ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಜನರ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಎಂ.ಆರ್.ಐ. ಸ್ಕ್ಯಾನಿಂಗ್ ಘಟಕ ಹಾಗೂ ತಂತ್ರಾಂಶ ಶಾಸಕ ಡಾ. ಮಂತರ್ ಗೌಡ ಪರಿಶ್ರಮದಿಂದ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮಂಜೂರು ಮಾಡಲಾಗಿದೆ.ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಅಧೀನ ಜಿಲ್ಲಾ ಆಸ್ಪತ್ರೆಗೆ ಸಾರ್ವಜನಿಕ - ಖಾಸಗಿ ಸಹಭಾಗಿತ್ವ ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರವನ್ನು ಹಾಗೂ ವೈದ್ಯಕೀಯ ಉಪಕರಣ ಮಂಜೂರು ಮಾಡುವ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಸಭೆ ನಡೆಸಿ ಮನವಿಗಳನ್ನು ನೀಡಲಾಗಿತ್ತು. ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆ , ಆಸ್ಪತ್ರೆಗಳಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯ ಇರಲಿಲ್ಲ. ಇದರಿಂದಾಗಿ ರೋಗಿಗಳು ಸ್ಕ್ಯಾನಿಂಗ್ ಗಾಗಿ ಇತರೆ ದೂರದ ಜಿಲ್ಲೆಗಳಾದ ಮೈಸೂರು, ಮಂಗಳೂರು, ಹಾಸನ, ಬೆಂಗಳೂರು ನಗರಗಳನ್ನು ಅವಲಂಬಿಸಲಾಗಿತ್ತು.ಒಟ್ಟು ರು.10.70 ಕೋಟಿ ಮೊತ್ತದ ಎಂ.ಆರ್.ಐ ಸ್ಕ್ಯಾನಿಂಗ್ ಉಪಕರಣ ಕೊಡಗು ಜಿಲ್ಲೆಗೆ ಇದೀಗ ಮಂಜೂರಾಗಿದೆ.
22ರಂದು ಪಾಡಿ ಇಗ್ಗುತಪ್ಪ ದೇವಸ್ಥಾನ ಕಾಂಕ್ರಿಟ್ ರಸ್ತೆ ಸಂಚಾರಕ್ಕೆ ಮುಕ್ತ:ಕೊಡಗಿನ ಆರಾಧ್ಯ ದೈವ ಪಾಡಿ ಇಗ್ಗುತಪ್ಪ ದೇವಸ್ಥಾನದ ರಸ್ತೆ ದುಃಸ್ಥಿತಿಯಲ್ಲಿದ್ದು ಭಕ್ತರು ಧೂಳಿನ ಮೂಲಕ ದೇವಾಲಯಕ್ಕೆ ಹೋಗುವ ಪರಿಸ್ಥಿತಿ ಹಲವು ವರ್ಷಗಳಿಂದ ಇತ್ತು. 15 ದಿನಗಳ ಹಿಂದೆ ಶಾಸಕ ಎ.ಎಸ್.ಪೊನ್ನಣ್ಣ ಜನರ ಕೋರಿಕೆ ಮೇರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಮಂಗಳವಾರ ಪೂರ್ಣಗೊಂಡ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ವೀಕ್ಷಿಸಿದರು.ಬಳಿಕ ಮಾತನಾಡಿದ ಅವರು, ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮಾ.23ರಂದು ಕಲ್ಲಡ್ಚ ಹಬ್ಬ ನಡೆಯಲಿದೆ. ಅದರೊಳಗೆ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಿಸಿ 22ರಂದು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಅಕ್ರಮ, ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಡಿ.ಸಿ.ಸಿ. ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಕರ್ತಂಡ ಶೈಲಾ ಕೊಟ್ಟಪ್ಪ, ಸಾಬು, ಶುಭಾಷ್ ಮತ್ತಿತರರು ಹಾಜರಿದ್ದರು.