ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಪೂರ್ವ ಭಾಗದ ಕೋನದಾಸಪುರದಲ್ಲಿ ಕೈಗೆತ್ತಿಕೊಂಡಿರುವ ಬೃಹತ್‌ ವಸತಿ ಯೋಜನೆಯ (ಹಂತ- 1) ಕಾಮಗಾರಿ ಅಂತಿಮ ಹಂತ ತಲುಪಿದ್ದು ಶೀಘ್ರದಲ್ಲೇ ಸಾರ್ವಜನಿಕರ ಖರೀದಿಗೆ ಲಭ್ಯವಾಗಲಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಪೂರ್ವ ಭಾಗದ ಕೋನದಾಸಪುರದಲ್ಲಿ ಕೈಗೆತ್ತಿಕೊಂಡಿರುವ ಬೃಹತ್‌ ವಸತಿ ಯೋಜನೆಯ (ಹಂತ- 1) ಕಾಮಗಾರಿ ಅಂತಿಮ ಹಂತ ತಲುಪಿದ್ದು ಶೀಘ್ರದಲ್ಲೇ ಸಾರ್ವಜನಿಕರ ಖರೀದಿಗೆ ಲಭ್ಯವಾಗಲಿದೆ.

ಒಟ್ಟು 23.25 ಎಕರೆ ವಿಸ್ತೀರ್ಣದ ವಿಶಾಲ ಜಾಗದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ತಲೆ ಎತ್ತುತ್ತಿರುವ ಈ ವಸತಿ ಸಮುಚ್ಛಯದ ಶೇ.90ರಷ್ಟು ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. ಮೂಲ ಸೌಕರ್ಯ ಸಂಸ್ಥೆಯಾದ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಪ್ರೈವೇಟ್‌ ಲಿಮಿಟೆಡ್‌ ಇದರ ಗುತ್ತಿಗೆ ಪಡೆದು ನಿರ್ಮಾಣ ಕಾರ್ಯವನ್ನು ಭರದಿಂದ ಸಾಗುತ್ತಿದೆ. ಸುಮಾರು 700 ಕೋಟಿ ರು.ಗಳಿಗೂ ಅಧಿಕ ವೆಚ್ಚದ ಈ ಯೋಜನೆಯ ಕಾಮಗಾರಿ 2027 ಮಾ.31ರ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ. ಅದಕ್ಕೂ ಮುನ್ನವೇ ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್‌ಗಳಿಗೆ ಈಗಾಗಲೇ ಬೇಡಿಕೆ ಬರಲಾರಂಭಿಸಿದೆ ಎಂದು ಬಿಡಿಎ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ವೈಟ್‌ಫೀಲ್ಡ್‌ ಸಮೀಪದ ಕೋನದಾಸಪುರದಲ್ಲಿ ನಿರ್ಮಿಸಲಾಗುತ್ತಿರುವ ಈ ವಸತಿ ಯೋಜನೆಯಲ್ಲಿ ಒಟ್ಟು 1,928 ಸುಸಜ್ಜಿತ ಫ್ಲ್ಯಾಟ್‌ಗಳು ಇರಲಿವೆ. ಮಧ್ಯಮ ಹಾಗೂ ಸ್ಥಿತಿವಂತರ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲಾಗುತ್ತಿದೆ. 1 ಬಿಎಚ್‌ಕೆ ಫ್ಲ್ಯಾಟ್‌ಗಳು 480 (ದರ: 51 ಲಕ್ಷ ರು.), 3 ಬಿಎಚ್‌ಕೆ ಫ್ಲ್ಯಾಟ್‌ಗಳು 1,448 (ದರ:1.44 ಕೋಟಿ ರು.ಗಳು) ಅತ್ಯಾಧುನಿಕ ಮೂಲಸೌಕರ್ಯಗಳು ಖಾಸಗಿ ಬಿಲ್ಡರ್‌ಗಳ ಸಮುಚ್ಛಯಗಳನ್ನು ಮೀರಿಸುವಂತೆ ಬಿಡಿಎ ಈ ಬಾರಿ ಸೌಲಭ್ಯಗಳನ್ನು ಒದಗಿಸುತ್ತಿದೆ.

ಅಧುನಿಕ ಸೌಲಭ್ಯಗಳು:

ಹಸಿರು ಉದ್ಯಾನವನ ಹಾಗೂ ವಿಶಾಲ ಮುಕ್ತ ಸ್ಥಳ (ಓಪನ್‌ ಸ್ಪೇಸ್‌), ಸಿಎ ನಿವೇಶನದಲ್ಲಿ ಎಲ್ಲ ಹೈಟೆಕ್‌ ಸೌಲಭ್ಯಗಳನ್ನು ಒಳಗೊಂಡ ಕ್ಲಬ್‌ಹೌಸ್‌, ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ಹಾಗೂ ಭೂಗತ ಜಲಸಂಗ್ರಹಾಗಾರ (ಯುಜಿ ಸಂಪ್‌), ಮುಚ್ಚಿದ ಕಾರ್‌ ಪಾರ್ಕಿಂಗ್‌, ಲಿಫ್ಟ್‌ ಮತ್ತು ನಿರಂತರ ವಿದ್ಯುತ್‌ಗೆ ಡಿಜಿ ಸೆಟ್‌ ಬ್ಯಾಕಪ್‌, ಅತ್ಯಾಧುನಿಕ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ, ಸುಸಜ್ಜಿತ ಡಾಂಬರು ರಸ್ತೆಗಳು ಹಾಗೂ ಬೀದಿ ದೀಪಗಳ ವ್ಯವಸ್ಥೆಯನ್ನು ಈ ಯೋಜನೆ ಹೊಂದಿರಲಿದೆ.

ಸಾರ್ವಜನಿಕರಿಂದ ಭಾರಿ ಸ್ಪಂದನೆ:

ಯೋಜನೆ 2027ರ ಮಾರ್ಚ್‌ ನಂತರವಷ್ಟೇ ಅಧಿಕೃತವಾಗಿ ಮಾರುಕಟ್ಟೆಗೆ ಬರಬೇಕಿದ್ದರೂ ಬಿಡಿಎ ಸಹಾಯವಾಣಿಗೆ ಪ್ರತಿದಿನ ಕರೆಗಳ ಮಹಪೂರವೇ ಹರಿದು ಬರುತ್ತಿದ್ದು ಜನರಿಂದ ಅಭೂತಪೂರ್ವ ಬೇಡಿಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಯೋಜನೆಯು ರೇರಾ ನೋಂದಣಿ ಪ್ರಮಾಣ ಪತ್ರದ ನಿರೀಕ್ಷೆಯಲ್ಲಿದೆ. ಪ್ರಮಾಣ ಪತ್ರ ಕೈಸೇರಿದ ತಕ್ಷಣವೇ ಅಧಿಕೃತ ಮಾರಾಟ ಪ್ರಕ್ರಿಯೆ ಆರಂಭವಾಗಲಿದ್ದು, ಸಾರ್ವಜನಿಕರು ಬಿಡಿಎ ಅಧಿಕೃತ ವೆಬ್‌ಸೈಟ್‌ ಮೂಲಕ ಫ್ಲ್ಯಾಟ್‌ಗಳನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ.

ದುಬಾರಿ ದರವೇಕೆ?

ಕೋನದಾಸಪುರದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ 1 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗಳ ಅಂದಾಜು ಬೆಲೆ ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ದಶಕದ ಹಿಂದೆ ನಿರ್ಮಿಸಿರುವ 1 ಬಿಎಚ್‌ಕೆ ಫ್ಲ್ಯಾಟ್‌ಗಳು 14-15 ಲಕ್ಷ ರು.ಗಳಿಗೆ ಲಭ್ಯವಾಗಿದ್ದವು. ಈಗ ಅವುಗಳ ಬೆಲೆ 50 ಲಕ್ಷ ರು.ಗಳಿಗಿಂತ ಹೆಚ್ಚಿದೆ. ಸಾಮಾನ್ಯ ಜನರು ಫ್ಲ್ಯಾಟ್‌ ಕೊಳ್ಳುವಂತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿವೆ.

10 ವರ್ಷಗಳ ಹಿಂದೆ ಭೂಮಿಯ ಬೆಲೆ ಕಡಿಮೆಯಿತ್ತು. ಚದರಡಿಗೆ 800 ರು.ನಿಂದ 1,000 ರು.ವರೆಗೂ ಇತ್ತು. ಕಟ್ಟಡ ನಿರ್ಮಾಣದ ಪರಿಕರಗಳ ದರವೂ ಕಡಿಮೆಯಿತ್ತು. ಈಗ ಚದರ ಅಡಿಗೆ 11 ಸಾವಿರ ರು., ಮೇಲ್ಪಟ್ಟು ದರ ಇದೆ. ಕಾಮಗಾರಿಗೆ ಬೇಕಾದ ಕಬ್ಬಿಣ, ಮರಳು, ಸಿಮೆಂಟ್‌ ನಂತಹ ಪರಿಕರಗಳ ದರವೂ ಏರಿಕೆಯಾಗಿದೆ. ಹೀಗಾಗಿ, ನಿರ್ಮಾಣ ವೆಚ್ಚವೂ ಜಾಸ್ತಿಯಾಗಿದೆ. ಅದಕ್ಕೆ ತಕ್ಕಂತೆ ವರ್ಷ ಕಳೆದಂತೆ ಬೆಲೆಗಳ ಏರಿಕೆ ಅನಿವಾರ್ಯವಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಬಿಡಿಎ ಈ ಹಿಂದೆ ನಿರ್ಮಿಸಿರುವ ಯೋಜನೆಗಳಲ್ಲಿ ಕಡಿಮೆ ದರದಲ್ಲೇ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಕೋನದಾಸಪುರ ಯೋಜನೆಯಲ್ಲಿ ಭೂಮಿ, ನಿರ್ಮಾಣ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆಯ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್‌ಸಿಟಿ ಭಾಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿದ್ದು ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಅಪಾರ್ಟ್‌ಮೆಂಟ್‌ ನಿರ್ಮಿಸಲಾಗುತ್ತಿದೆ.

-ಎನ್‌.ಎ.ಹ್ಯಾರಿಸ್‌, ಅಧ್ಯಕ್ಷ, ಬಿಡಿಎ