₹4,470 ಕೋಟಿ ತೆರಿಗೆ ಸಂಗ್ರಹ ಗುರಿ

| Published : Mar 01 2024, 02:15 AM IST

ಸಾರಾಂಶ

ಬಿಬಿಎಂಪಿ ಆಡಳಿತಾಧಿಕಾರಿಗಳು ಬಿಬಿಎಂಪಿ ಬಜೆಟ್‌ ಮಂಡಿಸಿದ್ದು, ಅದರ ಸಾರಾಂಶ ಕ್ಷೇತ್ರವಾರು ಇಂತಿವೆ.

ಕಂದಾಯ

ತರ್ಕಬದ್ಧ ಮೌಲ್ಯಾಧಾರಿತ ಆಸ್ತಿ ತೆರಿಗೆ ಸಂಗ್ರಹ

ಬಿಬಿಎಂಪಿಯು ಏಪ್ರಿಲ್‌ ನಿಂದ ಜಾರಿಗೊಳಿಸುತ್ತಿರುವ ಮಾರ್ಗಸೂಚಿ ಆಧಾರಿತ ಆಸ್ತಿ ತೆರಿಗೆ ಸಂಗ್ರಹ ಹಾಗೂ ಒಟಿಎಸ್‌ ಸೇರಿದಂತೆ 2024-25ನೇ ಸಾಲಿನಲ್ಲಿ ₹4,470 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ.

ಬಿಬಿಎಂಪಿಯಲ್ಲಿ ಪ್ರಸ್ತುತ ಜಾರಿಯಲ್ಲಿ 17 ಸ್ಲ್ಯಾಬ್‌ ಗಳನ್ನು 6 ಸ್ಲ್ಯಾಬ್‌ಗಳಿಗೆ ಇಳಿಕೆ ಮಾಡಿ ತರ್ಕಬದ್ಧ ಮೌಲ್ಯಾಧಾರಿತ ಆಸ್ತಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಇ- ಆಸ್ತಿ ಡಿಜಿಟಲಿಕರಣದಿಂದ ಆಸ್ತಿ ತೆರಿಗೆ ಮೌಲ್ಯ ಮಾಪನ ಸರಳಿಕರಣವಾಗಲಿದ್ದು, ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಬೀಳಲಿದೆ. ಇನ್ನು ಆಸ್ತಿ ತೆರಿಗೆ ಸುಸ್ತಿದಾರರಿಗೆ ಬಡ್ಡಿ ಹಾಗೂ ದಂಡ ರಿಯಾಯಿತಿ ಘೋಷಣೆ ಮಾಡಿದೆ. ಇದರಿಂದ 15 ಲಕ್ಷ ತೆರಿಗೆದಾರರಿಗೆ ₹2500 ಕೋಟಿವರೆಗೆ ಬಡ್ಡಿ ಮತ್ತು ದಂಡ ಮನ್ನಾವಗಲಿದೆ. ಒಟ್ಟಾರೆ, ₹4,470 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.

ಸದ್ಯ ಫೆಬ್ರವರಿ ಅಂತ್ಯಕ್ಕೆ ₹3,650 ಕೋಟಿ, ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಮುಂದಿನ ಒಂದು ತಿಂಗಳಿನಲ್ಲಿ (ಮಾರ್ಚ್‌) ಕಳೆದ ವರ್ಷ ಹಾಕಿಕೊಂಡಂತೆ ₹4,100 ಕೋಟಿ ಗುರಿ ತಲುಪಬೇಕಿದೆ. ಒಟಿಎಸ್‌ ಮೂಲಕ ಹೆಚ್ಚಿನ ಮೊತ್ತ ಸಂಗ್ರಹವಾಗುವ ಸಾಧ್ಯತೆ ಇದ್ದು, ಈ ವರ್ಷ ಗುರಿ ಸಾಧನೆಯಾಗಲಿದೆ ಎನ್ನಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ 20 ಲಕ್ಷ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗಿದ್ದು ಅವುಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಈ ಕಾರ್ಯದಿಂದ ಪಾರದರ್ಶಕತೆ ತರಲಿದ್ದು, ಎಲ್ಲ ಖಾತೆದಾರರಿಗೂ ಇ-ಖಾತೆ ನೀಡಲಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನೋಂದಣಿಯಾಗುವ ಸ್ವತ್ತುಗಳು ವಿದ್ಯುನ್ಮಾನವಾಗಿ ನಮ್ಮ ಸ್ವತ್ತು ವ್ಯವಸ್ಥೆಗೆ ರವಾನೆಯಾಗಲಿದೆ. ಇದರಿಂದ ಖಾತೆ ವರ್ಗಾವಣೆಯೂ ಸ್ವಯಂ ಚಾಲಿತವಾಗುತ್ತದೆ. ಹಾಗೆಯೇ ಡ್ರೋನ್ ಆಧಾರಿತವಾಗಿ 163 ವಾರ್ಡ್‌ಗಳಲ್ಲಿ ಆಸ್ತಿಗಳ ಅಳತೆಯನ್ನು ಮಾಡಲಾಗಿದೆ. ಉಳಿದ ವಾಡ್‌ಗಳಲ್ಲಿಯೂ ಡ್ರೋನ್ ಸರ್ವೇ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಏಪ್ರಿಲ್‌ನಿಂದ ಹೊಸ ಆಸ್ತಿ ತೆರಿಗೆ ಪದ್ದತಿ ಜಾರಿ

ಒಟಿಎಸ್‌ನಿಂದ 15 ಲಕ್ಷ ಆಸ್ತಿ ಮಾಲೀಕರಿಗೆ ಸಹಕಾರ

20 ಲಕ್ಷ ಆಸ್ತಿ ಗಣಕೀಕರಣಗೊಳಿಸಿ ಇ-ಖಾತಾ ವಿತರಣೆ

ಆಸ್ತಿಗಳ ಆಳತೆಗೆ ಡ್ರೋನ್‌ ಸರ್ವೇಜಾಹೀರಾತು ವಿಭಾಗ

ನಗರದ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಜಾಹೀರಾತು ನೀತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಬಿಬಿಎಂಪಿ ಬಜೆಟ್‌ ನಲ್ಲಿ ಘೋಷಣೆ ಮಾಡಿದ್ದು, ನವ ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿ ರಚನೆ ಮಾಡುತ್ತಿದೆ.

ಶೀಘ್ರದಲ್ಲಿ ಜಾಹೀರಾತು ನೀತಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು. ತರ್ಕಬದ್ಧ, ಪಾರದರ್ಶಕ ಮತ್ತು ನಿಯಂತ್ರಿತ ವ್ಯವಸ್ಥೆಗೆ ಅನುಮತಿ ನೀಡುವುದಕ್ಕೆ ನಿರ್ಧರಿಸಿದೆ. ಈ ವ್ಯವಸ್ಥೆಯಿಂದ ರಾಜಧಾನಿ ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ಉಂಟಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇದರಿಂದ ಬಿಬಿಎಂಪಿಯು ವಾರ್ಷಿಕ ಸುಮಾರು ₹500 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ.

ಜಾಹೀರಾತು ನೀತಿಯ ಎಲ್ಲಾ ಅಂಶಗಳ ನಿರ್ವಹಣೆಯೂ ಮಾಹಿತಿ ತಂತ್ರಜ್ಞಾನ ಆಧಾರತ ಪಾರದರ್ಶಕ ವ್ಯವಸ್ಥೆ ಮಾಡಲಾಗುವುದು. ಜಾಹೀರಾತು ಪ್ರದರ್ಶನಕ್ಕೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸುವ, ಶುಲ್ಕ ಪಾವತಿ ವ್ಯವಸ್ಥೆ ಇರಲಿದೆ ಎಂದು ಬಜೆಟ್‌ ನಲ್ಲಿ ತಿಳಿಸಲಾಗಿದೆ.

ನವ ದೆಹಲಿ ಮಾದರಿ ಜಾಹೀರಾತು ನೀತಿ

ವಾರ್ಷಿಕ 500 ಕೋಟಿ ರು. ಸಂಗ್ರಹ

ಆನ್‌ಲೈನ್‌ ಮೂಲಕ ಪರವಾನಗಿ ವಿವರಣೆಆಸ್ತಿ ವಿಭಾಗ

ಪಾಲಿಕೆ ಆಸ್ತಿ ಗುತ್ತಿಗೆ ನೀಡಲು ನಿಯಮ

ಬಿಬಿಎಂಪಿಯ ಆಸ್ತಿಗಳ ಸಂರಕ್ಷಣೆಯ ಜತೆಗೆ ಪಾಲಿಕೆ ಆಸ್ತಿಗಳನ್ನು ಬಾಡಿಗೆ ಮತ್ತು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡುವುದಕ್ಕೆ ಪ್ರಸಕ್ತ 2024ನೇ ಸಾಲಿನಲ್ಲಿ ಬಿಬಿಎಂಪಿ ಎಸ್ಟೇಟ್‌ ಮ್ಯಾನೇಜ್‌ಮೆಂಟ್‌ ನಿಯಮಗಳನ್ನು ರಚನೆ ಮಾಡಲಾಗುತ್ತಿದೆ.

ಇದು ಬಿಬಿಎಂಪಿಯ ಆಸ್ತಿಗಳನ್ನು ಬಾಡಿಗೆ/ಗುತ್ತಿಗೆ ಆಧಾರದ ಮೇಲೆ ಹಂಚಿಕೆಯು ಪಾರದರ್ಶಕವಾಗಲಿದೆ. ಬಿಬಿಎಂಪಿಯ ಆಸ್ತಿಗಳ ಸಂರಕ್ಷಣೆಗೂ ಸಹಕಾರಿಯಾಗಲಿದೆ. ಜತೆಗೆ ಬಿಬಿಎಂಪಿಯು ಉತ್ತಮ ಆದಾಯವನ್ನು ಗಳಿಸಬಹುದಾಗಿದೆ. ಸದ್ಯ ಬರುತ್ತಿರುವ ಆದಾಯವನ್ನು ವೃದ್ಧಿಸಬಹುದಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.ಆಡಳಿತ ವಿಭಾಗ

16 ಸಾವಿರ ಪೌರ ಕಾರ್ಮಿಕರ ನೇಮಕ

ಬಿಬಿಎಂಪಿಯಲ್ಲಿ ಹಲವಾರು ವರ್ಷದಿಂದ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರೊಂದಿಗೆ 16 ಸಾವಿರ ಪೌರಕಾರ್ಮಿಕ ನೇಮಕಾತಿ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗಾವಣೆಗೆ ನೀತಿ ರೂಪಿಸುವುದಾಗಿ ಘೋಷಿಸಲಾಗಿದೆ.

ಬಿಬಿಎಂಪಿಯಲ್ಲಿ ಸದ್ಯ 1435 ಖಾಯಂ ಹಾಗೂ 15,53 ನೇರ ಪಾವತಿ ಅಡಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ 16 ಸಾವಿರ ಪೌರಕಾರ್ಮಿಕರನ್ನು ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲಾಗುವುದು.

ಇನ್ನು ಹಲವಾರು ವರ್ಷದಿಂದ ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಡಳಿತಾತ್ಮಕ ಅನುಮೋದನೆ ಪಡೆಯುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಬಿಎಂಪಿ ಕಾಯ್ದೆ-2020ಕ್ಕೆ ಅಗತ್ಯ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಸಮಿತಿ ರಚನೆಗೆ ಸರ್ಕಾರಕ್ಕೆ ಪ್ರಸ್ತಾಪಿಸಲಾಗುವುದು. ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ ನೇಮಕಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಅಧಿಕಾರಿ ಸಿಬ್ಬಂದಿಯ ವರ್ಗಾವಣೆಗೆ ಸಂಬಂಧಿಸಿದಂತೆ ಈ ವರ್ಷ ಪಾರದರ್ಶಕ ನೀತಿ ಜಾರಿಗೆ ತರಲಾಗುವುದು. ಜತೆಗೆ, ಜನಸಂಖ್ಯೆಗೆ ಅನುಗುಣವಾಗಿ ಕೆಲವು ಹುದ್ದೆಗಳ ನೇಮಕಾತಿ ಕ್ರಮ ಕೈಗೊಳ್ಳಲಾಗುವುದು. ಆಡಳಿತ ಸುಧಾರಣೆಗೆ ಪ್ರಸಕ್ತ ಸಾಲಿನಲ್ಲಿ ಹಲವು ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಬಿಬಿಎಂಪಿ ಹೊಂದಿದೆ. ಬಿಬಿಎಂಪಿಯಅಧಿಕಾರಿ ಸಿಬ್ಬಂದಿ ಜ್ಞಾನಾರ್ಜನೆಗಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಗ್ರಂಥಾಲಯ ಸ್ಥಾಪನೆ, ತರಬೇತಿ ಘಟಕ ಸ್ಥಾಪನೆ, ಇಂದಿರಾ ಕ್ಯಾಂಟೀನ್‌ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ

ಪಾರದರ್ಶಕ ವರ್ಗಾವಣೆ ನೀತಿ

16 ಸಾವಿರ ಪೌರಕಾರ್ಮಿಕರ ನೇಮಕ

ಕೇಂದ್ರ ಕಚೇರಿಯಲ್ಲಿ ಗ್ರಂಥಾಲಯ, ಇಂದಿರಾ ಕ್ಯಾಂಟೀನ್‌ಸುಗಮ ಸಂಚಾರ

2 ಸುರಂಗ ರಸ್ತೆಗೆ ₹200 ಕೋಟಿ

ಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರ ಕಲ್ಪನೆಯಡಿಯಲ್ಲಿ ಸುಗಮ ಸಂಚಾರಕ್ಕಾಗಿ ಸುರಂಗ ಮಾರ್ಗ ನಿರ್ಮಾಣದ ಯೋಜನೆಗೆ ತಯಾರಿ ನಡೆಸಲಾಗಿದ್ದು. ಇದಕ್ಕಾಗಿ ₹200 ಕೋಟಿ ಒದಗಿಸಲಾಗಿದೆ. ಪ್ರಾಯೋಗಿಕವಾಗಿ ಎರಡು ಸ್ಥಳದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ ಮತ್ತೊಂದು ಕಡೆ ಸುರಂಗ ರಸ್ತೆಯ ಬಗ್ಗೆ ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಸುರಂಗ ರಸ್ತೆ ಯೋಜನೆಗೆ ಆರಂಭಿಕ ಮೊತ್ತವಾಗಿ ಬಿಬಿಎಂಪಿ ₹200 ಕೋಟಿ ಮೀಸಲಿಟ್ಟಿದೆ.

ವಿವಿಧ ರಸ್ತೆ ಅಗಲೀಕರಣ

ಜನಸಂದಣಿ ಇರುವ ಕನಕಪುರ ಮುಖ್ಯ ರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಣ್ಣೂರಿನಿಂದ ಬಾಗಲೂರು ರಸ್ತೆಗಳ ಅಗಲೀಕರಣ, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಾದರಾಯನಪುರ ರಸ್ತೆ ಅಗಲೀಕರಣಕ್ಕಾಗಿ ₹130 ಕೋಟಿ ಒದಗಿಸಲಾಗುತ್ತಿದೆ.

ಇನ್ನು ಬಳ್ಳಾರಿ ರಸ್ತೆಯಿಂದ ಬೇಗೂರು ಮಾರ್ಗವಾಗಿ ಸಾತನೂರು ಮೀಸಗಾನಹಳ್ಳಿ ಮುಖಾಂತರ ಪರ್ಯಾಯ ಮಾರ್ಗ ನಿರ್ಮಾಣ ಹಾಗೂ ಕೆಂಗೇರಿ ಉಪನಗರದಿಂದ ಮೈಸೂರು ರಸ್ತೆಗೆ ನೇರ ಸಂಪರ್ಕಕ್ಕೆ ಮೇಲ್ಸೆತುವೆ ನಿರ್ಮಾಣಕ್ಕೆ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ.

145 ಕಿ.ಮೀ. ರಸ್ತೆ ವೈಟ್ ಟಾಪಿಂಗ್

ಸುಗಮ ಸಂಚಾರ ಹಾಗೂ ಗುಂಡಿ ಮುಕ್ತ, ಗುಣಮಟ್ಟದ ಹಾಗೂ ಕಡಿಮೆ ವೆಚ್ಚ, ದೀರ್ಘ ಕಾಲ ಬಾಳಿಕೆ ಬರುವಂತಾಗಲು 145 ಕಿ.ಮೀ. ಉದ್ದದ ರಸ್ತೆಯನ್ನು ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ₹800 ಕೋಟಿ ಹಾಗೂ ₹900 ಕೋಟಿ ಪಾಲಿಕೆ ಅನುದಾನದಿಂದ 2 ವರ್ಷಗಳಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಮೊದಲ ಕಂತಿನಲ್ಲಿ ಬಜೆಟ್‌ನಲ್ಲಿ ₹300 ಕೋಟಿ ನೀಡಲಾಗಿದೆ.

ರಾಜಕಾಲುವೆಗಳ ಬದಿ ನಡಿಗೆ ಮಾರ್ಗ

ಬೆಂಗಳೂರು ಹೊರವಲಯದಲ್ಲಿರುವ ರಾಜಕಾಲುವೆಗಳ ಬಫರ್ ಪ್ರದೇಶವನ್ನು ಟಿಡಿಆರ್ ಆಧಾರದ ಮೇಲೆ ಭೂ ಸ್ವಾಧೀನಪಡಿಸಿಕೊಂಡು ಈ ಕಾಲುವೆಗಳ ಇಕ್ಕೆಲಗಳಲ್ಲಿ ಲಘು ವಾಹನ ಸಂಚಾರಕ್ಕೆ ರಸ್ತೆ ಪಥಗಳನ್ನು, ಸೈಕಲ್ ಪಥಗಳು, ಜನಸ್ನೇಹಿ ನಡಿಗೆ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 300 ಕಿ.ಮೀ. ಉದ್ದದ ಇಂತಹ ರಸ್ತೆಗಳನ್ನು ₹600 ಕೋಟಿ ವೆಚ್ಚದಲ್ಲಿ 3 ವರ್ಷಗಳಲ್ಲಿ ಕೈಗೊಳ್ಳಲಾಗುವುದು. ಹೆಚ್ಚುವರಿ ಆಸ್ತಿ ತೆರಿಗೆಯ ಸಂಗ್ರಹದಲ್ಲಿ ರಾಜಕಾಲುವೆಗಳ ಬಫರ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ₹100 ಕೋಟಿ ಒದಗಿಸಲಾಗುತ್ತಿದೆ.

ಪರಿಸರ ಸ್ನೇಹಿ ನಡಿಗೆ ಪಥ

15ನೇ ಹಣಕಾಸು ಆಯೋಗದ ಪರಿಶುದ್ಧ ಗಾಳಿ ಯೋಜನೆಯಡಿ ಲಭ್ಯವಾಗಿರುವ ಅನುದಾನದಲ್ಲಿ ಹಾಗೂ ಬಿಬಿಎಂಪಿ ಆಯವ್ಯಯದಲ್ಲಿ 45 ಕಿಮೀ ಉದ್ದದ ಪಾದಚಾರಿ ಸ್ನೇಹಿ ನಡಿಗೆ ಪಥಗಳನ್ನು ಸ್ಥಾಪಿಸಲು ₹135 ಕೋಟಿ ಮೀಸಲಿಡಲಾಗುತ್ತಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ₹380 ಕೋಟಿ ವೆಚ್ಚದಲ್ಲಿ ರೋಟರಿ ಮೇಲ್ಸೇತುವೆ ನಿರ್ಮಿಸಲಾಗುವುದು.

ಡಬಲ್‌ ಡೆಕ್ಕರ್ ರಸ್ತೆ

ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವಂತಹ ಪ್ರದೇಶಗಳಲ್ಲಿ ಮೆಟ್ರೋ ಯೋಜನೆ ಸಾಗಿದ್ದು ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯೊಂದಿಗೆ ಮೆಟ್ರೋ ಹಾದು ಹೋಗುವ ಮಾರ್ಗದಲ್ಲೇ ಸಂಯುಕ್ತ ಮೆಟ್ರೋ-ರಸ್ತೆ ಮಾರ್ಗ (ಡಬಲ್ ಡೆಕ್ಕರ್ ರಸ್ತೆ)ಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದ್ದು ಇದಕ್ಕಾಗಿ ₹100 ಕೋಟಿ ಪ್ರಾರಂಭಿಕ ಅನುದಾನವನ್ನು ಬಜೆಟ್‌ ನಲ್ಲಿ ಒದಗಿಸಲಾಗಿದೆ.

ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌

ವಾಹನಗಳ ನಿಲಗಡೆ ಸಮಸ್ಯೆಯನ್ನು ನಿವಾರಿಸಲು ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಖಾಸಗಿ ಇಲ್ಲವೇ ಸಂಸ್ಥೆಗಳು ಮುಂದೆ ಬಂದಲ್ಲಿ ಅಂತಹವರಿಗೆ ಶುಲ್ಕವಿಲ್ಲದೆ ಪರವಾನಗಿ ನೀಡಲು ಚಿಂತನೆ ಮಾಡಲಾಗಿದೆ. ಸ್ವಾತಂತ್ರ್ಯ ಉದ್ಯಾನವನ, ಕಿದ್ವಾಯಿ ಸಂಸ್ಥೆಯ ಆವರಣದಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಬಹು ಮಹಡಿ ವಾಹನ ನಿಲ್ದಾಣವನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ. ಇದು ಮಾತ್ರವಲ್ಲದೆ, ಪಾಲಿಕೆಗಳ ಆಟದ ಮೈದಾನದ ತಳಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪಿಪಿಪಿ ಆಧಾರದಲ್ಲಿ ಅನುಷ್ಠಾನ ಮಾಡಲಿದ್ದು, ಇದಕ್ಕಾಗಿ ₹5 ಕೋಟಿ ಒದಗಿಸಲಾಗುತ್ತಿದೆ.

ದುರಸ್ತಿ, ನಿರ್ವಹಣೆಗೆ ₹450 ಕೋಟಿ, ಮೇಲ್ಸೆತುವೆ, ಕೆಳ ಸೇತುವೆಗಳ ನಿರ್ವಹಣೆ ಜೊತೆಗೆ ಕೆಳಸೇತುವೆಗಳ ಬಳಿ ಮಳೆ ನೀರು ಸುಗಮವಾಗಿ ಹರಿಯುವಂತೆ ಮಾಡಲು ಹಾಗೂ ದುರಸ್ತಿಗಾಗಿ ₹25 ಕೋಟಿ, ಆರ್ಟಿಯಲ್, ಸಬ್ ಆರ್ಟಿಯಲ್ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ₹40 ಕೋಟಿ ಅನುದಾನ ಒದಗಿಸಲಾಗಿದೆ. ಪಾಲಿಕೆ ವಾರ್ಡ್‌ಗಳ ನಿರ್ವಹಣೆ ಕಾಮಗಾರಿಗಳಿಗೆ ಪ್ರತಿ ವಾರ್ಡ್‌ಗೆ ₹75 ಲಕ್ಷ ಚರಂಡಿಗಳ ಹೂಳೆತ್ತಲು ₹30 ಲಕ್ಷ, ರಸ್ತೆ ಗುಂಡಿ ಮುಚ್ಚಲು ₹15 ಲಕ್ಷ, ಪಾದಚಾರಿ ಮಾರ್ಗ ನಿರ್ವಹಣೆಗೆ ₹25 ಲಕ್ಷ, ಮುಂಗಾರು ಕಂಟ್ರೋಲ್ ನಿರ್ವಹಣೆಗೆ ತಲಾ ₹5 ಲಕ್ಷ ನೀಡಲಾಗಿದೆ.

ಪ್ರತಿ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತಲಾ ₹1.25 ಕೋಟಿಳ ಅನುದಾನ ನಿಗದಿ ಮಾಡಿ ಒಟ್ಟು 225 ವಾರ್ಡ್‌ಗಳಿಗೆ ₹450 ಕೋಟಿ ಅನುದಾನ ನೀಡಲಾಗುವುದು ಎಂದು ತಿಳಿಸಲಾಗಿದೆ.ಸ್ವಚ್ಛ ಬೆಂಗಳೂರು

ತ್ಯಾಜ್ಯ ನಿರ್ವಹಣೆಗೆ ₹1952 ಕೋಟಿ ವೆಚ್ಚ

ಬೆಂಗಳೂರು ನಗರದ ಕಸ ಸಂಗ್ರಹಣೆ, ವಿಂಗಡಣೆ, ಭೂಭರ್ತಿ ಪ್ರದೇಶದ ಅಭಿವೃದ್ಧಿ, ಘನತ್ಯಾಜ್ಯ ಸಂಸ್ಕರಣೆ ಘಟಕಗಳ ನಿರ್ವಹಣೆಗೆ ಒಟ್ಟಾರೆ ಬಿಬಿಎಂಪಿ 2024-25ನೇ ಸಾಲಿನಲ್ಲಿ ₹1952.19 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿದೆ. ಈ ಪೈಕಿ ಒಂದು ಸಾವಿರ ಕೋಟಿ ರು.ಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿಗೆ ನೀಡಲಿದೆ. ಉಳಿದಂತೆ ಈಗಾಗಲೇ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ತ್ಯಾಜ್ಯ ಸಂಸ್ಕರಣೆ ಮತ್ತು ಉತ್ಪಾದನೆಯ ನಡುವಿನ ಅಂತರದಿಂದಾಗಿ ಘನತ್ಯಾಜ್ಯ ನಿರ್ವಹಣೆ ಪ್ರಮುಖ ಸವಾಲಾಗಿದ್ದು ಮುಂದಿನ 25 ರಿಂದ 30 ವರ್ಷಗಳವರೆಗೆ ತ್ಯಾಜ್ಯ ಸಂಸ್ಕರಿಸಲು 50 ರಿಂದ 100 ಎಕರೆಗಳಷ್ಟು ಜಾಗವನ್ನು 4 ದಿಕ್ಕುಗಳಲ್ಲೂ ಗುರುತಿಸಿ ಜಮೀನು ಖರೀದಿಗಾಗಿ ₹100 ಕೋಟಿ ಮೀಸಲಿರಿಸಲಾಗಿದೆ.ಹಳೆ ಕಸ ವೈಜ್ಞಾನಿಕ ನಿರ್ವಹಣೆ

ಬೆಂಗಳೂರಿನ ಮಂಡೂರು, ಮಾವಳ್ಳಿಪುರ ತ್ಯಾಜ್ಯ ಘಟಕಗಳಲ್ಲಿ ಬಯೋಮೈನಿಂಗ್ ಮುಖೇನ ಹಾಗೂ ಬೆಳ್ಳಹಳ್ಳಿ ಘಟಕದಲ್ಲಿ ಬಯೋ-ರೆಮಿಡಿಯೇಷನ್ ಮುಖೇನ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ತಡೆಗಟ್ಟಲಾಗುತ್ತದೆ. ಒಣ ತ್ಯಾಜ್ಯ ನಿರ್ವಹಣೆಗೆ ವಾರ್ಡ್‌ಗಳಲ್ಲಿ ಪ್ರತಿನಿತ್ಯ 3 ರಿಂದ 4 ಟನ್ ಸಾಮರ್ಥ್ಯದ 22 ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.ಹಸಿರು ಬೆಂಗಳೂರು

ಹಸಿರು ಹೆಚ್ಚಳಕ್ಕಾಗಿ ಹವಾಮಾನ ಕ್ರಿಯಾ ಕೋಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿರಿನ ಪ್ರಮಾಣ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಹವಾಮಾನ ಕ್ರಿಯಾ ಕೋಶ ರಚಿಸಲಾಗಿದೆ. ಹವಾಮಾನ ಬದಲಾವಣೆ ಅಪಾಯಗಳನ್ನು ನಿವಾರಿಸಲು ಈ ಕೋಶಕ್ಕೆ ₹10 ಕೋಟಿ ಅನುದಾನ ನೀಡಲಾಗುತ್ತದೆ. ಗಿಡ ಮರಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಸಿರು ರಕ್ಷಕ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ 52 ಸಾವಿರ ವಿದ್ಯಾರ್ಥಿಗಳನ್ನು ಟ್ಯಾಗ್ ಮಾಡಲಾಗಿದೆ. ಈ ವರ್ಷ ಬೆಂಗಳೂರಿನಲ್ಲಿ 2 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ದಾಸರಹಳ್ಳಿ ಹಾಗೂ ಯಲಹಂಕದಲ್ಲಿ 2 ಹೈಟೆಕ್‌ ಸಸ್ಯ ಕ್ಷೇತ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕಾಗಿ ₹14 ಕೋಟಿ ನೀಡಲಾಗಿದೆ. ಇನ್ನು ಮರ ಗಣತಿಗೆ ₹1 ಕೋಟಿ ಮೀಸಲಿಡಲಾಗಿದೆ.

ಹೊಸ ಉದ್ಯಾನವನಕ್ಕೆ ₹35 ಕೋಟಿಬಿಡಿಎ ಬಡಾವಣೆಗಳು ಪಾಲಿಕೆಗೆ ಹಸ್ತಾಂತರವಾಗಿದ್ದು, ಈ ಬಡಾವಣೆಗಳಲ್ಲಿರುವ ಉದ್ಯಾನವನಗಳನ್ನು ಮೇಲ್ದರ್ಜೆಗೇರಿಸಲು ₹35 ಕೋಟಿ ನೀಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಕೆರೆಗಳಿದ್ದು ಈಗಾಗಲೇ 114 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಕೆರೆಗಳ ನಿರ್ವಹಣೆಗಾಗಿ ಕೆರೆಮಿತ್ರ ಮೊಬೈಲ್ ವೆಬ್ ತಂತ್ರಾಂಶ ರೂಪಿಸಲಾಗಿದೆ. ಅಂತರ್ಜಲ ಕಾಪಾಡಿಕೊಳ್ಳಲು ಕ್ರಮ ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಅರಿತು ಬಿಬಿಎಂಪಿ ಬಜೆಟ್‌ ನಲ್ಲಿ ನೀರಿನ ನಿರ್ವಹಣೆ ಮತ್ತು ಅಂತರ್ಜಲ ಕಾಪಾಡಿಕೊಳ್ಳುವುದಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.ನಗರದ ಅಂತರ್ಜಲ ಕಾಪಾಡಿಕೊಳ್ಳುವುದಕ್ಕೆ ಮಳೆ ನೀರು ಕೋಯ್ಲು ವ್ಯವಸ್ಥೆ ಅನುಷ್ಠಾನ ಮಾಡಲಾಗುವುದು. ಎಲ್ಲಾ ಪಾರ್ಕ್‌ ಗಳಿಗೆ ಕಡ್ಡಾಯಾಗಿ ಸಂಸ್ಕರಿಸಿದ ನೀರು ಬಳಕೆಗೆ ನಿರ್ಧಿಸಲಾಗಿದೆ. ಬೆಂಗಳೂರು ನಗರದಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ವ್ಯವಸ್ಥೆ ಅಳವಡಿಸಿಕೊಳ್ಳುವುದು, ಇದನ್ನು ದೃಢೀಕರಿಸಿಕೊಳ್ಳುವುದಕ್ಕೆ ಎಲ್ಲಾ ಇಲಾಖೆಗಳಿಂದ ದೃಢೀಕರಣ ಪತ್ರ ಪಡೆಯುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.ಅಮೃತ್‌ 2.0 ಯೋಜನೆಯಡಿಯಲ್ಲಿ 25 ಕಲ್ಯಾಣಿಗಳ ಪುನರುಜ್ಜೀವನ ಮಾಡುವುದಕ್ಕೆ ₹1 ಕೋಟಿ ವೆಚ್ಚ, ತಲಾ ₹5 ಲಕ್ಷ ವೆಚ್ಚದಲ್ಲಿ ತೆರೆದ 50 ಬಾವಿ ಪುನರುಜ್ಜೀವನ, ₹20 ಲಕ್ಷದಂತೆ ಒಟ್ಟು 10 ಕಲ್ಯಾಣಿಗಳ ಪುನರುಜ್ಜೀವನಕ್ಕೆ ₹5 ಕೋಟಿ ನೀಡುವುದಾಗಿ ಬಿಬಿಎಂಪಿ ಘೋಷಿಸಿದೆ.

ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್‌ ನೆರವು?ಬಿಬಿಎಂಪಿ ವ್ಯಾಪ್ತಿಯಲ್ಲಿ 173 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಪಡಿಸುವುದಕ್ಕೆ ವಿಶ್ವ ಬ್ಯಾಂಕ್‌ ನೆರವಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಸುಮಾರು ₹2 ಸಾವಿರ ಕೋಟಿ ನೆರವು ಪ್ರಸಕ್ತ ಸಾಲಿನಲ್ಲಿ ದೊರೆಯುವ ಸಾಧ್ಯತೆ ಇದೆ. ಉಳಿದಂತೆ ಕಿರಿದಾದ ರಾಜಕಾಲುವೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ₹250 ಕೋಟಿ, ರಾಷ್ಟ್ರೀಯ ವಿಪತ್ತು ನಿಧಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಈ ಅನುದಾನ ಕಾಮಗಾರಿಗೆ ಶೇ.10 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಭರಿಸಬೇಕಿದೆ. ಪ್ರಾರಂಭಿಕ ಯೋಜನೆ ಅನುಷ್ಢಾನಕ್ಕೆ ಬಿಬಿಎಂಪಿ ₹10 ಕೋಟಿ ಅನುದಾನವನ್ನು ಬಜೆಟ್‌ ನಲ್ಲಿ ಒದಗಿಸಿದೆ.