ಸಾರಾಂಶ
ರಾಜನ ಆಜ್ಞೆಗಳು ಅಂದಿನ ಕಾನೂನುಗಳಾಗಿದ್ದವು. ಸಮಾನತೆ, ನ್ಯಾಯ ಮತ್ತು ಉತ್ತಮ ಪ್ರಜ್ಞೆಯಾಧಾರಿತ ನ್ಯಾಯ ವಿತರಿಸಲಾಗುತ್ತಿತ್ತು ಎಂದು ಹೈಕೋರ್ಟ್ ನ್ಯಾಯಾಧೀಶ ಅನಂತ ರಾಮನಾಥ ಹೆಗಡೆ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ: ರಾಜಧರ್ಮ ನ್ಯಾಯಾಂಗದ ಪ್ರಕ್ರಿಯೆ ಆದ ನ್ಯಾಯ ವಿತರಣೆಯ ಮೂಲ ತಳಹದಿಯಾಗಿದೆ. ದೇಶದ ಅತ್ಯುನ್ನತ ಕಾನೂನಿಗೆ ಸಹಕರಿಸುತ್ತಿರುತ್ತದೆ. ರಾಜನ ಆಜ್ಞೆಗಳು ಅಂದಿನ ಕಾನೂನುಗಳಾಗಿದ್ದವು. ಸಮಾನತೆ, ನ್ಯಾಯ ಮತ್ತು ಉತ್ತಮ ಪ್ರಜ್ಞೆಯಾಧಾರಿತ ನ್ಯಾಯ ವಿತರಿಸಲಾಗುತ್ತಿತ್ತು. ಇಂದಿಗೂ ಇವುಗಳ ಅಡಿಯಲ್ಲಿಯೆ ಸಹಸ್ರಾರು ಕಾನೂನುಗಳು ದೇಶಾದ್ಯಂತ ಜಾರಿಗೆ ಬರುತ್ತಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಅನಂತ ರಾಮನಾಥ ಹೆಗಡೆ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಕಲಬುರಗಿ ಜಿಲ್ಲೆಯ ಮರ್ತೂರ ಸಹಯೋಗದೊಂದಿಗೆ ‘ರಾಜ ಧರ್ಮ: ನ್ಯಾಯ ವಿತರಣಾ ಕಾರ್ಯವಿಧಾನವನ್ನು ಪರಿಣಾಮಕಾರಿಯಾಗಿ ಸಮರ್ಥಿಸುತ್ತದೆ’ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿಯ ಕುಲಪತಿ ಪ್ರೊ. ಡಾ.ಸಿ. ಬಸವರಾಜು, ರಾಜಧರ್ಮ ಮೌಲ್ಯಗಳು ಸಂವಿಧಾನ ಪ್ರಸ್ತಾವನೆಯಲ್ಲಿ ಅಡಕವಾಗಿವೆ. ಈ ಮೌಲ್ಯಗಳು ದೇಶಕ್ಕೆ ಅಷ್ಟೇ ಅಲ್ಲದೆ ವಿಶ್ವಕ್ಕೆ ಮಾದರಿಯಾಗಿವೆ ಎಂದರೆ ತಪ್ಪಾಗದು ಎಂದರು. ಸಂವಿಧಾನ ಮಾನವೀಯ ಮೌಲ್ಯಗಳೊಂದಿಗೆ ರಾಜ ಧರ್ಮದ ಮೌಲ್ಯಗಳಾದ ನ್ಯಾಯ, ಸಮಾನತೆ, ಸಾರ್ವಭೌಮತ್ವ, ಪ್ರಕರಣಗಳನ್ನು ಒಳಗೊಂಡಿದೆ ಎಂದು ಹೇಳಿದರು.
ವಕೀಲರಾದ ವಿ. ಕೃಷ್ಣನ್ ಮತ್ತು ಎ.ಆರ್. ಮುಕುಂದನ್ ಉಪನ್ಯಾಸ ನೀಡಿದರು. ವಿಜ್ಞಾನೇಶ್ವರ ಪ್ರತಿಷ್ಠಾನದ ಮಹಾದೇವ ಕರ್ಡಹಳ್ಳಿ, ಕುಲಸಚಿವ (ಮೌಲ್ಯಮಾಪನ) ಪ್ರೊ. ಡಾ.ಆರ್. ಭರಮಗೌಡರ, ಉಪಸ್ಥಿತರಿದ್ದರು. ಅಮಿತಕುಮಾರ ದೇಶಪಾಂಡೆ, ಐ.ಬಿ. ಬಿರಾದಾರ, ಸುನೀಲ ಬಗಾಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಅಂಕಿತಾ ನಾಯಕ ಪ್ರಾರ್ಥಿಸಿದರು. ರೋಶ್ವಿತಾ ಶೆಟ್ಟಿ ಸ್ವಾಗತಿಸಿದರು. ಸಾದ್ವಿ ವಂದಿಸಿದರು. ಜಾನ್ವಿ ಕಟ್ಟಿ ನಿರೂಪಿಸಿದರು.