ಮುಂಬಡ್ತಿಗೆ ಬಿಬಿಎಂಪಿ ನೌಕರರ ಪ್ರತಿಭಟನೆ

| Published : Mar 02 2024, 01:47 AM IST / Updated: Mar 02 2024, 01:48 AM IST

ಸಾರಾಂಶ

ಮುಂಬಡ್ತಿ, ಖಾಲಿ ಹುದ್ದೆಗಳ ಭರ್ತಿಗಾಗಿ ಬಿಬಿಎಂಪಿ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಲಿ ಹುದ್ದೆಗಳ ಭರ್ತಿ, ಮುಂಬಡ್ತಿ ನೀಡಬೇಕು, ಅಧಿಕಾರಿಗಳ ಅಮಾನತು ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಿ ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಅವರು, ಕಂದಾಯ ವಿಭಾಗದಲ್ಲಿ ಪ್ರತಿ ವರ್ಷ ತೆರಿಗೆ ಸಂಗ್ರಹ ಹೆಚ್ಚಳವಾದರೂ ಅಧಿಕಾರಿ, ನೌಕರರ ಮೇಲೆ ವಿನಾಕಾರಣ ಕಿರುಕುಳ, ಅಮಾನತು ಮಾಡಲಾಗುತ್ತಿದೆ. 2022-23ನೇ ಸಾಲಿನಲ್ಲಿ ₹3,339 ಕೋಟಿ ಮತ್ತು 2023-24ರ ಸಾಲಿನಲ್ಲಿ ಈವರೆಗೆ ₹3,598 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ. ಆದರೂ ಮೇಲಾಧಿಕಾರಿಗಳ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಎ ಶ್ರೇಣಿಯ ಅಧಿಕಾರಿಗಳಿಗೆ ಮುಂಬಡ್ತಿ ನೀಡಲ ಸರ್ಕಾರದ ಹಂತದಲ್ಲಿ ವಿಳಂಬವಾಗುತ್ತಿರುವುದರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮುಂಬಡ್ತಿ ನೀಡುವ ಅಧಿಕಾರ ನೀಡಬೇಕು. ಬಯೋಮೆಟ್ರಿಕ್ ಪದ್ಧತಿ ಕೈಬಿಡಬೇಕು. ವಾರ್ಡ್ ಸಂಖ್ಯೆ 225ಕ್ಕೆ ಹೆಚ್ಚಾಗಿರುವುದರಿಂದ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ. ಸಕಾಲಕ್ಕೆ ಸಿಬ್ಬಂದಿಗಳ ನೇಮಕ ಮಾಡಬೇಕು. ಬಿಬಿಎಂಪಿಯಲ್ಲಿ ಖಾಲಿ ಇರುವ 5,219 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಬೇಡಿಕೆ ಈಡೇರಿಕೆ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು. ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್, ಸೋಮಶೇಖರ್, ಕೆ.ನರಸಿಂಹ, ಎಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಸಂತೋಷ್ ಕುಮಾರ್,ಎಚ್.ಬಿ.ಹರೀಶ್ ಸೇರಿದಂತೆ ನೂರಾರು ಅಧಿಕಾರಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಕಚೇರಿ ಬಾಗಿಲಿಗೆ ಬೀಗ

ಬಿಬಿಎಂಪಿಯ ಅಧಿಕಾರಿ ನೌಕರರ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಹಿನ್ನೆಲೆಯಲ್ಲಿ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯ ವಿವಿಧ ಇಲಾಖೆಯ ಕೊಠಡಿಗಳಿಗೆ ಬೀಗ ಹಾಕಿಸಲಾಗಿತ್ತು. ಬಹುತೇಕ ಅಧಿಕಾರಿ ಸಿಬ್ಬಂದಿ ಗೈರಾಗಿದ್ದರು. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿತ್ತು. ಇದೇ ಸ್ಥಿತಿ ಬಿಬಿಎಂಪಿಯ ವಲಯ, ಉಪ ವಿಭಾಗ ವಾರ್ಡ್ ಕಚೇರಿಗಳಲ್ಲಿ ಕಂಡು ಬಂತು.