ಹೆಬ್ಬಾಳದ ಸಂಚಾರಿ ದಟ್ಟಣೆ ನಿವಾರಣೆಗೆ ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ಕಿರು ಸುರಂಗ ರಸ್ತೆ ಹಾಗೂ ಎಲಿವೇಟೆಡ್‌ ರಸ್ತೆ (ಮೆಲ್ಸೇತುವೆ) ಯೋಜನೆಯಿಂದ ಹೆಬ್ಬಾಳದ ಕೆರೆ ಮತ್ತು ನೀರಿನ ಒಳಹರಿವು ಹಾಗೂ ಮರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಕೆರೆ ಮತ್ತು ಮರಗಳನ್ನು ರಕ್ಷಿಸಿಕೊಂಡೇ 2028ರ ಮೇ ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಬಿಡಿಎ ಉದ್ದೇಶಿಸಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಬ್ಬಾಳದ ಸಂಚಾರಿ ದಟ್ಟಣೆ ನಿವಾರಣೆಗೆ ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ಕಿರು ಸುರಂಗ ರಸ್ತೆ ಹಾಗೂ ಎಲಿವೇಟೆಡ್‌ ರಸ್ತೆ (ಮೆಲ್ಸೇತುವೆ) ಯೋಜನೆಯಿಂದ ಹೆಬ್ಬಾಳದ ಕೆರೆ ಮತ್ತು ನೀರಿನ ಒಳಹರಿವು ಹಾಗೂ ಮರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಕೆರೆ ಮತ್ತು ಮರಗಳನ್ನು ರಕ್ಷಿಸಿಕೊಂಡೇ 2028ರ ಮೇ ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಬಿಡಿಎ ಉದ್ದೇಶಿಸಿದೆ.

ಉತ್ತರ ಬೆಂಗಳೂರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರ ಪ್ರವೇಶಿಸುವ ವಾಹನಗಳಿಗೆ ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಮೇಖ್ರಿ ವೃತ್ತದವರೆಗೆ ಪೀಕ್‌ ಅವರ್‌ನಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಹೆಚ್ಚು ತೊಂದರೆಯಾಗುತ್ತಿದೆ. ಇದನ್ನು ನಿವಾರಿಸಲು ಬಿಡಿಎ ಎರಡೂ ಬದಿಗಳಲ್ಲಿ ತಲಾ ಮೂರು ಲೇನ್‌ಗಳ ಸಾಮರ್ಥ್ಯ ಹೆಚ್ಚಳಕ್ಕೆ ಈ ಯೋಜನೆ ರೂಪಿಸಿದೆ.

ಸುರಂಗ ಮಾರ್ಗದ 2.28 ಕಿ.ಮೀನಲ್ಲಿ ಸುಮಾರು 500 ಮೀಟರ್‌ ಭಾಗ ಹೆಬ್ಬಾಳ ಕೆರೆಯ ಟ್ಯಾಂಕ್‌ಬಂಡ್‌ (ಏರಿ) ಪ್ರದೇಶದ ಕೆಳಗಿನಿಂದ ಹಾದು ಹೋಗುತ್ತದೆ. ಬಿಡಿಎ ಯಾವುದೇ ಕೆರೆ ಜಾಗವನ್ನು ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ನಿರ್ಮಾಣ ಕಾಮಗಾರಿಗಾಗಿ ಏರಿಯ ಭಾಗವನ್ನು ತಾತ್ಕಾಲಿಕವಾಗಿ (ಸುಮಾರು 1 ವರ್ಷ) ಮಾತ್ರ ಬಳಸಿಕೊಂಡು, ಕಾಮಗಾರಿ ಮುಗಿದ ತಕ್ಷಣ ಯಥಾಸ್ಥಿತಿಗೆ ತಂದು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಜಲಮೂಲ ಸುರಕ್ಷಿತ:

ಹೆಬ್ಬಾಳ ಕೆರೆಯ ಒಟ್ಟು 31.24 ಚ.ಕಿ.ಮೀ ಜಲಾನಯನ ಪ್ರದೇಶದಲ್ಲಿ ಶೇ.99ಕ್ಕೂ ಹೆಚ್ಚು ಭಾಗ ಸುರಂಗ ಯೋಜನೆಯ ಪ್ರಭಾವದ ವಲಯದಿಂದ ಹೊರಗಿದೆ. ಸುರಂಗ ಮಾರ್ಗವು ಹೆಬ್ಬಾಳ ಕೆರೆಯ ಏರಿಯ ಕನಿಷ್ಠ ಮೂರು ಮೀಟರ್ ಕೆಳಭಾಗದಲ್ಲಿ ನಿರ್ಮಾಣವಾಗಲಿದೆ. ಇದರಿಂದ ನೀರಿನ ಹರಿವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವೈಜ್ಞಾನಿಕವಾಗಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಸುರಂಗ ರಸ್ತೆ ನಿರ್ಮಾಣದಿಂದ ಕೆರೆಗೆ ನೀರು ಹರಿಯುವ ಮಾರ್ಗಕ್ಕೆ ಯಾವುದೇ ತಡೆ ಆಗದಂತೆ ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಅಂಜರ್ತಲ ಮಂಡಳಿಯ ಮಾಜಿ ಅಧ್ಯಕ್ಷ ಸುನೀಲ್‌ಕುಮಾರ್‌ ಹಾಗೂ ಪ್ರಾದೇಶಿಕ ನಿರ್ದೇಶಕ ಸುಜೀತ್‌ಸಿನ್ಹಾ ಮತ್ತು ಇತರ ತಜ್ಞರ ಸಲಹೆ ಮೇರೆಗೆ ಅಂತರ್ಜಲ ಸುರಕ್ಷತೆಗೆ ಕ್ರಮಕೈಗೊಳ್ಳಲಾಗಿದೆ. ಅಂತರ್ಜಲ ಮಟ್ಟ ಮತ್ತು ಒತ್ತಡವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಫೈಜೋಮೀಟರ್‌ ಹಾಗೂ ಅಬ್ಸರ್ವೇಶನ್‌ ವೆಲ್‌ಗಳನ್ನು ಸ್ಥಾಪಿಸಲಾಗುವುದು. ಕಾಮಗಾರಿ ಮುಗಿದ ನಂತರವೂ ಸಾರ್ವಜನಿಕರಿಗೆ ಅಂಜರ್ತಲ ಮಟ್ಟದ ಮಾಹಿತಿಯನ್ನು ಪ್ರದರ್ಶನ ಫಲಕಗಳ ಮೂಲಕ ಪಾರದರ್ಶಕವಾಗಿ ಒದಗಿಸಲಾಗುವುದು. ಸುರಂಗ ಮಾರ್ಗದ ಸುತ್ತಲೂ ಪ್ರತಿ 50 ಮೀಟರ್‌ಗೆ 2.8 ಮೀ*0.9ಮೀ ಅಳತೆಯ ನೀರು ಹಾದುಹೋಗುವ ಚಾನಲ್‌ ಹಾಗೂ ಗ್ರಾವೆಲ್‌ ಲೇಯರ್‌ ನಿರ್ಮಿಸಲಾಗುತ್ತದೆ. ಇದರಿಂದ ಅಂತರ್ಜಲ ಹರಿವಿಗೆ ಯಾವುದೆ ತಡೆಯುಂಟಾಗುವುದಿಲ್ಲ.

ಸುರಂಗ ಮಾರ್ಗವನ್ನು ಟಾಪ್‌ಡೌನ್‌ ತಂತ್ರಜ್ಞಾನದಲ್ಲಿ ನಿರ್ಮಿಸಲಾಗುತ್ತಿದ್ದು, ಮೇಲ್ಭಾಗದಲ್ಲಿ ಗಿಡಮರಗಳನ್ನು ಬೆಳೆಯಲು ಮತ್ತು ಹಸಿರೀಕರಣ ಕಾಯ್ದುಕೊಳ್ಳಲು ಅವಕಾಶವಿರುತ್ತದೆ. ಸುರಂಗದಲ್ಲಿ ನೀರು ಸಂಗ್ರಹವಾಗದಂತೆ ತಡೆಯಲು 5ಎಚ್‌.ಪಿ. ಸಾಮರ್ಥ್ಯದ 16 ಪಂಪ್‌ಗಳು ಹಾಗೂ ಹೆಚ್ಚುವರಿಯಾಗಿ 4 ಬ್ಯಾಕಪ್‌ ಪಂಪ್‌ಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

1072 ಮರ ಸ್ಥಳಾಂತರ:

ಯೋಜನೆಯ ವ್ಯಾಪ್ತಿಗೆ ಬರುವ ಮರಗಳ ನಿರ್ವಹಣೆಗೆ ಬಿಡಿಎ ವಿಶೇಷ ಆದ್ಯತೆ ನೀಡಿದೆ. ಒಟ್ಟು 1,128 ಮರಗಳನ್ನು ಗುರುತಿಸಲಾಗಿದೆ. ಈ ಪೈಕಿ 1072 ಮರಗಳನ್ನು ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ ಕೆರೆ ಆವರಣ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿ ಗೃಹಗಳ ಆವರಣದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತದೆ (ರೀ ಪ್ಲಾಂಟೇಷನ್‌). ಉಳಿದ 56 ಮರಗಳನ್ನು ಮಾತ್ರ ತೆರವುಗೊಳಿಸಲಾಗುತ್ತದೆ. ತೆರವುಗೊಳಿಸುವ 56 ಮರಗಳ ಬದಲಿಗೆ 1:10 ಅನುಪಾತದಲ್ಲಿ 560 ಹೊಸ ಸಸಿಗಳನ್ನು ಬಿಡಿಎ ನೆಟ್ಟು, 5 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದರು.