ಸಾಗರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ ಮೂಲ ಸೌಲಭ್ಯ ಒದಗಿಸುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಸಾಗರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ ಮೂಲ ಸೌಲಭ್ಯ ಒದಗಿಸುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಅವರು ಬುಧವಾರ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಸಮುದಾಯ ಭವನ, ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಸುಮಾರು 15 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿವೆ. ಬಹುತೇಕ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಸಾಗರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ವ್ಯವಸ್ಥೆಯನ್ನು ಒದಗಿಸಲು ಕೋಟಿ ಕೋಟಿ ಅನುದಾನ ನೀಡುತ್ತಿದ್ದೇನೆ ಎಂದರು.

ವಿಮಾ ಕಂಪನಿಯ ಎಡವಟ್ಟಿನಿಂದ ಈ ಭಾಗದ ರೈತರಿಗೆ ಬೆಳೆ ವಿಮೆ ಹಣ ಸಿಗದೆ ತೊಂದರೆಯಾಗಿದೆ. ಆದರೆ ಸೊರಬ ಮತ್ತು ಶಿಕಾರಿಪುರ ಕ್ಷೇತ್ರದಲ್ಲಿನ ರೈತರಿಗೆ ಬೆಳೆ ವಿಮೆ ಹಣ ದೊರೆತಿದೆ. ವಿಮಾ ಕಂಪನಿಯವರು ಸಾಗರ ಕ್ಷೇತ್ರವನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ.

ವಿಮಾ ಕಂಪನಿಯಿಂದ ರೈತರಿಗೆ ತಕ್ಷಣ ಬೆಳೆಯ ವಿಮೆ ಹಣವನ್ನು ಬಿಡುಗಡೆ ಮಾಡದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ರೈತರ ಪರ ಧ್ವನಿಯೆತ್ತಿ ಹೋರಾಡುತ್ತೆನೆ. ಹಲವು ದಿನಗಳಿಂದ ಆಚಾಪುರ ಹಾಗೂ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಬೆಳೆಗಳಿಗೆ ಕಾಡಾನೆಗಳು ದಾಳಿಮಾಡಿ ರೈತರ ಬೆಳೆ ನಷ್ಟವಾಗಿದೆ.

ಆನೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ವೈಯಕ್ತಿಕ ಧನ ಸಹಾಯ ಮಾಡಿದ್ದೇನೆ. ಜೊತೆಗೆ ಸರ್ಕಾರ ಕೂಡ ಪರಿಹಾರ ನೀಡಲಿದೆ.

ಮುಂದಿನ ದಿನಗಳಲ್ಲಿ ಆನೆಗಳು ಈ ಭಾಗಕ್ಕೆ ಬಾರದಂತೆ 30 ಕಿಲೋಮೀಟರ್ ಉದ್ದದ ಟ್ರಂಚ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ಹೈಕಮಾಂಡ್ ಎಲ್ಲವನ್ನು ನಿರ್ಧರಿಸುತ್ತದೆ. ವಿರೋಧ ಪಕ್ಷದವರು ಹೇಳಿದ ಹಾಗೆ ನವೆಂಬರ್‌ನಲ್ಲಿ ಯಾವುದೇ ಕ್ರಾಂತಿಯಾಗಿಲ್ಲ. ಎಲ್ಲವೂ ಖುಷಿ ಆಗಿದೆ. ಈ ವಿಚಾರವಾಗಿ ಪಕ್ಷದ ಹೈಕಮಾಂಡ್ ಡಿ.8 ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೌತಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಮ್ಮ,ಉಪಾಧ್ಯಕ್ಷ ಅಶೋಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಿತಾ ಕುಮಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೇಮಾ ರಾಜಪ್ಪ, ಸೋಮಶೇಖರ್ ಲಗ್ಗೆರೆ, ಅಶೋಕ್ ಬೆಳೆಯೂರ, ಕಳಸೆ ಚಂದ್ರಪ್ಪ, ಮಂಜುನಾಥ್ ದಾಸನ್, ಗಂಗಮ್ಮ ನಾಗಪ್ಪ, ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.