ಸಾರಾಂಶ
ಮದುವಣಗಿತ್ತಿಯಂತೆ ಸಿಂಗರಿಸುತ್ತೇನೆ ಎಂಬ ಕೊಟ್ಟ ಭಾಷೆಯಂತೆ ಪಟ್ಟಣವನ್ನು ಇಂದು ಸಾಕಷ್ಟು ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಹಿರೇಕೆರೂರು: ಮದುವಣಗಿತ್ತಿಯಂತೆ ಸಿಂಗರಿಸುತ್ತೇನೆ ಎಂಬ ಕೊಟ್ಟ ಭಾಷೆಯಂತೆ ಪಟ್ಟಣವನ್ನು ಇಂದು ಸಾಕಷ್ಟು ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ಪಟ್ಟಣದ ಅಯ್ಯಪ್ಪಸ್ವಾಮಿ ನಗರದಲ್ಲಿನ ಬಿ.ಸಿ.ಪಾಟೀಲ ಉದ್ಯಾನವನಕ್ಕೆ ಭೇಟಿ ನೀಡಿ ನಿರ್ಮಾಣಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.
ಪಪಂ ಇಲಾಖೆಗೆ ಸಂಬಂಧಿಸಿದ ಈ ಸ್ಥಳ ಮೊದಲು ಕಸ ಮತ್ತು ತ್ಯಾಜ್ಯ ವಸ್ತುಗಳ ಕೆರೆಯಾಗಿತ್ತು. ಇದನ್ನು ಅಭಿವೃದ್ಧಿ ಪಡಿಸಬೇಕೆಂದು ನನ್ನ ಅಧಿಕಾರದ ಅವಧಿಯಲ್ಲಿ ಸರ್ಕಾರದಿಂದ ೩.೪೨ ಕೋಟಿ ರು. ಮಂಜೂರು ಮಾಡಿಸಿ, ಕೆರೆಯಲ್ಲಿನ ಹೂಳು ತೆಗೆಸುವ ಮೂಲಕ ಸ್ವಚ್ಛಗೊಳಿಸಿ, ಸುತ್ತಲೂ ಕಲ್ಲ್ ಪಿಚ್ಚಿಂಗ್ ಮತ್ತು ವಾಯುವಿಹಾರಿಗಳಿಗೆ ಓಡಾಡಲು ಪ್ಲಾಟ್ ಫಾರಂ, ವ್ಯಾಯಾಮ ಸಲಕರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿಸುವ ಮೂಲಕ ಉದ್ಯಾನವನ ನಿರ್ಮಿಸಲಾಗಿದೆ. ಇದು ಸೇರಿದಂತೆ ಬಸವೇಶ್ವರ ನಗರ, ಹೌಸಿಂಗ್ ಬೋರ್ಡ್, ಜಿ.ಬಿ. ಶಂಕರಾವ್ ವೃತ್ತದ ಬಳಿ ಇರುವ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಹೀಗೆ ವಿವಿದ ಸ್ಥಳಗಳಲ್ಲಿ ಉದ್ಯಾನವನ ನಿರ್ಮಿಸಲಾಗಿದ್ದು, ಪಪಂ ಇಲಾಖೆಯವರು ಇವುಗಳನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರು ಇದನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದುವಂತೆ ಮನವಿ ಮಾಡಿದರು.ಪಪಂ ಸದಸ್ಯ ಗುರುಶಾಂತ ಯತ್ತಿನಹಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ, ಸಿ.ಬಿ. ಮಾಳಗಿ, ಶಿವಾನಂದ ನ್ಯಾಮತಿ, ಬಸವರಾಜ ಅರಕೇರಿ, ಬಿ.ಆರ್. ಪುಟ್ಟಣ್ಣನವರ ಶಂಬಣ್ಣ ತಂಬಾಕದ,ಹಾಗೂ ಸ್ಥಳಿಯರು ಇದ್ದರು.