ಮಹಿಳಾ ಸಾಂತ್ವನ ಕೇಂದ್ರ ಹಾಗೂ ಶಿಶುಪಾಲನಾ ಕೇಂದ್ರದ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಮಾಡಿರುವ ಆರೋಪಗಳು ಬೇಸರ ತಂದಿವೆ. ಕಳೆದ 16 ವರ್ಷಗಳಿಂದ ಸಾಂತ್ವನ ಕೇಂದ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಹಿಳಾ ಒಕ್ಕೂಟ ಹಾಗೂ ಸಾಂತ್ವನ ಕೇಂದ್ರದ ಅಧ್ಯಕ್ಷೆ ಯಶೋಧ ಶೆಟ್ಟಿ ಅಜೆಕಾರು
ಕಾರ್ಕಳ : ಮಹಿಳಾ ಸಾಂತ್ವನ ಕೇಂದ್ರ ಹಾಗೂ ಶಿಶುಪಾಲನಾ ಕೇಂದ್ರದ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಮಾಡಿರುವ ಆರೋಪಗಳು ಬೇಸರ ತಂದಿವೆ. ಕಳೆದ 16 ವರ್ಷಗಳಿಂದ ಸಾಂತ್ವನ ಕೇಂದ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಹಿಳಾ ಒಕ್ಕೂಟ ಹಾಗೂ ಸಾಂತ್ವನ ಕೇಂದ್ರದ ಅಧ್ಯಕ್ಷೆ ಯಶೋಧ ಶೆಟ್ಟಿ ಅಜೆಕಾರು ಹೇಳಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಟುಂಬಿಕ ಕಲಹಗಳಿಗೆ ರಾಜಿ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಸಭೆಗಳಿಗೆ ತೆರಳಿ ಕೌಟುಂಬಿಕ ಕಲಹಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. ಕೇಂದ್ರಕ್ಕೆ ಬರುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರಸ್ತುತ ಶಿಶುಪಾಲನಾ ಕೇಂದ್ರದಲ್ಲಿ ಏಳು ಮಕ್ಕಳು ಇದ್ದಾರೆ. ಕಳೆದ 16 ವರ್ಷಗಳಿಂದ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ಯಾವುದೇ ಹಣದ ದುರುಪಯೋಗವಾಗಿಲ್ಲ ಅಥವಾ ಭ್ರಷ್ಟಾಚಾರ ನಡೆದಿಲ್ಲ. ಅಧ್ಯಕ್ಷರು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ರಮಿತಾ ಶೈಲೇಂದ್ರ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಯಶೋಧ ಶೆಟ್ಟಿ ಹೇಳಿದರು. ಸಿಡಿಪಿಒರಿಂದ ಸಿಬ್ಬಂದಿ ಆಯ್ಕೆ:
ಸಿಬ್ಬಂದಿ ಆಯ್ಕೆ ಬಗ್ಗೆ ಸ್ಪಷ್ಟನೆ ನೀಡಿದ ಯಶೋಧ ಶೆಟ್ಟಿ, ಸಾಂತ್ವನ ಕೇಂದ್ರದ ಸಿಬ್ಬಂದಿ ಆಯ್ಕೆ ಜವಾಬ್ದಾರಿ ಸಿಡಿಪಿಒ ಅವರದ್ದಾಗಿತ್ತು. ಸಾಂತ್ವನ ಕೇಂದ್ರದಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಹತೆ ಹೊಂದಿರುವವರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಸಿಡಿಪಿಒ ಒತ್ತಾಯದ ಮೇರೆಗೆ ಬಿಬಿಎಂ ವ್ಯಾಸಂಗ ಮಾಡುತ್ತಿದ್ದವರನ್ನು ಸಿಬ್ಬಂದಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾವಿತ್ರಿ ಮನೋಹರ್, ಸಾಂತ್ವನ ಕೇಂದ್ರದಲ್ಲಿರುವ ಸಿಬ್ಬಂದಿಗೆ ಅನುಭವದ ಕೊರತೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ಅಗತ್ಯ ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಿ ಮಹಿಳೆಯರಿಗೆ ಸಾಂತ್ವನ ನೀಡುತ್ತಾರೆ. ಇದನ್ನು ತಪ್ಪಾಗಿ ಅರ್ಥೈಸಬಾರದು. ಅಧ್ಯಕ್ಷರು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ ಎಂದು ಹೇಳಿದರು.ಸಾಂತ್ವನ ಕೇಂದ್ರದ ಕಟ್ಟಡವನ್ನು ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಪಾಲಿಸಿಯೇ ನಿರ್ಮಿಸಲಾಗಿದೆ. ಕೇಂದ್ರದ ಕಾರ್ಯನಿರ್ವಹಣೆ, ಅಧ್ಯಕ್ಷರ ಪಾತ್ರ ಹಾಗೂ ಹಣಕಾಸಿನ ವಿಚಾರದಲ್ಲಿ ಮಾಡಲಾಗಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ರತ್ನಾವತಿ ನಾಯಕ್, ಶಾಂತ ಭಂಡಾರಿ, ವಸಂತಿ ಸುವರ್ಣ, ಜ್ಯೋತಿ ಲಕ್ಷ್ಮೀ, ಶ್ರೀಲತಾ ಶರ್ಮ ನಿಟ್ಟೆ ಹಾಗೂ ಸಾಂತ್ವನ ಮತ್ತು ಶಿಶುಪಾಲನಾ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.