ಸಾರಾಂಶ
ಬ್ಯಾಡಗಿ: ‘ಮಹಿಳೆ ಅಬಲೆಯಲ್ಲ ಸಬಲೆ’ ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು, ಮಹಿಳೆಯರಿಗೆ ಶಕ್ತಿ ತುಂಬುವ ಸಲುವಾಗಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ, ಯೋಜನೆ ನಿರಂತರವಾಗಿ ಇರಬೇಕು, ಇದಕ್ಕೆ ನಿಮ್ಮ ಆಶೀರ್ವಾದ ನಮಗಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಂದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರ್ಹ ಫಲಾನುಭವಿಗಳಿಗೆ ನೀಡಿದ್ದು, ಯೋಜನೆಯಡಿ ಬರುವ ಹಣವನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.ವಿರೋಧ ಪಕ್ಷಗಳು ಇಷ್ಟೊಂದು ಯೋಜನೆಗಳನ್ನು ಮಾಡಲು ಆಗುವುದಿಲ್ಲ ಎಂದು ಹೇಳಿದರು. ಆದರೆ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸಿದ ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಬಗ್ಗದೇ ಕೆವಲ 8 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ₹38 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ₹52 ಸಾವಿರ ಕೋಟಿ ಖರ್ಚು ಮಾಡಲು ಬದ್ಧರಿದ್ದೇವೆ. ಸರಾಸರಿ ಒಂದು ಕುಟುಂಬಕ್ಕೆ 4ರಿಂದ 5 ಸಾವಿರ ಕೊಡುತ್ತಿದ್ದೇವೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಸರ್ಕಾರ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಪಕ್ಷ ನಮ್ಮದು. ಬಡವರ ಏಳ್ಗೆ ಹಾಗೂ ದೇಶ ಹಾಗೂ ರಾಜ್ಯಗಳ ಸಮಗ್ರ ಅಭಿವೃದ್ಧಿಯ ಧ್ಯೇಯ ಹೊಂದಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣ, ಉಳುವವನೆ ಹೊಲದೊಡೆಯ ಸೇರಿದಂತೆ ಸಾಕಷ್ಟು ಬಡವರ ಪರ ಯೋಜನೆಗಳನ್ನು ಜಾರಿಗೊಳಿಸಿದೆ. ವಿರೋಧ ಪಕ್ಷದವರಂತೆ ಚುನಾವಣಾ ಸಂದರ್ಭದಲ್ಲಿ ಸುಳ್ಳು ಹೇಳುವ ಪಕ್ಷ ನಮ್ಮದಲ್ಲ ಎಂದರು.ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳಂತಾಗಿವೆ. ರಾಜ್ಯದ ಧಾರ್ಮಿಕ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಕಾಂಗ್ರೆಸ್ ಸರ್ಕಾರ ಅನುವು ಮಾಡಿ ಕೊಟ್ಟಿದೆ. ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಮುಖಂಡರಾದ ಚನ್ನಬಸಪ್ಪ ಹುಲ್ಲತ್ತಿ, ದಾನಪ್ಪ ಚೂರಿ, ವೀರನಗೌಡ ಪೊಲೀಸ್‌ಗೌಡ್ರ, ದುರ್ಗೇಶ ಗೊಣೆಮ್ಮನವರ, ಬೀರಪ್ಪ ಬಣಕಾರ, ಶಂಭನಗೌಡ ಪಾಟೀಲ, ನಾಗರಾಜ ಆನ್ವೇರಿ, ರೇಷ್ಮಾಬಾನು ಶೇಖ, ಜಮೀಲಾ ಹರ‍್ಕಲ್, ಲಕ್ಷ್ಮೀ ಜಿಂಗಾಡೆ, ಶಿವಣ್ಣ ಅಂಬಲಿ, ಖಾದರಸಾಬ್ ದೊಡ್ಮನಿ, ಉಪ ವಿಭಾಗಾಧಿಕಾರಿ ಚನ್ನಪ್ಪ ಟಿಈಒ ಕೆ.ಎಂ. ಮಲ್ಲಿಕಾರ್ಜುನ, ಅಕ್ಷರ ದಾಸೋಹಾಧಿಕಾರಿ ಎನ್. ತಿಮ್ಮಾರೆಡ್ಡಿ ಇನ್ನಿತರರಿದ್ದರು.