ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮಾನವತಾವಾದಿ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟರೆ, ಕ್ರಾಂತಿಕಾರಿ ಬಸವೇಶ್ವರರು ವಚನದ ಮೂಲಕ ಮನುಷ್ಯನ ಜೀವನಕ್ಕೆ ಸುಂದರ ಸಂವಿಧಾನ ತಂದುಕೊಟ್ಟಿದ್ದಾರೆ ಎಂದು ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಕೆ.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣೆ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾದೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕಿಗೆ ಬೇಕಾದ ನೀತಿಯನ್ನು ಸಾರಿದ ಮಹಾಚೈತನ್ಯ ಸಿದ್ದೇಶ್ವರ ಸ್ವಾಮಿಗಳ ವಿಚಾರಧಾರೆಗಳು ಸಮಾಜಕ್ಕೆ ಸಾರ್ವಕಾಲಿಕ ಎಂದರು.12ನೇ ಶತಮಾನದ ಬಸವಾದಿ ಶರಣರ ಆದರ್ಶಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ವಚನ ಸಾಹಿತ್ಯದ ಪ್ರೇರಕರಾಗಿ ನುಡಿದಂತೆ ನಡೆದಂತಹ ಸಂತ ಶ್ರೇಷ್ಠರು ಶ್ರೀ ಸಿದ್ದೇಶ್ವರ ಸ್ಮಾಮೀಜಿ ಎಂದು ಬಣ್ಣಿಸಿದರು.
ಸಿದ್ದೇಶ್ವರ ಸ್ವಾಮಿಗಳ ಜೀವನವೇ ಸಂದೇಶವಾಗಿದೆ. ಜ್ಞಾನಯೋಗಿಗಳ ವಿಚಾರಧಾರೆಗಳು ಮನುಷ್ಯನ ಅಂತರಂಗವನ್ನು ಶ್ರೀಮಂತಗೊಳಿಸುತ್ತವೆ ಈ ನಿಟ್ಟಿನಲ್ಲಿ ಶರಣರ ಸರಳತೆಯನ್ನು ಯುವ ಜನಾಂಗ ಅರಿತುಕೊಳ್ಳುವ ಅಗತ್ಯವಿದೆ ಎಂದರು.ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಬಳಿಕ 21ನೇ ಶತಮಾನದ ನಡೆದಾಡುವ ದೇವರೇ ಆಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಶ್ರೀಸಿದ್ದೇಶ್ವರ ಸ್ವಾಮೀಜಿ ಅವರಂಥಹ ಪ್ರಾತಃಸ್ಮರಣೀಯಯಿಂದಾಗಿ ಈ ನಾಡು ಧನ್ಯವಾಗಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.ಸಾಹಿತಿ ಕಣಿವೆ ಭಾರದ್ವಾಜ್ ಆನಂದತೀರ್ಥ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ನಟರಾಜ್, ಶಾಲಾ ಶಿಕ್ಷಕರಾದ ಶಿವಕುಮಾರ್, ಕಾಂತ, ಕೆ.ಜಿ.ಕಲ್ಪನಾ, ಕೀರ್ತಿ, ದಿವಾಕರ್ ಮತ್ತಿತರರಿದ್ದರು. ವಿದ್ಯಾರ್ಥಿನಿ ಧನ್ಯಶ್ರೀ ವಚನ ಹಾಡಿದರು.