ಸರ್ಕಾರಿ ಜಾಗಕ್ಕೇ ಖಾಸಗಿ ವ್ಯಕ್ತಿಗೆ ಬಿಡಿಎ ಪರಿಹಾರ

| Published : Jun 11 2024, 01:30 AM IST / Updated: Jun 11 2024, 11:16 AM IST

ಸಾರಾಂಶ

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ದಾಖಲೆ ತಿರುಚಿದ ಖಾಸಗಿ ವ್ಯಕ್ತಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಹಾರ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

 ಬೆಂಗಳೂರು :  ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ದಾಖಲೆ ತಿರುಚಿದ ಖಾಸಗಿ ವ್ಯಕ್ತಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಹಾರ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾಡಳಿತವು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಭೂಸ್ವಾಧೀನದ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಲು ಅನುಮತಿ ನೀಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದೆ ಎಂದು ಹೇಳಲಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಲು 2008ರ ಮೇ ತಿಂಗಳಲ್ಲಿ 1.20 ಎಕರೆ ಭೂಮಿಯನ್ನು ಬಿಡಿಎ ಕೆ.ವಿ.ರುದ್ರಮೂರ್ತಿ ಎಂಬುವರಿಂದ ಸ್ವಾಧೀನಪಡಿಸಿಕೊಂಡಿತ್ತು. ಬಿಡಿಎ ಹೆಚ್ಚುವರಿ ಭೂಸ್ವಾಧೀನಾಧಿಕಾರಿ ಬಿ.ಎಸ್‌.ಬಸಂತಿ ಮತ್ತು ಜಿಲ್ಲಾಧಿಕಾರಿ ಎ.ಸೌಜನ್ಯಾ ಅವರು 2022ರ ಆಗಸ್ಟ್‌ನಲ್ಲಿ ಕೆ.ಪಿ.ವಿರೂಪಾಕ್ಷಯ್ಯ ಅವರ ಪುತ್ರ ಕೆ.ವಿ.ರುದ್ರಮೂರ್ತಿ ಅವರಿಗೆ ಸುಮಾರು 14,375 ಚದರ ಅಡಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಮಂಜೂರು ಮಾಡಿ ಪರಿಹಾರ ನೀಡಿದ್ದರು. ಉತ್ತರ ಬೆಂಗಳೂರಿನ ಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 8ರಲ್ಲಿ ₹15 ಕೋಟಿ ಮೌಲ್ಯದ ಅಭಿವೃದ್ಧಿ ಪಡಿಸಿದ ಜಮೀನು ನೀಡಲಾಗಿತ್ತು.

ಬೆಂಗಳೂರು ನಗರ ಜಿಲ್ಲಾಡಳಿತ ನಡೆಸಿದ ತನಿಖೆಯಲ್ಲಿ ಭೂ ದಾಖಲೆಗಳನ್ನು ತಿರುಚಿ ಪರಿಹಾರ ಪಡೆದಿರುವುದು ಪತ್ತೆಯಾಗಿದೆ. ಮೂಲ ಭೂ ದಾಖಲೆಗಳ ಪ್ರಕಾರ ಕಲ್ಲಹಳ್ಳಿಯ 1.20 ಎಕರೆ ಗೋಮಾಳದ ಭೂಮಿಯಾಗಿ ಬಳಕೆಯಾಗುತ್ತಿತ್ತು. ಕೈ ಬರಹದ ಪಹಣಿ, ಮ್ಯುಟೇಶನ್‌ ಸೇರಿದಂತೆ ಇತರ ದಾಖಲೆಗಳಲ್ಲಿ ಬದಲಾವಣೆ ಮಾಡಿ ಖಾಸಗಿ ವ್ಯಕ್ತಿ ತನ್ನ ಹೆಸರಿಗೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಅಲ್ಲದೆ ಈ ಪ್ರಕರಣದಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ತನಿಖಾ ಅಧಿಕಾರಿಗಳು 1981ರಿಂದ 1988ರವರೆಗಿನ ಪಹಣಿ ದಾಖಲೆಗಳನ್ನು ಪರಿಶೀಲಿಸಿದಾಗ, ರುದ್ರಮೂರ್ತಿ ಅವರ ಹೆಸರನ್ನು ಸೇರಿಸಲು ಹೊಸ ಪುಟವನ್ನು ಪುಸ್ತಕದಲ್ಲಿ ಪುಟ 281ರಿಂದ 283ರವರೆಗೆ ಸೇರಿಸಿರುವುದು ಪತ್ತೆಯಾಗಿದೆ. ಬೆಂಗಳೂರು ಉತ್ತರ ತಹಸೀಲ್ದಾರ್ ಸಹಿ ಇಲ್ಲದಿದ್ದರೂ ತೆರಿಗೆ ದಾಖಲೆಗಳು ಮತ್ತು 1979-80ರ ಮ್ಯುಟೇಶನ್ ರಿಜಿಸ್ಟರ್‌ನಲ್ಲಿ ಇದೇ ರೀತಿಯ ನಮೂದುಗಳನ್ನು ಗುರುತಿಸಲಾಗಿದೆ.

ಈ ಹಿಂದೆ ಈ ಜಾಗ ಒಂದು ಸರ್ವೆ ನಂಬರ್‌ಗೆ ಸೇರಿದ್ದು, 27.37 ಎಕರೆ ಸರ್ಕಾರಿ ಆಸ್ತಿಯಾಗಿತ್ತು ಎಂಬುದು ದಾಖಲೆಗಳ ಮೂಲಕ ಪತ್ತೆಯಾಗಿತ್ತು. ಆದರೆ, 2023ರ ನವೆಂಬರ್‌ನಲ್ಲಿ ಅಪೂರ್ಣ ವರದಿಯನ್ನು ನೀಡಿದ ಬೆಂಗಳೂರು ಉತ್ತರ ತಹಸೀಲ್ದಾರ್‌ ವಿರುದ್ಧವೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವ್ಯಕ್ತಿಯಿಂದ ಪರಿಹಾರ ಹಿಂಪಡೆಯಲು ಸೂಚನೆ:

ಖಾಸಗಿ ವ್ಯಕ್ತಿಯಿಂದ ಹಂಚಿಕೆ ಆದೇಶವನ್ನು ಹಿಂಪಡೆಯುವಂತೆ ಬಿಡಿಎಗೆ ಸೂಚಿಸುವ ಮೂಲಕ ಸರ್ಕಾರಿ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಡಳಿತವು ಕಂದಾಯ ಇಲಾಖೆಗೆ ಪತ್ರ ಬರೆದಿದೆ. ಕೆಂಪೇಗೌಡ ಬಡಾವಣೆಯಲ್ಲಿ ನಡೆದಿರುವ ಭೂಸ್ವಾಧೀನದ ಎಲ್ಲ ಪ್ರಕರಣಗಳ ಪರಿಶೀಲನೆಯನ್ನು ನಡೆಸಲಿದ್ದೇವೆ ಎಂದು ಹಿರಿಯ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.