇಕ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ವೇಳೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರು, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಚ್. ಎಸ್. ವಿಜಯಕುಮಾರ್, ನೆಹನೀಶ್, ಎನ್.ಡಿ.ಕಿಶೋರ್, ಯುವರಾಜ್, ವಿನೋದ್‌ಮಖಾನ್ ಸೇರಿದಂತೆ ಹಲವಾರು ಮುಖಂಡರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.ಕರ್ನಾಟಕ ರಾಜ್ಯ ವಿದ್ಯುತ್ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷ ಲಲಿತ ರಾಘವ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಮಾತನಾಡಿದರು.