ಜನ ಆಶೀರ್ವಾದ ಮಾಡುತ್ತಾರೆ: ಸೋಮಣ್ಣ

| Published : Mar 14 2024, 02:07 AM IST

ಸಾರಾಂಶ

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಕ್ಷ ನನಗೆ ಟಿಕೆಟ್ ಕೊಟ್ಟಿದೆ. ನಾನು ಕೆಲಸ ಮಾಡುತ್ತೇನೆ, ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದ್ದಾರೆ.

ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ. ರಾಷ್ಟ್ರಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದರು.

ಮಾಜಿ ಸಚಿವ ಮಾಧುಸ್ವಾಮಿ ನನ್ನ ಫ್ರೆಂಡ್‌. ಅವರು ನಾನು ಎಲ್ಲರೂ ಸೇರಿಕೊಂಡು ಕೆಲಸ ಮಾಡುತ್ತೇವೆ. ಅವರೇ ಹೇಳಿದಂತೆ ನಾನು ಸುಬ್ರಹ್ಮಣ್ಯ, ಅವರು ವಿನಾಯಕ. ವಿನಾಯಕನ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ತುಮಕೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾಗಿದೆ. ಅವರಿಗೆ ಒಳ್ಳೆಯದಾಗಲಿ. ಅವರು ಮೊದಲು ನಮ್ಮಲ್ಲಿ ಇದ್ದರು ಎಂದು ಹೇಳಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಈ ಬಾರಿ ಕ್ರಾಂತಿಯಾಗಲಿದೆ ನೋಡುತ್ತಿರಿ. ನಾನು ಶುಕ್ರವಾರ ತಮಕೂರಿಗೆ ಹೋದರೆ, ಚುನಾವಣೆ ಮುಗಿಸಿಕೊಂಡೇ ವಾಪಸ್‌ ಬರುತ್ತೇನೆ. ಸಿದ್ಧಗಂಗಾ ಸ್ವಾಮೀಜಿ ಆಶೀರ್ವಾದ ಪಡೆದು ನಾನು ನಾಮಪತ್ರ ಸಲ್ಲಿಸುತ್ತೇನೆ. ಎಚ್‌.ಡಿ.ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದವರು. ಅವರ ಗರಡಿಯಲ್ಲಿ 30 ವರ್ಷ ಬೆಳೆದಿದ್ದೇನೆ. ನಮ್ಮವರು ಎಷ್ಟು ಮುಖ್ಯವೋ ದೇವೇಗೌಡರು ಅಷ್ಟೇ ಮುಖ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನು ಎಚ್‌.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ತುಂಬಾ ಕೆಲಸ ಮಾಡಿದ್ದಾರೆ. ಈ ಇಬ್ಬರೂ ಪ್ರಚಾರಕ್ಕೆ ಬರಲಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ. ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು.ವಾರಣಾಸಿ ಎಷ್ಟು ಪವಿತ್ರ ಇದೆಯೋ ತುಮಕೂರಿನ ಮಠವೂ ಅಷ್ಟೇ ಪವಿತ್ರವಾಗಿದೆ. ನಾನು ಯಾವುದೇ ಕ್ಷೇತ್ರ ಬಯಸಿರಲಿಲ್ಲ. ಈಗ ಪಕ್ಷ ಟಿಕೆಟ್‌ ಕೊಟ್ಟಿದೆ. ನಾನು ಕೆಲಸ ಮಾಡುತ್ತೇನೆ. ನೂರಕ್ಕೆ ನೂರಷ್ಟು ನಾನು ಗೆಲ್ಲಲಿದ್ದೇನೆ.

-ವಿ.ಸೋಮಣ್ಣ, ತುಮಕೂರು ಅಭ್ಯರ್ಥಿ.