ಸಾರಾಂಶ
ಸುಮಾರು ೨ ಗಂಟೆಗಳ ಕಾಲ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ೫, ಲೋಕೋಪಯೋಗಿ ಇಲಾಖೆಗೆ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ತಲಾ ೧ ದೂರು ಅರ್ಜಿ ಸಲ್ಲಿಕೆಯಾಗಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಮಂಗಳೂರು ಲೋಕಾಯುಕ್ತ ವಿಭಾಗದ ಅಧಿಕಾರಿಗಳಿಂದ ಬುಧವಾರ ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು ೮ ಅರ್ಜಿ ಸಲ್ಲಿಕೆಯಾಯಿತು.ಸುಮಾರು ೨ ಗಂಟೆಗಳ ಕಾಲ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ೫, ಲೋಕೋಪಯೋಗಿ ಇಲಾಖೆಗೆ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ತಲಾ ೧ ದೂರು ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಗಳನ್ನು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು ಪರಿಹಾರ ಕ್ರಮಗಳಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಮುಖ್ಯ ರಸ್ತೆಯ ಗಾಂಧಿಕಟ್ಟೆಯ ಬಳಿ ಹಲವು ಸಮಯಗಳಿಂದ ರಸ್ತೆ ತೀರಾ ಹದೆಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಕುರಿತು ಸುದರ್ಶನ್ ಮುರ ಅವರು ಲೋಕಾಯುಕ್ತ ಎಸ್ಪಿ ಅವರ ಗಮನಕ್ಕೆ ತಂದರು. ಈ ಕುರಿತು ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಸಿ.ಎ. ಸೈಮನ್ ಸಭೆಗೆ ಬಾರದ ನಗರಸಭಾ ಪೌರಾಯುಕ್ತರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಒಂದೆರಡು ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಕುರಿತು ಪೌರಾಯುಕ್ತರು ಭರವಸೆ ನೀಡಿದರು.ಲೋಕಾಯುಕ್ತ ಇನ್ಸ್‌ಪೆಕ್ಟರ್ ಅಮಾನುಲ್ಲಾ, ಸಿಬ್ಬಂದಿ ರಾಧಾಕೃಷ್ಣ, ಮಹೇಶ್, ಶರತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಜಾರಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂಗಳಾ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಭಟ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.