ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಾಹಿತ್ಯ, ಕಲೆ, ಸಂಸ್ಕೃತಿ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ ಎಂಬುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಬಿ. ಗದ್ದುಗೆ ಹೇಳಿದರು.ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಸಮನ್ವಯ ಸೇವಾ ಸಂಸ್ಥೆ (ರಿ) ಕಿಲ್ಲನಕೇರಾ ವತಿಯಿಂದ ನಡೆದ ಚೆನ್ನವಿರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಜಾನಪದ ಸಾಂಸ್ಕೃತಿಕ ವೈಭವದಲ್ಲಿ ಸಾಧಕರಿಗೆ ಹಾಗೂ ರಾಜ್ಯಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಥೆಯ ಹೆಸರೇ ಸೂಚಿಸುವಂತೆ ಪ್ರತಿಯೊಬ್ಬರನ್ನು ಸಮಾನತೆಯಿಂದ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಗನಕ್ಕೆ ತಲುಪಿಸುವ ಕಾರ್ಯ ಸಮನ್ವಯ ಸೇವಾ ಸಂಸ್ಥೆ ಮಾಡುತ್ತಾ ಬಂದಿದೆ. ಜಾತ್ರೆಗಳು ಸಾಮಾನ್ಯವಲ್ಲ, ಜನರ ಮನಸ್ಸುಗಳನ್ನು ಬೆರೆಸುವಂತಹ ಪುಣ್ಯ ಸುಕ್ಷೇತ್ರಗಳು ಈ ಜಾತ್ರೆಗಳಾಗಿವೆ. ಕಿಲ್ಲನಕೇರಾದ ಸಂಸ್ಥಾನ ಮೂಲ ಮಠದ ಜೀರ್ಣೋದ್ಧಾರಕ್ಕಾಗಿ, ಅಭಿವೃದ್ಧಿಗಾಗಿ ಸಂಬಂಧಪಟ್ಟ ಸರ್ಕಾರ ಗಮನಕ್ಕೆ ತಂದು ಸ್ಥಳೀಯ ಶಾಸಕರು ಹಾಗೂ ಸಚಿವರರೊಂದಿಗೆ ಚರ್ಚಿಸಿ, ಅಳಿಲು ಸೇವೆ ಮಾಡಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.ಡಾ. ವೀರೇಶ್ ಜಾಕಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಾವು ಮಕ್ಕಳಿಗೆ ಉತ್ತಮವಾದ ಗುಣಮಟ್ಟ ಶಿಕ್ಷಣ ಒದಗಿಸಿಕೊಟ್ಟರೆ ಆ ಗ್ರಾಮ ಸುವರ್ಣ ಗ್ರಾಮ ಆಗುವುದರಲ್ಲಿ ಸಂಶಯವಿಲ್ಲ. ಒಬ್ಬ ಮಗು ಶಿಕ್ಷಣ ಪಡೆದ ಮನೆ ವಿಶ್ವವಿದ್ಯಾಲಯವಾಗುತ್ತದೆ. ಹಾಗೆ ಯಾವ ಗ್ರಾಮದಲ್ಲಿ ದೇವಾಲಯದ ಗಂಟೆ ಶಬ್ದ ಕೇಳುತ್ತದೆಯೋ ಆ ಗ್ರಾಮದಲ್ಲಿ ಶಾಲೆ ಗಂಟೆಯ ನಾದ ಕೇಳಬೇಕು. ಅಂದಾಗ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ರಾಜ್ಯಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಲಕ್ಷ್ಮಿಕಾಂತ ಪಾಟೀಲ್ ಕೃಷಿ ಕ್ಷೇತ್ರ, ಡಾ. ಸಿದ್ದನಗೌಡ ಬಿರಾದಾರ್ ವೈದ್ಯಕೀಯ ಕ್ಷೇತ್ರ, ದುರ್ಗಪ್ಪ ಪೂಜಾರಿ ಶಿಕ್ಷಣ ಕ್ಷೇತ್ರ, ವೀರೇಶ ಸಜ್ಜನ್ ಸಾಮಾಜಿಕ ಕ್ಷೇತ್ರ, ಮಹೇಶ ಶಿರವಾಳ ಸಂಗೀತ ಕ್ಷೇತ್ರ, ಶ್ರೀಕಾಂತ್ ವಿಶ್ವಕರ್ಮ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಚೆನ್ನವೀರ ಶಿವಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮೂಲಮಠ ಕಿಲ್ಲನಕೇರಾ ದಿವ್ಯ ಸಾನಿಧ್ಯ ವಹಿಸಿದ್ದರು. ನಿತ್ಯಾನಂದ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಸುದರ್ಶನ್ ಪಾಟೀಲ್ ಜೈ ಗ್ರಾಮ ಪ್ರಶಸ್ತಿ ಪ್ರದಾನ ಮಾಡಿದರು.
ಮಲ್ಲಿಕಾರ್ಜುನ ಶಿರಗೋಳ, ರಾಜಶೇಖರಗೌಡ ಮಾಲಿ ಪಾಟೀಲ್, ಮಲ್ಲಪ್ಪಗೌಡ ಮಾಲಿ ಪಾಟೀಲ್, ಮಲ್ಲೇಶ್ ನಾಯಕ್ ಕೂಡ್ಲೂರ್, ಮಹೇಶಗೌಡ ಪೊಲೀಸ್ ಪಾಟೀಲ್, ಬನಶಂಕರಗೌಡ ಮಾಲಿ ಪಾಟೀಲ್, ಅರುಣ್ ಕುಮಾರ್ ನಾಯಕ್ ಗೌಡಗೇರ, ಆನಂದ್ ರಾಠೋಡ್ ಇತರರಿದ್ದರು.ನಂತರ ರಂಗಭೂಮಿ ಕಲಾವಿದರಾದ ಬಸವರಾಜ ಹಂದರಕಿ ಗೌರವಿಸಲಾಯಿತು. ಅಕ್ಷಯ್ ಸೌಂಡ್ ಅಂಡ್ ಕ್ಲಬ್ ವತಿಯಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಮಕ್ಕಳಿಂದ ಸಾಮಾಜಿಕ ನೃತ್ಯ ನೋಡುಗರ ಗಮನ ಸೆಳೆಯಿತು. ವಂದನಾ ಧೋತ್ರೆ ನಿರೂಪಿಸಿದರು. ದೇವಿಂದ್ರ ಧೋತ್ರೆ ವಂದಿಸಿದರು.