ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಕೆ.ಆರ್. ವೃತ್ತದ ಬಳಿಯ ಅಂಡರ್ ಪಾಸ್ ವಿಸ್ತರಣೆಯೊಂದಿಗೆ ಅಂಬೇಡ್ಕರ್ ಬೀದಿಯಲ್ಲಿನ ವಾಹನಗಳ ‘ಯೂಟರ್ನ್’ಗೆ ಉಂಟಾಗುತ್ತಿದ್ದ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಕೆ.ಆರ್. ಸರ್ಕಲ್‌ನ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದ ಮಳೆ ನೀರು ತುಂಬಿಕೊಂಡ ಪರಿಣಾಮ ಕಾರು ಮುಳುಗಡೆಯಾಗಿ ಆಂಧ್ರಪ್ರದೇಶ ಯುವತಿಯೊಬ್ಬಳು ಮುಳುಗಿ ಮೃತಪಟ್ಟಿದ್ದಳು.
ಅಂಡರ್ ಪಾಸ್ ಸಹ ನೇರವಾಗಿಲ್ಲ. ಈ ಕಾರಣಕ್ಕೆ ವಿಧಾನಸೌಧದ ಕಡೆಯಿಂದ ಕೆ.ಆರ್. ಸರ್ಕಲ್ ಕಡೆ ಆಗಿಮಿಸುವ ವಾಹನಗಳು ಯೂಟರ್ನ್ ಪಡೆಯುವುದಕ್ಕೆ ತೊಂದರೆ ಉಂಟಾಗುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಸಹ ಹೆಚ್ಚಾಗುತ್ತಿದೆ. ಈ ಎಲ್ಲ ಸಮಸ್ಯೆ ಪರಿಹರಿಸಲು ಪಾಲಿಕೆ ಮುಂದಾಗಿದೆ.
ಎರಡು ಪಥದ ಅಂಡರ್ ಪಾಸ್‌ಕೆ.ಆರ್. ಸರ್ಕಲ್ ಅಂಡರ್ ಪಾಸ್ ಸ್ವಲ್ಪ ಓರೆಯಾಗಿದ್ದು, ಅದನ್ನು ನೇರವಾಗಿಸಲಾಗುತ್ತದೆ. ಜತೆಗೆ, ಅಂಡರ್ ಪಾಸ್ ಇರುವ ಒಂದು ಪಥವನ್ನು ಎರಡು ಪಥಗಳಿಗೆ ಹೆಚ್ಚಿಸಲಾಗುತ್ತದೆ. ಮಳೆಗಾಲದಲ್ಲಿ ಅಂಡರ್ ಪಾಸ್‌ನಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಡಾ.ಅಂಬೇಡ್ಕರ್ ವಿಧಿಯಲ್ಲಿ ವಿಧಾನಸೌಧದಿಂದ ಕೆ.ಆರ್.ಸರ್ಕಲ್ ಕಡೆ ಆಗಮಿಸುವ ಮಾರ್ಗದ ಪಥವನ್ನು ಮೂರರಿಂದ ಐದಕ್ಕೆ ಹೆಚ್ಚಿಸಲಾಗುತ್ತಿದೆ. ಇದರಲ್ಲಿ ಅಂಡರ್ ಪಾಸ್‌ನ ಒಂದು ಪಥ ಒಳಗೊಂಡಿದೆ. ಉಳಿದಂತೆ ಮೇಲ್ಭಾಗದ ರಸ್ತೆಯಲ್ಲಿ ಮತ್ತೊಂದು ಪಥ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
₹4.35 ಕೋಟಿ ವೆಚ್ಚ: ರಸ್ತೆ ಅಭಿವೃದ್ಧಿ, ಅಂಡರ್ ಪಾಸ್ ವಿಸ್ತರಣೆ ಸೇರಿದಂತೆ ಒಟ್ಟಾರೆ ಯೋಜನೆಗೆ 4.35 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿಯನ್ನು 9 ತಿಂಗಳಿನಲ್ಲಿ ಪೂರ್ಣಗೊಳಿಸಬೇಕೆಂದು ಗಡುವು ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಭೂ ಸ್ವಾಧೀನ: ಯೋಜನೆಗೆ ಕರ್ನಾಟಕ ರಾಜ್ಯ ನೌಕರರ ಸಂಘಕ್ಕೆ ಸೇರಿದ 654 ಚದರ ಮೀಟರ್, ಬೆಸ್ಕಾಂಗೆ ಸೇರಿದ 589 ಚ.ಮೀಟರ್, ಜಯಚಾಮರಾಜೇಂದ್ರ ಸಂಸ್ಥೆಗೆ ಸೇರಿದ 28 ಚದರ ಮೀಟರ್ ಸೇರಿದಂತೆ ಒಟ್ಟು 1,272 ಚದರ ಮೀಟರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.