62 ವರ್ಷಗಳಿಂದಲೂ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕಿನ ನಿರ್ದೇಶಕ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರರೊಂದಿಗೆ 2025-26ನೇ ಸಾಲಿನಲ್ಲಿ ಬ್ಯಾಂಕು 1.21 ಕೋಟಿ ನಿವ್ವಳ ಲಾಭ ಹೊಂದಿದೆ ಎಂದು ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
62 ವರ್ಷಗಳಿಂದಲೂ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕಿನ ನಿರ್ದೇಶಕ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರರೊಂದಿಗೆ 2025-26ನೇ ಸಾಲಿನಲ್ಲಿ ಬ್ಯಾಂಕು ₹1.21 ಕೋಟಿ ನಿವ್ವಳ ಲಾಭ ಹೊಂದಿದೆ ಎಂದು ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿದರು.ಪಟ್ಟಣದ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನದಲ್ಲಿ ಶನಿವಾರ ಜರುಗಿದ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ 62ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಬ್ಯಾಂಕು ₹3.73 ಕೋಟಿ ಷೇರು ಬಂಡವಾಳ, ₹10.68 ಕೋಟಿ ನಿಧಿ, ₹118.50 ಕೋಟಿ ಠೇವು, ₹73.72 ಕೋಟಿ ಸಾಲಗಳು, ₹138.6 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಬ್ಯಾಂಕು 6,575 ಸದಸ್ಯರನ್ನು ಹೊಂದಿದೆ. ಎಲ್ಲ ನಾಲ್ಕು ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸದಸ್ಯರ ಹಾಗೂ ಠೇವುದಾರರ ಹಿತ ಕಾಪಾಡುತ್ತ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಗುರಿ ಹೊಂದಲಾಗಿದೆ. ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ನೆರವು ಒದಗಿಸಲು ಬ್ಯಾಂಕು ಸನ್ನದ್ಧವಾಗಿದೆ ಎಂದರು.
ಬ್ಯಾಂಕಿನಲ್ಲಿ ಆರ್.ಟಿ.ಜಿ.ಎಸ್. ಹಾಗೂ ನೆಫ್ಟ್ ಸೌಲಭ್ಯ ಕಲ್ಪಿಸಲಾಗಿದೆ. ಎಟಿಎಂ, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಫೋನ್ ಪೇ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಬ್ಯಾಂಕಿನ ಪ್ರಗತಿಗೆ ಎಲ್ಲರ ಸಹಕಾರ ನೀಡಬೇಕೆಂದರು.ವಾರ್ಷಿಕ ಸಭೆ ಉದ್ಘಾಟಿಸಿದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬ್ಯಾಂಕು ಅಭಿವೃದ್ಧಿಯಾಗಬೇಕಾದರೆ ಬ್ಯಾಂಕಿನ ನಿರ್ದೇಶಕರ ಮಂಡಳಿ, ಸಿಬ್ಬಂದಿ, ಸದಸ್ಯರ ಪಾತ್ರ ಹಿರಿದು. ಬ್ಯಾಂಕಿನಿಂದ ಸಾಲ ಪಡೆದವರು ಸಕಾಲಿಕವಾಗಿ ಮರುಪಾವತಿ ಮಾಡಿದರೆ ಬ್ಯಾಂಕಿನ ಪ್ರಗತಿಗೆ ಪೂರಕವಾಗುತ್ತದೆ. ಹಿಂದೆ ₹25 ಸಾವಿರ ಸಾಲ ಪಡೆಯಲು ದುಸ್ತರವಿತ್ತು. ಇಂದು ₹10 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುತ್ತಿದೆ. ಸರ್ವ ಸದಸ್ಯರು ಬ್ಯಾಂಕಿನ ಪ್ರಗತಿಗೆ ಕೈಜೋಡಿಸಬೇಕೆಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ ಮಾತನಾಡಿದರು.ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ಎಸ್.ತಳ್ಳೊಳ್ಳಿ ಅವರು ವಾರ್ಷಿಕ ವರದಿ ವಾಚನ ಮಾಡಿ 2026-27 ನೇ ಸಾಲಿನ ಅಂದಾಜು ಆಯ-ವ್ಯಯ ಮಂಡಿಸಿದರು.ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಸವರಾಜ ಗೊಳಸಂಗಿ, ನಿರ್ದೇಶಕರಾದ ಉಮೇಶ ಹಾರಿವಾಳ, ಶಂಕರಗೌಡ ಬಿರಾದಾರ, ಅನಿಲ ದುಂಬಾಳಿ, ಜಗದೀಶ ಕೊಟ್ರಶೆಟ್ಟಿ, ಸಿದ್ರಾಮಪ್ಪ ಕಿಣಗಿ, ಶ್ರೀಶೈಲ ಪತ್ತಾರ, ಶಿವಾನಂದ ಪಟ್ಟಣಶೆಟ್ಟಿ, ನೀಲಪ್ಪ ನಾಯಕ, ಕಮಲಾ ತಿಪ್ಪನಗೌಡರ, ಸುರೇಖಾ ಪಡಶೆಟ್ಟಿ, ಯಮನಪ್ಪಗೌಡ ಪಾಟೀಲ,ವೃತ್ತಿಪರ ನಿರ್ದೇಶಕರಾದ ಭೀಮನಗೌಡ ಬಿರಾದಾರ, ರಾಜಶೇಖರ ಗುತ್ತರಗಿಮಠ, ಜನತಾ ಬಜಾರ ಅಧ್ಯಕ್ಷ ಬಾಲಚಂದ್ರ ಮುಂಜಾನಿ ಇತರರು ಇದ್ದರು. ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಮಾರಾಟಾಧಿಕಾರಿ ರಾಘವೇಂದ್ರ ಚಿಕ್ಕೊಂಡ ನಿರೂಪಿಸಿದರು. ಬ್ಯಾಂಕಿನ ನಿರ್ದೇಶಕ ಮುತ್ತು ಕಿಣಗಿ ವಂದಿಸಿದರು. ವಾರ್ಷಿಕ ಸಭೆಯಲ್ಲಿ ಅನೇಕ ಸದಸ್ಯರು ತಮ್ಮ ಪ್ರಶ್ನೆ, ಅಭಿಪ್ರಾಯ ಮಂಡಿಸಿದರು.