ಸಾರಾಂಶ
ಹರಪನಹಳ್ಳಿ: ಭರತ ಹುಣ್ಣಿಮೆ, ಯುಗಾದಿ ಪ್ರಯುಕ್ತ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಜರುಗುವ ಜಾತ್ರಾ ಮಹೋತ್ಸವದಲ್ಲಿ ಭಕ್ತ ಸಮೂಹಕ್ಕೆ ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.ಜಾತ್ರಾ ಸಂಬಂಧ ಉಚ್ಚಂಗಿದುರ್ಗದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಸುಗಮ ರಸ್ತೆ ಸಂಚಾರ, ವಾಹನ ಪಾರ್ಕಿಂಗ್, ಕುಡಿಯುನೀರು, ಆರೋಗ್ಯ ಸೇರಿದಂತೆ ಆಗತ್ಯ ಸೇವೆಗಳನ್ನು ಒದಗಿಸಬೇಕು ಎಂದರು.
ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಸೇರಿದಂತೆ ಸಕಲ ಸಿದ್ಧತೆಯೊಂದಿಗೆ ಪ್ರತಿ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು.ಜಾತ್ರೆ ವೇಳೆ ಸೂಕ್ತ ವಿದ್ಯುತ್ ಸಂಪರ್ಕ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆಇಬಿ ಎಇಇ ರೇಣುಕಾರಾಧ್ಯ ಅವರಿಗೆ ಸೂಚಿಸಿದರು.
ಜಾತ್ರಾ ವೇಳೆ ದೇವಿ ಸನ್ನಿಧಿಗೆ ವಯೋವೃದ್ಧಿರು, ಮಹಿಳೆಯರಿಗೆ ತೊಂದರೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ದೇವದಾಸಿ ಪದ್ಧತಿ ನಿರ್ಮೂಲನೆಗೆ ಜಾಗೃತಿ ಮೂಡಿಸಬೇಕು. ಶಿಕ್ಷಣದಿಂದ ಮಾತ್ರ ಮೌಢ್ಯತೆ, ಕಂದಾಚಾರಗಳಿಗೆ ಮುಕ್ತಿ ಸಿಗಬೇಕು, ವೈಚಾರಿಕತೆ ಸಾರಬೇಕಿದೆ ಎಂದರು.ಪೋಲೀಸ್ ವೃತ್ತ ನಿರೀಕ್ಷಕ ನಾಗರಾಜ್ ಎಂ.ಕಮ್ಮಾರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ಗಾಗಿ ಜಮೀನು ನಿಗದಿಗೊಳಿಸಲಾಗಿದೆ. ಗುಡ್ಡದ ಮೇಲೆ ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶವಿದೆ. ರಾಮಘಟ್ಟ ವೃತ್ತ, ಪಾದಗಟ್ಟೆ ಬಳಿ ಚೆಕ್ ಪೋಸ್ಟ್ ಸ್ಥಾಪಿಸಲಾಗವುದು ಎಂದರು.
ಜಾತ್ರಾ ಸಂಬಂಧ ಇಬ್ಬರು ಸಿಪಿಐ, 10 ಪಿಎಸ್‌ಐ, 29 ಎಎಸ್‌ಐ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದು ಹೇಳಿದರು.ಗ್ರಾಮದ ಮುಖಂಡ ಶಿವಕುಮಾರ್ ಸ್ವಾಮಿ ಮಾತನಾಡಿ, ಭರತ ಹುಣ್ಣಿಮೆ ವಿಶೇಷವಾಗಿದೆ. ಶಕ್ತಿಯೋಜನೆ ಜಾರಿಗೊಂಡ ನಂತರ ಅಧಿಕ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸುತ್ತಾರೆ. ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಧಾರ್ಮಿಕ ಮತ್ತು ದತ್ತಿ ಇಲಾಖೆ ಇಓ ಮಲ್ಲಪ್ಪ ಮಾತನಾಡಿದರು.ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಧಾರ್ಮಿಕ ದತ್ತಿ ಇಲಾಖೆ ಎಚ್.ಸವಿತಾ, ತಹಶೀಲ್ದಾರ್ ಗಿರೀಶ್ ಬಾಬು, ತಾಪಂ ಇಒ ಅಪೂರ್ವ ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ ರಮೇಶ್, ಉಪಾಧ್ಯಕ್ಷೆ ಕೆಂಚಪ್ಪಮಡ್ರಹಳ್ಳಿ, ದಾವಣಗೆರೆ ಸಾರಿಗೆ ಇಲಾಖೆಯ ಡಿಟಿಒ ಫಕೃದ್ದೀನ್, ಟಿಎಚ್ಒ ಡಾ.ಪೃಥ್ವಿ, ಸಿಡಿಪಿಒ ಅಶೋಕ, ಪಿಡಿಒ ಪರಮೇಶ್ವರಪ್ಪ, ಮುಖಂಡರಾದ ಶಿವಕುಮಾರಸ್ವಾಮಿ, ಗುರುಸಿದ್ದನಗೌಡ, ಹರೀಶ್, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಂಜಣ್ಣ, ಕೆಂಚಪ್ಪ, ಕುಮಾರ್, ರಮೇಶ್ ಇದ್ದರು.