ಸಾರಾಂಶ
ಬಿಬಿಎಂಪಿ ಒಡೆತನದ ಮಳಿಗೆಯ ಬಾಕಿ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಸೇಂಟ್‌ಜಾನ್ಸ್ ರಸ್ತೆ ಹಾಗೂ ವಸಂತನಗರ ಮಾರುಕಟ್ಟೆಯಲ್ಲಿನ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಒಡೆತನದ ಮಳಿಗೆಯ ಬಾಕಿ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಸೇಂಟ್‌ಜಾನ್ಸ್ ರಸ್ತೆ ಹಾಗೂ ವಸಂತನಗರ ಮಾರುಕಟ್ಟೆಯಲ್ಲಿನ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.ಸೇಂಟ್‌ಜಾನ್ಸ್ ರಸ್ತೆಯಲ್ಲಿನ ಬಿಬಿಎಂಪಿ ಕಟ್ಟಡದಲ್ಲಿ 1,665 ಚದರ ಅಡಿ ವಿಸ್ತೀರ್ಣದ ಮಳಿಗೆ ಹಾಗೂ ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 214 ಚದರಡಿ ವಿಸ್ತೀರ್ಣದ ಮಳಿಗೆಯನ್ನು ಅಂಚೆ ಕಛೇರಿಗೆ ನೀಡಲಾಗಿತ್ತು. ಈ ಎರಡೂ ಮಳಿಗೆಗಳ ಬಾಡಿಗೆಯನ್ನು 2014ರ ಏಪ್ರಿಲ್‌ನಿಂದ ಹೆಚ್ಚಿಸಲಾಗಿತ್ತು. ಆದರೆ, ಹೆಚ್ಚುವರಿ ಬಾಡಿಗೆಯನ್ನು ಪಾವತಿಸದ ಅಂಚೆ ಕಚೇರಿ, 2014ರ ಏಪ್ರಿಲ್‌ಗಿಂತ ಹಿಂದೆ ನೀಡಲಾಗುತ್ತಿದ್ದ ಬಾಡಿಗೆ ಮೊತ್ತವನ್ನೇ ಬಿಬಿಎಂಪಿಗೆ ಪಾವತಿಸಲಾಗುತ್ತಿತ್ತು.
ಹೆಚ್ಚುವರಿ ಬಾಡಿಗೆ ಪಾವತಿಸುವಂತೆ ಬಿಬಿಎಂಪಿಯಿಂದ ಎರಡೂ ಅಂಚೆ ಕಚೇರಿಗಳಿಗೆ ನೋಟಿಸ್ ನೀಡಲಾಗಿತ್ತಾದರೂ, ಬಾಕಿ ಬಾಡಿಗೆ ಮೊತ್ತವನ್ನು ಪಾವತಿಸಿರಲಿಲ್ಲ. ಅಲ್ಲದೆ, ಸೇಂಟ್‌ಜಾನ್ಸ್ ರಸ್ತೆ ಮಳಿಗೆಯಿಂದ 88.91 ಲಕ್ಷ ರು. ಹಾಗೂ ವಸಂತನಗರ ಮಾರುಕಟ್ಟೆ ಮಳಿಗೆಯಿಂದ 10.80 ಲಕ್ಷ ರು. ಬಾಕಿ ಬಾಡಿಗೆ ಮೊತ್ತ ಪಾವತಿಸಬೇಕಿದೆ. ಅದನ್ನು ಪಾವತಿಸುವಂತೆ ಸೂಚಿಸಿ ಸೋಮವಾರ ಎರಡೂ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಮುದ್ರೆ ಹಾಕಲಾಗಿದೆ.