ಕುಕನೂರು: ವಿಶ್ವಗುರು ಬಸವಣ್ಣನವರು ಸಹಬಾಳ್ವೆಯ ಸದ್ಘತಿಯನ್ನು ಜಗತ್ತಿಗೆ ಸಾರಿದರು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀ ಬಸವೇಶ್ವರ ಜಯಂತ್ಯುತ್ಸವ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾಯಕಯೋಗಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನ್ಯರನ್ನು ನೋಡಿ ಅಸಹ್ಯ ಪಡುವ ಗುಣ ದೂರವಾಗಬೇಕು. ಅಂತರಂಗ ಹಾಗೂ ಬಹಿರಂಗಗಳನ್ನು ಶುದ್ಧವಾಗಿಟ್ಟುಕೊಂಡು ಕಾರ್ಯ ಮಾಡಬೇಕು. ಅಂದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ. ಮೇಲು-ಕೀಳೂ ಅನ್ನದೆ ಎಲ್ಲರೂ ಸಮಾನರಾಗಿ ಸಹಬಾಳ್ವೆ ಮಾಡಿದರೆ ಬದುಕಿನಲ್ಲಿ ನಿಜ ಸದ್ಘತಿ ಸಿಗುತ್ತದೆ ಎಂದು ಬಸವೇಶ್ವರರು ಸಾರಿದರು ಎಂದರು.

ಬಸವೇಶ್ವರ ಕಾಯಕವೇ ಕೈಲಾಸ ಎಂಬ ಮಾತಿನಂತೆ ಕಾಯಕ ಮಾಡುತ್ತ ಸಾಗಿದರೆ ಬದುಕಿನಲ್ಲಿ ಸ್ವರ್ಗಸುಖ ಸಿಗುತ್ತದೆ. ಕೈಲಾಸ ಎಂಬುದು ಕಾಯಕದ ಬೇವರ ಹನಿಯಿಂದ ಸಿಗುವ ಸಂತೃಪ್ರತಿಯಾಗಿದೆ. ಆ ನಿಟ್ಟಿನಲ್ಲಿ ಬದುಕು ಸಾಗಬೇಕು. ಅನ್ನದಾನೀಶ್ವರ ಶಾಖಾಮಠದಿಂದ 71 ಗ್ರಾಮದ ನಾನಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಾಮಾನ್ಯದ ಮಾತಲ್ಲ. ಈ ಸಾಧಕರು ತಮ್ಮ ಜೀವನದಲ್ಲಿ ಅತ್ಯಂತ ಧರ್ಮನಿಷ್ಠರಾಗಿ ಕಾಯಕ ಮಾಡುತ್ತ ಮಾದರಿಯಾಗಿ ಬದುಕಿದವರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವುದರಿಂದ ಅವರ ಮುಂದಿನ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂದಪ್ಪ ಜವಳಿ ಮಾತನಾಡಿ, ಬಸವೇಶ್ವರರು ಮನುಕುಲ ಒಳಿತಿಗೆ ಶ್ರಮಿಸಿದರು. ಮನುಷ್ಯ ಜನಿಸಿದ ಮೇಲೆ ಮಾಡುವ ಒಳಿತು ಕಾರ್ಯಗಳೇ ಅವನಿಗೆ ಶ್ರೀರಕ್ಷೆಯಾಗಿ ನಿಲ್ಲುತ್ತವೆ. ಬದುಕಿನಲ್ಲಿ ಇನ್ನೊಬ್ಬರಿಗೆ ನೋವು ಮಾಡುವ ಕಾರ್ಯ ಮಾಡಬಾರದು ಎಂದರು.


ಸ್ಥಳೀಯ ಮಠದ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಬಸವೇಶ್ವರರ ಬಗ್ಗೆ ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅಧ್ಯಯನದಿಂದ ಮಾತ್ರ ವಿಚಾರಗಳ ಹಂಚಿಕೆ ಸಾಧ್ಯ. ಬಸವೇಶ್ವರರ ಆರಾಧನೆ ಅವರ ತತ್ವ ಪಾಲನೆ ಆದಾಗ ಮಾತ್ರ ಆಗುತ್ತದೆ. ಕಾಯಕ ಯೋಗಿ ಪ್ರಶಸ್ತಿ ಪಡೆದವರು ಇನ್ನೊಬ್ಬರನ್ನು ಕಾಯಕಯೋಗಿಗಳನ್ನಾಗಿ ಮಾಡಿದಾಗ ಮಾತ್ರ ಪ್ರಶಸ್ತಿಗೆ ಮತ್ತಷ್ಟು ಗೌರವ. ತಾವು ಬೆಳೆದು ಇನ್ನೊಬ್ಬರನ್ನು ಬೆಳೆಸುವುದೇ ನಿಜ ಸನ್ಮಾರ್ಗ ಎಂದರು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಮಾತನಾಡಿ, ಅನ್ನದಾನೀಶ್ವರ ಮಠ ಅನ್ನ, ಜ್ಞಾನ, ಅರಿವು ನೀಡುವ ತಾಣವಾಗಿದೆ. ಅದರಲ್ಲೂ ಕುಕನೂರಿನ ಶಾಖಾಮಠದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

71 ಗ್ರಾಮಗಳ ನಾನಾ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 144 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪಪಂ ಅಧ್ಯೆಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಪ್ರಮುಖರಾದ ವೀರಣ್ಣ ಅಣ್ಣಿಗೇರಿ, ಬವಸನಗೌಡ ಪಾಟೀಲ ದೇಸಾಯಿ, ಅಶೋಕ ತೋಟದ, ಡಾ. ಜಂಬಣ್ಣ ಅಂಗಡಿ, ವೀರಯ್ಯ ತೋಂಟದಾರ್ಯಮಠ, ಎಂ.ಬಿ ಅಳವಂಡಿ, ಸಂಗಮೇಶ ಕಲ್ಮಠ, ಲಕ್ಷ್ಮಣ ಕಾಳಿ, ಎಸ್.ಎಸ್. ಕೊಪ್ಪದ, ಕಳಕಪ್ಪ ಕುಂಬಾರ, ಖಾಸಿಂಸಾಬ್ ಸಂಗಟಿ, ಶೇಖಪ್ಪ ಕಂಬಳಿ, ಮಹಾದೇವಪ್ಪ ಮಡಿವಾಳರ ಇತರರಿದ್ದರು.