ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಮೂಲ ಸ್ವರೂಪ ಬದಲಾಯಿಸಿ, ವಿಭಜನೆ ಮಾಡಿ ಉಪ ಬಾಡಿಗೆ ನೀಡಿ ಲಕ್ಷಾಂತರ ರು. ಪಡೆದು ಮತ್ತೊಬ್ಬರಿಗೆ ಪರಭಾರೆ ಮಾಡಿರುವ ವಿಚಾರವಾಗಿ ಸದಸ್ಯರ ನಡುವೆ ವಾದ, ಪ್ರತಿವಾದ ನಡೆಯಿತು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನೂತನ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುರ್ತುಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ವಾಣಿಜ್ಯ ಮಳಿಗೆಗಳನ್ನು ನವೀಕರಣಗೊಳಿಸಿ ಅಕ್ರಮವಾಗಿ ವಿಭಜನೆ ಮಾಡುವ ಜತೆಗೆ ಉಪ ಬಾಡಿಗೆಗೆ ನೀಡಿ ಖಾಸಗಿ ವ್ಯಕ್ತಿಗಳು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪುರಸಭೆಗೆ ನ್ಯಾಯಯುತವಾಗಿ ಸಂದಾಯವಾಗಬೇಕಿದ್ದ ಲಕ್ಷಾಂತರ ರು. ಬಾಡಿಗೆ ಉಳಿಸಿಕೊಳ್ಳಲಾಗಿದೆ ಎಂದು ಜೆಡಿಎಸ್ ಸದಸ್ಯರಾದ ಚಂದ್ರು, ಯಶವಂತ, ಎಂಗಿರೀಶ್, ಆರ್.ಸೋಮಶೇಖರ್, ಎ.ಕೃಷ್ಣ ಹಾಗೂ ರೈತಸಂಘ ಸದಸ್ಯ ಪಾರ್ಥಸಾರಥಿ ನಡುವೆ ಮಾತಿನ ಚಕಮಕಿ ನಡೆಯಿತು.ಸದಸ್ಯ ಚಂದ್ರು ಮಾತನಾಡಿ, ಪಟ್ಟಣದ ಕೋಕಿಲಾ ಚಿತ್ರಮಂದಿರದ ಎದುರು 10ನೇ ಹಣಕಾಸು ಯೋಜನೆಯಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಮೊದಲನೇ ಮಹಡಿಯಲ್ಲಿ ವಿಶಾಲ ಎರಡು ಮಳಿಗೆ ನಿರ್ಮಿಸಲಾಗಿತ್ತು. ಇದನ್ನು ಕಂಪ್ಯೂಟರ್ ತರಬೇತಿಗಾಗಿ ಭಾಸ್ಕರ್ ಮುದ್ದೇಗೌಡರಿಗೆ 11 ತಿಂಗಳ ಕರಾರಿನ ಮೇಳೆ 10 ಸಾವಿರ ಬಾಡಿಗೆಗೆ ನೀಡಲಾಗಿತ್ತು. ಬಾಡಿಗೆ ಪಡೆದ ವ್ಯಕ್ತಿ ಇದನ್ನು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಈಗ ಎರಡು ಮಳಿಗೆಗಳು ಆರು ಮಳಿಗೆಗಳಾಗಿ ರೂಪಾಂತರಗೊಂಡಿದೆ. ಇದನ್ನು ಪ್ರಶ್ನಿಸುವವರು ಯಾರು. ಪುರಸಭೆ ಮಳಿಗೆಯನ್ನು ವಿಭಜನೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ನರಳುತ್ತಿದೆ. ಈ ಪರಿಸ್ಥಿತಿಯಲ್ಲಿ ಹೊರಗುತ್ತಿಗೆ ನೌಕರರ ಗುತ್ತಿಗೆ ಪಡೆದಿರುವ ವ್ಯಕ್ತಿ ನೌಕರರ ಭವಿಷ್ಯ ನಿಧಿ ಪಾವತಿಸದ ಕಾರಣ ಪುರಸಭೆ ವಿವಿಧ ಖಾತೆಗಳಿಂದ ಜನರ ತೆರಿಗೆ ಹಣ 26 ಲಕ್ಷವನ್ನು ಭವಿಷ್ಯ ನಿಧಿಯವರು ಕಟಾವು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ರೈತ ಸಂಘ ಸದಸ್ಯ ಪಾರ್ಥಸಾರಥಿ ಮಾತನಾಡಿ, ಪಟ್ಟಣದ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಪುರಸಭೆ ಬೊಕ್ಕಸದಲ್ಲಿ ಹಣವಿಲ್ಲ. ಪುರಸಭೆ ವಾಣಿಜ್ಯ ಮಳಿಗೆಗಳು ಸಂಪನ್ಮೂಲ ತಂದು ಕೊಡುವ ಆಸ್ತಿಯಾಗಿದೆ. ಆದರೆ, ಖಾಸಗಿ ವ್ಯಕ್ತಿಗಳು ಪುರಸಭೆ ವಾಣಿಜ್ಯ ಮಳಿಗೆಯನ್ನು 16 ಲಕ್ಷಕ್ಕೆ ಪರಭಾರೆ ಮಾಡಿದ್ದಾರೆ ಎಂದರು.
ಕೆಲವರು ಮುಂಗಡ ಹಣ ಪಡೆದು ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು?, ಯಾರೇ ಆಗಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಟ್ಟು 82 ವಾಣಿಜ್ಯ ಮಳಿಗೆಗಳಿದ್ದು ಈಗಲೂ 150, 200 ಲೆಕ್ಕದಲ್ಲಿ ಬಾಡಿಗೆ ಪಡೆಯಲಾಗುತ್ತಿದೆ. ಯಾವ್ಯಾವ ವಾಣಿಜ್ಯ ಮಳಿಗೆಗಳನ್ನು ನವೀಕರಣ ಮಾಡಿ ವಿಭಜನೆ ಮಾಡಲಾಗಿದೆಯೋ ಎಲ್ಲದಕ್ಕೂ ಕ್ರಮಸಂಖ್ಯೆ ನೀಡಿ ಪ್ರತಿ ಮಳಿಗೆಗೂ ಪ್ರತ್ಯೇಕ ಬಾಡಿಗೆ ನಿಗಧಿ ಪಡಿಸಿ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.ಸದಸ್ಯ ಶಿವಕುಮಾರ್ ಮಾತನಾಡಿ, ಸೂಪರ್ ಮಾರ್ಕೇಟ್, ನೂತನ ವಾಣಿಜ್ಯ ಮಳಿಗೆ ಮತ್ತು ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಸಚಿವರಾಗಿದ್ದಾಗಲೇ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಗಿತ್ತು. ಅಧಿಕಾರಿಗಳು ಕೂಡ ಇದರ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಮತ್ತೇ ಅದೇ ವಿಚಾರವನ್ನು ಚರ್ಚೆಗೆ ತರಲಾಗಿದೆ. ಹಾಗಾದರೆ ಹಿಂದೆ ಮಾಡಿದ್ದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತವಾನೆ ವಿಚಾರ ಏನಾಯಿತು. ಪ್ರತಿ ಸಭೆಯಲ್ಲೂ ಇದೇ ವಿಚಾರ ಚರ್ಚೆ ಮಾಡುವುದರ ಅಗತ್ಯವಾದರೂ ಏನೂ ಎಂದು ಖಾರವಾಗಿ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಸತೀಶ್‌ಕುಮಾರ್ ಮಾತನಾಡಿ, ಒಳಚರಂಡಿ ಸಂಸ್ಕರಾಣಾ ಘಟಕಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪರಿಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜತೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಪರಿಹಾರದ ಮೊತ್ತ 24 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಲಾಯಿತು.ಆದರೆ, ಇಲಾಖಾ ಕಾರ್ಯದರ್ಶಿಗಳು ಅಷ್ಟು ಅನುದಾನ ಕೊಡಲು ಸಾಧ್ಯವಿಲ್ಲ. ಸದ್ಯ 4 ಕೋಟಿ ಲಭ್ಯವಿರುವುದಾಗಿ ಹೇಳಿದರು. ಜತೆಗೆ ಕೆಯುಐಡಿಎಫ್‌ಸಿ ವ್ಯವಸ್ಥಾಪಕರು 4 ಕೋಟಿ ಕೊಡುವುದಾಗಿ ತಿಳಿಸಿದ್ದಾರೆ ಎಂದು ಸಭೆಗೆ ವಿವರಣೆ ನೀಡಿದರು.
ಸಂತೆ ಮೈದಾನದಲ್ಲಿ ಸೂಪರ್ ಮಾರ್ಕೇಟ್ ಮತ್ತು ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಯುಐಡಿಎಫ್‌ಸಿಯಿಂದ 5 ರಿಂದ 10 ಕೋಟಿ ಸಾಲ ತಂದು ವಾಣಿಜ್ಯ ಕಾಮಗಾರಿ ಕೈಗೊಳ್ಳಲಾಗುವುದು. ಕಳೆದ 30 ವರ್ಷಗಳ ಹಿಂದೆ ವಾಣಿಜ್ಯ ಮಳಿಗೆ ಹರಾಜು ನಡೆದಿದೆ. ನಿಯಮದ ಪ್ರಕಾರ 12 ವರ್ಷಕ್ಕೆ ಮರು ಹರಾಜು ಆಗಬೇಕು ಹಾಗೂ ಹೊಸ ನಿಯಮದ ಪ್ರಕಾರ ವಾಣಿಜ್ಯ ಮಳಿಗೆ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಭೆಯ ಒಪ್ಪಿಗೆ ಬೇಕು ಎಂದು ವಿನಂತಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಅರ್ಚನಾ ಚಂದ್ರು, ಉಮಾಶಂಕರ್, ಆರ್.ಸೋಮಶೇಖರ್, ಗೀತಾ ಅರ್‍ಮುಗಂ, ಖಮ್ಮರುನೀಸಾ, ಇಮ್ರಾನ್ ಪಾಷ, ಜಯಲಕ್ಷ್ಷ್ಮಮ್ಮ, ಅಧಿಕಾರಿಗಳಾದ ಯಶಸ್ವಿನಿ, ಮಣಿಪ್ರಸಾದ್, ನಾಗೇಶ್ ಇತರರು ಇದ್ದರು.