ಅಸಾಂಕ್ರಾಮಿಕ ರೋಗ ಸರ್ವೇಗೆ ಪಾಲಿಕೆಯಿಂದ ಆ್ಯಪ್‌

| Published : Aug 22 2024, 12:54 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಿಟಿ ಮಂದಿಯಲ್ಲಿ ಹೆಚ್ಚಾಗುತ್ತಿರುವ ಮಾಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುತ್ತಿರುವ ಸಾವು-ನೋವಿನ ಕುರಿತು ಬಿಬಿಎಂಪಿಯು ಸರ್ವೇ ಆರಂಭಿಸಿದೆ.

ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಬೆಂಗಳೂರುಇತ್ತೀಚಿನ ದಿನಗಳಲ್ಲಿ ಸಿಟಿ ಮಂದಿಯಲ್ಲಿ ಹೆಚ್ಚಾಗುತ್ತಿರುವ ಮಾಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುತ್ತಿರುವ ಸಾವು-ನೋವಿನ ಕುರಿತು ಬಿಬಿಎಂಪಿಯು ಸರ್ವೇ ಆರಂಭಿಸಿದೆ.ಈಗಾಗಾಲೇ ವಸಂತಪುರ ಹಾಗೂ ಕೊಡಿಗೇಹಳ್ಳಿ ವಾರ್ಡ್‌ನಲ್ಲಿ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ 10 ವಾರ್ಡ್‌ನಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಬಿಬಿಎಂಪಿಯ ಎಲ್ಲ 225 ವಾರ್ಡ್‌ನಲ್ಲಿ ಸರ್ವೇ ನಡೆಸುವುದಕ್ಕೆ ಯೋಜನೆ ಸಿದ್ಧವಾಗಿದೆ.ಪ್ರತಿ ವಾರ್ಡ್‌ಗೆ 4000 ಮಂದಿಯಂತೆ ಒಟ್ಟು 9 ಲಕ್ಷ ಮಂದಿಯನ್ನು ಸರ್ವೇಗೆ ಒಳಪಡಿಸಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿ ದಿನಕ್ಕೆ 20 ಮಂದಿಯನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಬರೋಬ್ಬರಿ ಒಂದು ವರ್ಷ ಕಾಲ ಈ ಸರ್ವೇ ಕಾರ್ಯ ನಡೆಯಲಿದ್ದು, 2025ರ ಆಗಸ್ಟ್‌ ಅಥವಾ ಸೆಪ್ಟಂಬರ್‌ ವೇಳೆ ಈ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ.

ಬದುಕು ಕಟ್ಟಿಕೊಳ್ಳುವುದಕ್ಕೆ ರಾಜಧಾನಿ ಬೆಂಗಳೂರಿಗೆ ರಾಜ್ಯ ಹಾಗೂ ದೇಶದ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದಾರೆ. ನಗರ ಜೀವನ ಕ್ರಮದಿಂದ ಅಸಾಂಕ್ರಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಕ್ಕೆ ತುತ್ತಾಗುತ್ತಿದ್ದಾರೆ.ಈ 6 ವಿಧದ ಸಮಸ್ಯೆಯಿಂದ ಶೇ.74 ರಷ್ಟು ಸಾವುಗಳು ಈ ರೀತಿಯ ಅಸಾಂಕ್ರಮಿಕ ರೋಗಗಳಿಂದಲೇ ಸಂಭವಿಸುತ್ತಿವೆ ಎಂಬುದು ಈಗಾಗಲೇ ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ. ಮುನ್ನೆಚ್ಚರಿಕೆಯ ಚಿಕಿತ್ಸೆ, ಸಲಹೆ ಸೂಚನೆ ನೀಡುವುದರಿಂದ ಸಾವು ನೋವು ಕಡಿತಗೊಳಿಸಬಹುದಾಗಿದೆ ಎಂಬ ಉದ್ದೇಶದಿಂದ ಬಿಬಿಎಂಪಿಯು ಈ ಸರ್ವೇ ಕಾರ್ಯಕ್ಕೆ ಮುಂದಾಗಿದೆ.

ಸರ್ವೇ ಜತೆಗೆ ಚಿಕಿತ್ಸೆ ಮತ್ತು ಕೌನ್ಸಿಲಿಂಗ್‌ಸಿಎಸ್‌ಆರ್‌ ಅಡಿ ಎಐ ನೆಕ್ಸಸ್‌ ಎಂಬ ಸಂಸ್ಥೆಯು ಬಿಬಿಎಂಪಿಯ ಸರ್ವೇಗೆ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಬಿಬಿಎಂಪಿಯು ಆ್ಯಪ್‌ ಆಧಾರಿತವಾಗಿ ಅಸಾಂಕ್ರಾಮಿಕ ರೋಗಗಳ ಕುರಿತು ಸರ್ವೇಗೆ ಮುಂದಾಗಿದೆ. ಈ ಆ್ಯಪ್‌ ವಿಶೇಷ ಎಂದರೆ, ಆ್ಯಪ್‌ ಮೇಲೆ ಬೆರಳು ಇಟ್ಟರೆ ಆ ವ್ಯಕ್ತಿಯ ಬಿಪಿ, ಪಲ್ಸ್‌ ರೇಟ್‌, ಆಕ್ಸಿಜನ್‌ ಮಟ್ಟದ ಅಂಕಿ ಅಂಶಗಳನ್ನು ದಾಖಲು ಮಾಡಿಕೊಳ್ಳಲಿದೆ. ಮಧುಮೇಹಕ್ಕೆ ಮಾತ್ರ ರಕ್ತ ಮಾದರಿ ಪಡೆದು ಸಾಂಪ್ರದಾಯಿಕ ಮಾದರಿಯಲ್ಲಿ ಪರೀಕ್ಷೆ ನಡೆಸಿ ಅಂಕಿ ಅಂಶ ನಮೂದಿಸಬೇಕಾಗಲಿದೆ.ಆ್ಯಪ್‌ ತಂತ್ರಾಂಶದ ಮೂಲಕ ಈ ಎಲ್ಲಾ ಅಂಕಿ ಅಂಶಗಳು ಸಂಬಂಧಪಟ್ಟ ಬಿಬಿಎಂಪಿಯ ಯುಪಿಎಚ್‌ಸಿಗೆ ಸಲ್ಲಿಕೆಯಾಗಲಿದೆ. ಒಂದು ವೇಳೆ ಪರೀಕ್ಷೆ ನಡೆಸಿದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಅಗತ್ಯವಿದ್ದರೆ ಆಸ್ಪತ್ರೆಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಆಸ್ಪತ್ರೆಯಲ್ಲಿ ರೋಗಿಯ ಹೆಸರು ಮತ್ತು ವಯಸ್ಸು ದಾಖಲಿಸುತ್ತಿದಂತೆ ಪರೀಕ್ಷೆಯ ಎಲ್ಲಾ ಅಂಶಗಳು ವೈದ್ಯರಿಗೆ ಲಭ್ಯವಾಗಲಿವೆ. ಈ ಮೂಲಕ ಸರ್ವೇ ಜೊತೆ ಜೊತೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಮಾಸಿಕ ಒತ್ತಡ, ಮಾದಕ ವ್ಯಸನಿಗಳಾಗಿದ್ದರೆ, ಅವರಿಗೆ ಕೌನ್ಸಿಲಿಂಗ್‌ ಸಹ ನೀಡಲಾಗುತ್ತದೆ.ರಕ್ತ ಪರೀಕ್ಷೆ ಕಿಟ್‌ಗೆ ಮಾತ್ರ ವೆಚ್ಚ

ಬಿಬಿಎಂಪಿಯಿಂದ ಒಬ್ಬರು ಆರೋಗ್ಯ ಸಿಬ್ಬಂದಿಯ ಜತೆಗೆ, ರೋಟರಿ ಸಂಸ್ಥೆಯಿಂದ ಒಬ್ಬ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ. ಈ ಇಬ್ಬರ ತಂಡ ಒಂದೊಂದು ವಾರ್ಡ್‌ನಲ್ಲಿ ಸರ್ವೇ ಕಾರ್ಯ ನಡೆಸಲಿದೆ.

ಬಿಪಿ, ಪಲ್ಸ್‌ ರೇಟ್‌, ಆಕ್ಸಿಜನ್‌ ಮಟ್ಟ ಎಲ್ಲವೂ ಆ್ಯಪ್‌ ಆಧಾರಿತವಾಗಿ ಪರೀಕ್ಷೆ ಮಾಡುವುದರಿಂದ ಯಾವುದೇ ಖರ್ಚು ಇರುವುದಿಲ್ಲ. ರಕ್ತ ಪರೀಕ್ಷೆಯ ಕಿಟ್‌ಗೆ ಮಾತ್ರ ವೆಚ್ಚ ಮಾಡಲಾಗುವುದು. ಒಟ್ಟಾರೆ, ಸರ್ವೇ ಕಾರ್ಯಕ್ಕೆ 80 ರಿಂದ 90 ಲಕ್ಷ ರು. ವೆಚ್ಚವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಶಾಲಾ ಹಂತದಲ್ಲಿ ಜಾಗೃತಿ

ಕಾರ್ಯಕ್ರಮದ ಭಾಗವಾಗಿ 13 ರಿಂದ 18 ವರ್ಷದ ಶಾಲಾ ವಿದ್ಯಾರ್ಥಿಗಳ ಸ್ಕ್ರೀನಿಂಗ್‌ ಜತೆಗೆ ಜಾಗೃತಿ ಮೂಡಿಸಲಾಗುತ್ತದೆ. ವ್ಯಸನ ಮತ್ತು ಮಾನಸಿ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್‌ಗೆ ಒಳಪಡಿಸಲಾಗುತ್ತದೆ. ಶಿಕ್ಷಕರಿಗೆ ತರಬೇತಿ ನೀಡಿ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ 80 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.ಎಲ್ಲ ವರ್ಗದ ಜನರ ಸಮೀಕ್ಷೆ

ಯಾವುದೇ ಒಂದು ವರ್ಗಕ್ಕೆ ಸೇರಿದ ಜನರನ್ನು ಈ ಸರ್ವೇ ಒಳಪಡಿಸಲಾಗುತ್ತಿಲ್ಲ. ಬಡವರು, ಮಧ್ಯಮ ವರ್ಗ ಹಾಗೂ ಮೇಲ್ವರ್ಗ ಹೀಗೆ, ವರ್ಗೀಕರಣ ಮಾಡಲಾಗಿದೆ. ಒಟ್ಟು 34 ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಹೆಸರು, ಲಿಂಗ, ವಯಸ್ಸು, ಕೆಲಸ ಹೊರತು ಪಡಿಸಿ ಉಳಿದಂತೆ ಯಾವುದೇ ವೈಯಕ್ತಿಯ ಮಾಹಿತಿ ಪಡೆಯುವುದಿಲ್ಲ. ಆಧಾರ್‌ ಕಾರ್ಡ್‌, ಬಯೋಮೆಟ್ರಿಕ್‌ ನಂತಹ ಯಾವುದೇ ಮಾಹಿತಿ ಪಡೆಯುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.