ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದ ನಿಮಿತ್ತ ಘೋಷಣೆ ಮಾಡಿದ್ದ ಗೌರವ ಡಾಕ್ಟರೆಟ್ ಪದವಿಯನ್ನು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾವೇರಿ ವಿಶ್ವವಿದ್ಯಾಲಯ ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೆಟ್ ನೀಡಲು ತೀರ್ಮಾನಿಸಿದೆ. ಆದರೆ ನಾನು ಗೌರವ ಡಾಕ್ಟರೆಟ್ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ನನಗೆ ಗೌರವ ಡಾಕ್ಟರೆಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿ, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು. ನಾನು ಗೌರವ ಡಾಕ್ಟರೆಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗೆ ತಿಳಿಸಿದ್ದೇನೆ ಎಂಇದ್ದಾರೆ.

ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೆಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ ಎಂದಿದ್ದಾರೆ.