ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರೊಂದಿಗೆ ಚರ್ಚಿಸಲು ಮಾ.15ರಂದು ಮಂಡ್ಯಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.ಹನುಮಂತನಗರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಮಂಡ್ಯ ಅಂಬೇಡ್ಕರ್ ಭವನದಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಜೆಡಿಎಸ್‌ನ ಎಲ್ಲಾ ಮಾಜಿ ಶಾಸಕರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಎಚ್‌ಡಿಕೆಗೆ ಅದ್ಧೂರಿ ಸಾಗತ:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಮುಂದಾಗುವಂತೆ ಮನವಿ ಮಾಡಿದರು.
ಎಚ್‌ಡಿಡಿ ಮಾರ್ಗದರ್ಶನದಲ್ಲಿ ಚುನಾವಣೆ:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುವುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ದೇಶ ಸುಭೀಕ್ಷೆಯಾಗಿ ಅಭಿವೃದ್ದಿಗೊಳ್ಳಲಿದೆ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಜನರು ಈಗಾಗಲೇ ಬೇಸತ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತವನ್ನು ಮೆಚ್ಚಿದ್ದಾರೆ. ನಮ್ಮ ವರಿಷ್ಠರ ತೀರ್ಮಾನದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೊಂಡಿದೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಜಿಲ್ಲೆ ಮತ್ತು ದೇಶದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕಾಗಿ ಮತ ನೀಡಬೇಕೆಂದು ಹೇಳಿದರು.
ಪ್ರಯೋಜನಕ್ಕೆ ಬಾರದ ಗ್ಯಾರಂಟಿಗಳು:ರಾಜ್ಯ ಸರ್ಕಾರ ಗ್ಯಾರಂಟಿಗಳ ಆಶ್ವಾಸನೆ ನೀಡಿ ಮತಗಳನ್ನು ಕಸಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಜನಗಳಿಗೆ ಗ್ಯಾರಂಟಿಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಜೊತೆಗೆ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದನ್ನು ಜನರು ಮೌನವಾಗಿ ಗಮನಿಸುತ್ತಿದ್ದಾರೆ. ಇದಕ್ಕೆ ಉತ್ತರ ನೀಡಲು ಲೋಕಭಾ ಚುನಾವಣೆ ಬಂದಿದೆ. ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗಾಗಿ ಮತದಾರರು ಮುಂದಾಗಬೇಕೆಂದು ಡಿ.ಸಿ.ತಮ್ಮಣ್ಣ ತಿಳಿಸಿದರು.
ಈ ವೇಳೆ ಮುಖಂಡರಾದ ಸಂತೋಷ್ ತಮ್ಮಣ್ಣ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಡಿ.ಹೊನ್ನೇಗೌಡ, ಕೆ.ಎಂ.ದೊಡ್ಡಿ ವೆಂಕಟೇಶ್, ವಿಶ್ವ, ಗುರುದೇವರಹಳ್ಳಿ ಅರವಿಂದ್, ಬೊಮ್ಮೇಗೌಡ, ಹನುಮೇಗೌಡ, ಸಿದ್ದರಾಜು, ಗುಡಿಗೆರೆ ಬಸವರಾಜು ಸೇರಿದಂತೆ ಹಲವರಿದ್ದರು.