ಸಾರಾಂಶ
ಕನ್ನಡಪ್ರಭವಾರ್ತೆ ಕುಷ್ಟಗಿ
ಪಟ್ಟಣದ ಆರಾಧ್ಯ ದೈವ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಬುಧವಾರ ಸಂಜೆ ಅದ್ಧೂರಿಯಾಗಿ ನಡೆಯಿತು.ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ಬಸವೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ನಂತರ ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದೀಶ್ವರ ಮೂರ್ತಿ ಹಾಗೂ ರಥದ ಕಳಶದೊಂದಿಗೆ ಸಕಲ ವಾದ್ಯಗಳ ಸಮೇತ ಮೆರವಣಿಗೆ ನಡೆಯಿತು. ಮಧ್ಯಾಹ್ನ ದೇವಸ್ಥಾನ ಆವರಣದಲ್ಲಿ ಮಹಾದಾಸೋಹ ನೆರವೇರಿತು.ಸಂಜೆ ಕೊರಡಕೇರಾ ಗ್ರಾಮದ ಹಾಲುಮತ ಸಮುದಾಯದ ಗುರುಗಳಾದ ಗುರುವಿನ ಮನೆತನದ ಸ್ವಾಮಿಗಳು ಹಾಗೂ ಹಾಲುಮತ ಸಮಾಜದ ಭಕ್ತರಿಂದ ತೇರಿನ ಹಗ್ಗವನ್ನು ಕೊರಡಕೇರಾ ಗ್ರಾಮದಿಂದ ಎತ್ತಿನ ಬಂಡಿಯಲ್ಲಿ ಮೆರವಣಿಗೆಯ ಮೂಲಕ ದೇವಸ್ಥಾನ ಆವರಣದಲ್ಲಿನ ರಥದವರೆಗೆ ತರಲಾಯಿತು.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ರಥವನ್ನು ಪಾದಗಟ್ಟೆಯವರೆಗೂ ಹರ್ಷೋದ್ಗಾರದೊಂದಿಗೆ ಎಳೆದರು. ನಂತರ ಪಾದಗಟ್ಟೆಯಿಂದ ರಥ ಪುನಃ ದೇವಸ್ಥಾನಕ್ಕೆ ತರಲಾಯಿತು.ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಸಾಗಿದ ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಎಸೆದು ಭಕ್ತಿ ಸೇವೆ ಸಲ್ಲಿಸಿದರು. ಮಹಾರಥವು ಪಾದಗಟ್ಟೆ ತಲುಪಿ ಪುನಃ ರಥದ ಮನೆಗೆ ಆಗಮಿಸುತ್ತಿದ್ದಂತೆ ಚಿತ್ತಾಕರ್ಷಕ ಬಾಣ ಬಿರುಸುಗಳ ಪ್ರದರ್ಶನವೂ ಗಮನಾರ್ಹವೆನಿಸಿತು.ಜಾತ್ರೆಯಲ್ಲಿ ಈ ಬಾರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ ಕೆಲ ಯುವಕರು ಜಾತ್ರೆಯಲ್ಲಿ ಪಿಪಿ ಉದುವ ಮೂಲಕ ಕರ್ಕಶ ಶಬ್ದವನ್ನು ಮಾಡಿದ್ದರಿಂದ ಕೆಲವರಿಗೆ ಕಿರಿಕಿರಿ ಉಂಟಾಗಿದ್ದು ಕಂಡುಬಂತು.ಈ ರಥೋತ್ಸವ ಚಾಲನೆಯ ಸಂದರ್ಭ ಶಾಸಕ ದೊಡ್ಡನಗೌಡ ಪಾಟೀಲ, ಅನ್ನದಾನೇಶ್ವರ ಮುಪ್ಪಿನ ಬಸವಲಿಂಗಸ್ವಾಮಿಗಳು, ಶಿವಾನಂದಯ್ಯ ಗುರುವಿನ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಶಶಿಧರ ಕವಲಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಪುರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.ವಿಶೇಷವಾಗಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಯಾದ ನವ ಜೋಡಿಗಳು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ರಥೋತ್ಸವಕ್ಕೆ ಸಾಕ್ಷಿಯಾದರು.