ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ವಾಣಿಜ್ಯ ಕಟ್ಟಡಗಳಿಗೆ ಕನ್ನಡ ನಾಮಲಕ ಅಳವಡಿಸಲು ನೀಡಲಾದ ಗಡುವನ್ನು ಮತ್ತೆರಡು ವಾರಕ್ಕೆ ವಿಸ್ತರಣೆ ಮಾಡಿ ಬಿಬಿಎಂಪಿ ಗುರುವಾರ ಆದೇಶಿಸಿದೆ.ಶೇ. 60ರಷ್ಟು ಕನ್ನಡ ನಾಮಲಕಗಳನ್ನು ಅಳವಡಿಸಲು ಗುರುವಾರವೇ ಕೊನೆಯ ದಿನವಾಗಿತ್ತು. ಆದರೆ, ಸುಮಾರು ಮೂರು ಸಾವಿರ ವಾಣಿಜ್ಯ ಕಟ್ಟಡಗಳಲ್ಲಿ ಅಳವಡಿಕೆ ಕಾರ್ಯ ಬಾಕಿ ಇತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಶೇ. 60ರಷ್ಟು ಕನ್ನಡ ನಾಮಲಕ ಅಳವಡಿಕೆಗೆ ಈಗಾಗಲೇ ನೀಡಲಾಗಿದ್ದ ಗಡುವನ್ನು ಸಡಿಲಗೊಳಿಸಿ ಮಾ.13 ರವರೆಗೆ (2 ವಾರಗಳ ಕಾಲ) ವಿಸ್ತರಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಅಥವಾ ಸ್ಥಳೀಯ ಪ್ರಾಕಾರಗಳಿಂದ ಅನುಮತಿ ಮತ್ತು ಮಂಜೂರಾತಿ ಪಡೆದು ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಅಥವಾ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳು ನಾಮಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಲಾಗಿದೆ ಮತ್ತು ಕನ್ನಡ ಭಾಷೆಯು ನಾಮಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿಶೇಷ ರಾಜ್ಯ ಪತ್ರಿಕಾ ಅಸೂಚನಾ ಪತ್ರದಲ್ಲಿ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.ಈ ಹಿಂದೆ ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಫೆ. 2 ಮತ್ತು 12 ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಉದ್ದಿಮೆಗಳಿಗೆ ಫೆಬ್ರವರಿ 28 ರೊಳಗೆ ನಾಮಲಕಗಳಲ್ಲಿ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಹೇಳಲಾಗಿತ್ತು. ಈಗ ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದ ಕಡೆ ಶೇ.60ರಷ್ಟು ಕನ್ನಡ ನಾಮಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯವಕಾಶ ಬೇಕೆಂಬುದನ್ನು ಪರಿಗಣಿಸಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿರ್ದೇಶನದ ಬಂದ ಹಿನ್ನಲೆಯಲ್ಲಿ ಈಗಾಗಲೇ ಫೆಬ್ರವರಿ 29 ರವರೆಗಿನ ಗಡುವನ್ನು ಸಡಿಲಗೊಳಿಸಿ ಮಾರ್ಚ್ 13 ರವರೆಗೆ (2 ವಾರಗಳ ಕಾಲ) ವಿಸ್ತರಿಸಲಾಗಿದೆ ಎಂದು ಸುರೋಳ್ಕರ್ ವಿಕಾಸ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
- - -ಗಡುವಿನೊಳಗೆ ಫಲಕ ಅಳವಡಿಸದಿದ್ದರೆ ಕರವೇ ತೆರವುಗೊಳಿಸಲಿದೆ: ಟಿ.ಎ. ನಾರಾಯಣಗೌಡ
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ಮತ್ತೆ 15 ದಿನ ಕಾಲಾವಕಾಶ ನೀಡಲಾಗಿದ್ದು, ಆ ಅವಧಿಯ ಒಳಗೆ ಕನ್ನಡ ನಾಮಫಲಕ ಅಳವಡಿಕೆ ಮಾಡದಿದ್ದರೆ ನಮ್ಮ ಕಾರ್ಯಕರ್ತರು ತೆರವು ಮಾಡುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಯುಕ್ತರು ಒಂದು ದಿನ ಕಾಲಾವಕಾಶ ಕೇಳಿದ್ದರು. ಇದೀಗ ಉಪ ಮುಖ್ಯಮಂತ್ರಿಗಳು 15 ದಿನ ಕಾಲಾವಕಾಶ ನೀಡಿದ್ದಾರೆ. ಇದೇ ರೀತಿ ಮಾಡಿದರೆ, ಯಾರೂ ಕನ್ನಡ ನಾಮ ಫಲಕ ಅಳವಡಿಕೆ ಮಾಡುವುದಿಲ್ಲ.ಸರ್ಕಾರ ನೀಡಿರುವ ಕಾಲಾವಕಾಶ ಮುಕ್ತಾಯಗೊಳ್ಳುವವರೆಗೆ ಕಾಯುತ್ತೇವೆ. ಆ ನಂತರವೂ ಕನ್ನಡ ನಾಮ ಫಲಕ ಅಳವಡಿಕೆ ಮಾಡದಿದ್ದರೆ ವೇದಿಕೆಯ ಕಾರ್ಯಕರ್ತರೇ ಅನ್ಯ ಭಾಷೆ ನಾಮ ಫಲಕ ತೆರವು ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.