ಬಾಬು ಜಗಜೀವನ್‌ರಾಂ ಕಟ್ಟಡ ವಿಳಂಬ, ನಗರಕ್ಕೆ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು, ಕುವೆಂಪು ವಿ.ವಿ.ಯಲ್ಲಿ ಪರಿಶಿಷ್ಟರಿಗಾಗಿ ಹಾಸ್ಟೆಲ್ ಸ್ಥಾಪನೆ, ಆಲ್ಕೋಳದ ಪ್ರೊ.ಬಿ. ಕೃಷ್ಣಪ್ಪ ಸರ್ಕಲ್ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಫೆ.2ನೇ ವಾರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಾಬು ಜಗಜೀವನ್‌ರಾಂ ಕಟ್ಟಡ ವಿಳಂಬ, ನಗರಕ್ಕೆ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು, ಕುವೆಂಪು ವಿ.ವಿ.ಯಲ್ಲಿ ಪರಿಶಿಷ್ಟರಿಗಾಗಿ ಹಾಸ್ಟೆಲ್ ಸ್ಥಾಪನೆ, ಆಲ್ಕೋಳದ ಪ್ರೊ.ಬಿ. ಕೃಷ್ಣಪ್ಪ ಸರ್ಕಲ್ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಫೆ.2ನೇ ವಾರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ನಗರದಲ್ಲಿ 2.40 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಾಬುಜಗಜೀವನ್ ರಾಮ್ ಭವನಕ್ಕೆ ಕಾಂಪೌಂಡ್ ಮತ್ತು ಇತರೆ ಕಾಮಗಾರಿಗಳಿಗಾಗಿ ಕೂಡಲೇ 50 ಲಕ್ಷ ರು. ಬಿಡುಗಡೆ ಮಾಡಿ ಕೂಡಲೇ ಲೋಕಾರ್ಪಣೆಗೊಳಿಸಬೇಕು ಎಂದು ಆಗ್ರಹಿಸಿದರು.

ಜಗಜೀವನ್ ರಾಂ ಭವನ ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿದ್ದು, ಭವನ ಉದ್ಘಾಟನೆಗೊಳ್ಳದಿರುವುದರಿಂದ ಅಲ್ಲಿ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದ್ದೂ ಅಲ್ಲದೆ, ಗಿಡಗಂಟಿಗಳು ಬೆಳೆದು ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಇನ್ನುಳಿದ ಕಾಮಗಾರಿಗಳಿಗಾಗಿ 50 ಲಕ್ಷ ರು. ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

1932ರಲ್ಲಿ ಮೈಸೂರು ಸಂಸ್ಥಾನದ ಶ್ರೀ ಕೃಷ್ಣರಾಜ ಒಡೆಯರ್ ಅವರು ಶಿವಮೊಗ್ಗದಲ್ಲಿ 50 ಹಾಸಿಗೆಯುಳ್ಳ ಮೆಗ್ಗಾನ್ ಆಸ್ಪತ್ರೆ ಸ್ಥಾಪಿಸಿದ್ದರು. ಅದು 2007ರಲ್ಲಿ ಜಿಲ್ಲಾ ಬೋಧನಾ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಸುಮಾರು 1500ಕ್ಕೂ ಹೆಚ್ಚು ರೋಗಿಗಳು ಮೆಗ್ಗಾನ್ ಆಸ್ಪತ್ರೆಗೆ ಬರುತ್ತಾರೆ. ಹಿಂದೆ ಹೇಗಿದೆ ಹಾಗೆಯೇ ಕಟ್ಟಡದಲ್ಲಿದೆ. ಇದು ಸಾಕಾಗುತ್ತಿಲ್ಲ. ಆದ್ದರಿಂದ ಶಿವಮೊಗ್ಗ ನಗರಕ್ಕೆ 10 ಎಕರೆ ಜಾಗದಲ್ಲಿ 500 ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಕುವೆಂಪು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮಂಜೂರು ಮಾಡಬೇಕು. ವಿವಿ ಆರಂಭವಾಗಿ 25 ವರ್ಷ ಕಳೆದರೂ ಎಸ್ಸಿ, ಎಸ್ಟಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇಲ್ಲದೇ ಅನಾನುಕೂಲವಾಗಿದೆ. ಕೂಡಲೇ ವಿವಿ ಕ್ಯಾಂಪಸ್ ಒಳಗೆ ಹಾಸ್ಟೆಲ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿ ವತಿಯಿಂದ 10 ವರ್ಷಗಳ ಕಾಲ ಹೋರಾಟ ನಡೆಸಿದ ಪರಿಣಾಮ ಸರ್ಕಾರ 2014ರಲ್ಲಿ ಆಲ್ಕೋಳ ಸರ್ಕಲ್‌ಗೆ ಪ್ರೊ.ಬಿ.ಕೃಷ್ಣಪ್ಪ ಸರ್ಕಲ್ ಎಂದು ನಾಮಕರಣ ಮಾಡಿದೆ ಹಾಗೂ ವೃತ್ತ ಅಭಿವೃದ್ಧಿಗೆ 1.20 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ವೃತ್ತ ಉದ್ಘಾಟನೆಗೊಂಡು 8 ವರ್ಷಗಳಾದರೂ ಮಹಾನಗರಪಾಲಿಕೆಯಾಗಲೀ ಅಥವಾ ಸ್ಮಾರ್ಟ್‌ಸಿಟಿ ಯೋಜನೆಯಡಿಲ್ಲಾಗಲೀ ಯಾವುದೇ ಅಭಿವೃದ್ಧಿ ಕಾಮಗಾರಿ ಇದುವರೆಗೂ ಆಗಿಲ್ಲ. ಈಗಿರುವ ಪ್ರೊ.ಬಿ.ಕೃಷ್ಣಪ್ಪ ಸರ್ಕಲ್, ಸರ್ಕಲ್ ರೂಪದಲ್ಲಿರದೆ ಝಡ್ ಆಕೃತಿಯಲ್ಲಿದೆ. ಈ ಜಾಗವನ್ನು ಕೆಲವರು ಒತ್ತುವರಿ ಮಾಡಿ ಮನೆ ಮತ್ತು ಮಳಿಗೆ ಹಾಗೂ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಕೂಡಲೇ ಈ ವೃತ್ತವನ್ನು ವೃತ್ತಾಕಾರವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಮೇಲ್ಕಂಡ ಸಮಸ್ಯೆಗಳನ್ನಿಟ್ಟುಕೊಂಡು ಫೆ.2ನೇ ವಾರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರದ ಗಮನಸೆಳೆಯಲಾಗುವುದು ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಎಂ.ಏಳುಕೋಟಿ, ಎಂ.ರವಿ ಹರಿಗೆ, ಮನ್ಸೂರ್, ಕೃಷ್ಣಪ್ಪ ಬೊಮ್ಮನಕಟ್ಟೆ, ಎ.ಅರ್ಜುನ್, ಬಸವರಾಜ್, ರಾಜಶೇಖರ, ಶ್ರೀನಿವಾಸ್, ಚೇತನ್ ಇನ್ನಿತರರು ಉಪಸ್ಥಿತರಿದ್ದರು.