ಬಯಲಾಟ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದೊಂದು ಸಾಂಸ್ಕೃತಿಕ ವಿಶ್ವಕೋಶ. ಜನಪದರ ಬದುಕಿನ ಪ್ರತಿಬಿಂಬ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಪ್ರಬಲ ಶಿಕ್ಷಣ ಕ್ಷೇತ್ರ ಎಂದು ಪ್ರಾಧ್ಯಾಪಕ ಡಾ. ಮಲ್ಲಯ್ಯ ಸಂಡೂರು ಹೇಳಿದರು.
ಹರಪನಹಳ್ಳಿ: ಬಯಲಾಟ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದೊಂದು ಸಾಂಸ್ಕೃತಿಕ ವಿಶ್ವಕೋಶ. ಜನಪದರ ಬದುಕಿನ ಪ್ರತಿಬಿಂಬ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಪ್ರಬಲ ಶಿಕ್ಷಣ ಕ್ಷೇತ್ರ ಎಂದು ಪ್ರಾಧ್ಯಾಪಕ ಡಾ. ಮಲ್ಲಯ್ಯ ಸಂಡೂರು ಹೇಳಿದರು.
ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಸ್ತರು ಸಾಂಸ್ಕೃತಿಕ ಸಂಘ ಸಹಯೋಗದೊಂದಿಗೆ ಪ್ರದರ್ಶನಗೊಂಡ ಬಿ. ಪರಶುರಾಮ ಅವರ ರಚನೆಯ ಹರಪನಹಳ್ಳಿ ಪಾಳೇಗಾರ ಎಂಬ ಬಯಲಾಟ ಉದ್ಘಾಟಿಸಿ ಮಾತನಾಡಿದರು.ಇಂದಿನ ಆಧುನಿಕತೆ, ತಂತ್ರಜ್ಞಾನದ ಪ್ರಭಾವ ಮತ್ತು ಬದಲಾದ ಜೀವನಶೈಲಿಯಿಂದಾಗಿ ಈ ಪ್ರಾಚೀನ ಕಲೆ ಇಂದು ಸಂಕಷ್ಟದಲ್ಲಿದೆ. ನಮ್ಮ ನಾಡಿನ ಶ್ರೇಷ್ಠ ಇತಿಹಾಸವನ್ನು, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ ಪಾಳೇಗಾರರ ಶೌರ್ಯ, ಸಾಹಸ ಹಾಗೂ ಬದುಕಿನ ಕಥಾನಕವನ್ನು ರಂಗದ ಮೇಲೆ ಜೀವಂತಗೊಳಿಸಲು ಬಂದಿರುವ "ಹರಪನಹಳ್ಳಿ ಪಾಳೇಗಾರ ಬಯಲಾಟ ಅವರ ಪರಿಶ್ರಮ, ಕಲೆಯ ಮೇಲಿನ ಒಲವು ಮತ್ತು ಇತಿಹಾಸದ ಬಗ್ಗೆ ಇರುವ ಕಾಳಜಿ ಎಂದು ಹೇಳಿದರು.
ಬಿ. ಪರಶುರಾಮ ಅವರ ನಿರ್ದೆಶನದಲ್ಲಿ ಮೂಡಿಬಂದಿರುವ ಈ ಕಲಾಕೃತಿಯು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ದೇಶಪ್ರೇಮ ಮತ್ತು ಚರಿತ್ರೆಯ ಕುರಿತು ಹೆಮ್ಮೆಯನ್ನು ಮೂಡಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವೂ ನನಗಿದೆ ಎಂದರು.ಯುವಜನರಲ್ಲಿ ಆಸಕ್ತಿ ಮೂಡಿಸಲು ಹಿರಿಯ ಕಲಾವಿದರಿಂದ ಕಾಲೇಜು ಮತ್ತು ಗ್ರಾಮ ಮಟ್ಟದಲ್ಲಿ ಬಯಲಾಟ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಅದಕ್ಕಾಗಿ ಇಂತಹ ಪ್ರಯೋಗವನ್ನು ಮಾಡುವುದರ ಮೂಲಕ ಬಿ. ಪರಶುರಾಮ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ ಎಂದರು.ಇಂತಹ ಅಪರೂಪದ ಬಯಲಾಟದ ಪ್ರಸಂಗಗಳು, ಹಾಡುಗಳು ಮತ್ತು ತಾಳೆಗರಿಗಳನ್ನು ಸಂಶೋಧಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ವಿಶೇಷ ಪ್ಯಾಕೇಜ್ ಘೋಷಿಸಿ, ಕಲಾವಿದರಿಗೆ ಮಾಸಾಶನ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದರು.
ಬಯಲಾಟ ಮೇಳಗಳಿಗೆ ಆರ್ಥಿಕ ನೆರವು ನೀಡಿ, ಊರೂರುಗಳಲ್ಲಿ ಪ್ರದರ್ಶನಗಳನ್ನು ಏರ್ಡಿಸುವ ಮೂಲಕ ಪ್ರೇಕ್ಷಕರನ್ನು ಮತ್ತೆ ಬಯಲಾಟದ ಕಡೆಗೆ ಸೆಳೆಯಬೇಕು, ಬಯಲಾಟವೆಂಬ ಜೀವಂತ ಕಲೆ ನಮ್ಮ ಬೇರುಗಳಿದ್ದಂತೆ, ಬೇರುಗಳು ಗಟ್ಟಿಯಾಗಿದ್ದರೆ ಮಾತ್ರ ಸಂಸ್ಕೃತಿಯ ಮರ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.ಅಖಂಡ ಬಳ್ಳಾರಿ ಜಿಲ್ಲೆಯ ಈ ಸಾಂಸ್ಕೃತಿಕ ಕಿರೀಟವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆಯು ಬಯಲಾಟದತ್ತ ಆಕರ್ಷಿತರಾಗಲು ಇಂತಹ ಹೊಸ ಹೊಸ ಬಯಲಾಟಗಳ ರಚನೆ ಮತ್ತು ಪ್ರಯೋಗಗಳು ನಡೆಯುತ್ತಲೇ ಇರಬೇಕು ಎಂದು ನುಡಿದರು.
ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ವಿ. ವೀಣಾ ಮಹಾಂತೇಶ್ ಮಾತನಾಡಿ, ಹರಪನಹಳ್ಳಿಯ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಅದಕ್ಕಾಗಿ ಹರಪನಹಳ್ಳಿಯ ಇತಿಹಾಸ ಬಹಳಷ್ಟು ವೈವಿಧ್ಯಮಯವಾಗಿದೆ ಎಂದರು. ಬಾಗಳಿ ರಾಜಶೇಖರ ಮಾತನಾಡಿದರು. ಬಯಲಾಟ ರಚನೆಕಾರ ಬಿ. ಪರಶುರಾಮ, ಕೆ.ಆರ್. ಆಶಾ, ಅನುಷಾ, ಮಮತಾ ವೈ. ಪಟೇಲ, ಬಸವರಾಜ ಶಿಗ್ಗಾಂವ್, ಫಕ್ಕೀರೇಶ ಕೊಂಡಯಿ, ಚಂದ್ರಶೇಖರ ಗುರುವಯ್ಯ, ಮೌನೇಶ್ವರ ಭಜಂತ್ರಿ, ಎಂ. ಮಾರುತಿ, ಕರುವಿನ ಆನಂದ ಸೇರಿದಂತೆ ಪ್ರೇಕ್ಷಕರು ಇದ್ದರು.