ಬಹುಮುಖ ವ್ಯಕ್ತಿಗಳಲ್ಲಿ ಬಸವೆಣೆಪ್ಪ ಗೌರಿಮನಿ ಅಸಾಮಾನ್ಯ ವ್ಯಕ್ತಿ-ಸಂಸದ ಬೊಮ್ಮಾಯಿ

| Published : Sep 14 2024, 01:55 AM IST

ಬಹುಮುಖ ವ್ಯಕ್ತಿಗಳಲ್ಲಿ ಬಸವೆಣೆಪ್ಪ ಗೌರಿಮನಿ ಅಸಾಮಾನ್ಯ ವ್ಯಕ್ತಿ-ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹುಟ್ಟಿ, ತಮ್ಮ ಪ್ರಾಮಾಣಿಕತೆ, ಸಮಾಜಮುಖಿ ಕಾರ್ಯ ಹಾಗೂ ಸರಳ ಸಾತ್ವಿಕ ಗುಣಗಳಿಂದ ಅಸಾಮಾನ್ಯ ವ್ಯಕ್ತಿಗಳಾಗುತ್ತಾರೆ. ರಾಜಕೀಯದಲ್ಲಿದ್ದೂ ಅಜಾತಶತ್ರುಗಳು ಎಂದೆನಿಸುವುದು ವಿರಳಾತಿ ವಿರಳ, ಅಂಥ ಬಹುಮುಖ ವ್ಯಕ್ತಿಗಳಲ್ಲಿ ಬಸವೆಣೆಪ್ಪ ಗೌರಿಮನಿ ಅಸಾಮಾನ್ಯ ವ್ಯಕ್ತಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಕೆಲವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹುಟ್ಟಿ, ತಮ್ಮ ಪ್ರಾಮಾಣಿಕತೆ, ಸಮಾಜಮುಖಿ ಕಾರ್ಯ ಹಾಗೂ ಸರಳ ಸಾತ್ವಿಕ ಗುಣಗಳಿಂದ ಅಸಾಮಾನ್ಯ ವ್ಯಕ್ತಿಗಳಾಗುತ್ತಾರೆ. ರಾಜಕೀಯದಲ್ಲಿದ್ದೂ ಅಜಾತಶತ್ರುಗಳು ಎಂದೆನಿಸುವುದು ವಿರಳಾತಿ ವಿರಳ, ಅಂಥ ಬಹುಮುಖ ವ್ಯಕ್ತಿಗಳಲ್ಲಿ ಬಸವೆಣೆಪ್ಪ ಗೌರಿಮನಿ ಅಸಾಮಾನ್ಯ ವ್ಯಕ್ತಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಚನ್ನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲಿಂ. ಬಸವೆಣೆಪ್ಪ ಗೌರಿಮನಿ ಅವರ ಶ್ರದ್ಧಾಂಜಲಿ ಮತ್ತು ದಾಸೋಹಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಡ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾದ್ದ ಗೌರಿಮನಿ ಅವರು, ಹೊಸರಿತ್ತಿಯಲ್ಲಿ ಗಾಂಧೀ ಗ್ರಾಮೀಣ ಗುರುಕುಲ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಅವಿರತ ಪ್ರಯತ್ನಿಸಿದರು. ಗಾಂಧೀಜಿಯ ತತ್ವಾದರ್ಶಗಳನ್ನು ಪಾಲಿಸುತ್ತಿರುವ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ಶರಣರ ಜೀವನ ಮರಣದಲ್ಲಿ ನೋಡು ಎಂಬಂತೆ ಅವರ ಅಂತ್ಯ ಸಂಸ್ಕಾರದಲ್ಲಿ ಸೇರಿದ ಜನಸಾಗರವೇ ಅವರ ವ್ಯಕ್ತಿತ್ವ ಹೇಳುತ್ತಿತ್ತು ಎಂದು ಹೇಳಿದರು.

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರೇ ಬಸವಣೆಪ್ಪ ಆಗಿದ್ದರು. ನೂರಾರು ವಿದ್ಯಾರ್ಥಿಗಳಿಗೆ ಅನ್ನ, ಅರಿವು, ಆಶ್ರಯ ನೀಡಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಶ್ರಮಿಸಿದ್ದರು. ಅನಾಯಾಸವಾಗಿ ಬಂದ ಹುದ್ದೆಗಳನ್ನು ನಯವಾಗಿ ನಿರಾಕರಿಸಿದ ಆದರ್ಶ ರಾಜಕೀಯ ಮುತ್ಸದ್ಧಿಯಾಗಿದ್ದರು ಎಂದು ಹೇಳಿದರು.

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪರೋಪಕಾರದಲ್ಲಿ ಬದುಕಿದೆ ಎಂಬಂತೆ, ತಮ್ಮ ಜೀವನುದ್ದಕ್ಕೂ ಸಂತನಂಥ ಜೀವನ, ಉದಾರ ಮನಸ್ಸು, ಆಧುನಿಕ ದೃಷ್ಟಿಕೋನ, ಸಹಿಷ್ಣುತೆ ಭಾವದಿಂದ ಬದುಕಿ ಬಾವಿ ಜನಾಂಗಕ್ಕೆ ಮಾದರಿಯಾಗಿದ್ದರು. ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಗೌರಿಮನಿ ಅವರು ನೀಡಿದ ಸಹಾಯ, ಸಹಕಾರ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿ, ಅಂಥ ಚೇತನವೂ ಸದಾ ಅಮರವಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಸಾಹಿತಿ ಸಿ.ಎಸ್. ಮರಳಿಹಳ್ಳಿ ಸಂಪಾದಿಸಿದ ಅಭಿನಂದನಾ ಗ್ರಂಥ ದಾಸೋಹ ಕೃತಿ ಲೋಕಾರ್ಪಣೆಗೊಳಿಸಲಾಯಿತು. ಕೊಟ್ರಪ್ಪ ಗೌರಿಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗಿ ಸ್ವಾಮೀಜಿ, ಹೂವಿನಶಿಗ್ಲಿಯ ಚನ್ನವೀರ ಶ್ರೀಗಳು, ಅಗಡಿಯ ಗುರುಸಿದ್ಧ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ಬಾಗಲಕೋಟೆಯ ಬಿಜೆಪಿಯ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಶಿವರಾಜ ಸಜ್ಜನರ, ಎಂ.ಎಸ್. ಕೋರಿಶೆಟ್ಟರ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಎಂ. ಅಂಗಡಿ, ದಯಾನಂದ ಕಲಕೋಟಿ, ರಮೇಶ ಏಕಬೋಟೆ, ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ, ವೀರಣ್ಣ ಚಕ್ಕಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಜಿಪಂ ಮಾಜಿ ಸದಸ್ಯ ಸಿದ್ಧರಾಜ ಕಲಕೋಟಿ ಸ್ವಾಗತಿಸಿದರು. ಎಚ್.ಆರ್. ಯಡಹಳ್ಳಿ ಮತ್ತು ಬಿ.ಎಸ್. ಯಾವಗಲ್ಲ ನಿರೂಪಿಸಿದರು. ಸಿ.ಎಸ್. ಮರಳಿಹಳ್ಳಿ ಪ್ರಾಸ್ತಾವಿಕವಾಗಿ ಮಾತಾಡಿದರು. ಕೆ.ಸಿ.ಕೋರಿ ವಂದಿಸಿದರು.