ರಾಮನಗರ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಮೈಯಲ್ಲಿ ಬಡವರು ಮತ್ತು ರೈತರ ರಕ್ತ ಹರಿಯುತ್ತಿದೆ. ಅವರಿಬ್ಬರು ಬದುಕಿರುವರೆಗೂ ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರ ಭೂಮಿ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು
ರಾಮನಗರ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಮೈಯಲ್ಲಿ ಬಡವರು ಮತ್ತು ರೈತರ ರಕ್ತ ಹರಿಯುತ್ತಿದೆ. ಅವರಿಬ್ಬರು ಬದುಕಿರುವರೆಗೂ ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರ ಭೂಮಿ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ಬೈರಮಂಗಲದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ದಾದಾಗಿರಿ - ಪೊಲೀಸ್ ಗಿರಿಗೆ ಹೆದರಬೇಡಿ. ನಾವೆಲ್ಲರೂ ನಿಮ್ಮೊಂದಿಗೆ ಇರುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಕಿವಿ, ಕಣ್ಣು, ಮೂಗು ಏನೂ ಇಲ್ಲ. ಹೀಗಾಗಿ ರೈತರ ಕೂಗು ಕೇಳಿಸುತ್ತಿಲ್ಲ. ಮನೆ ಮಠ, ಜಾನುವಾರುಗಳನ್ನು ಬಿಟ್ಟು ರೈತರನ್ನು ಪ್ರತಿಭಟನೆ ಮಾಡುವ ಸ್ಥಿತಿಗೆ ದೂಡಿದೆ. ಕಂದಾಯ ಅಧಿಕಾರಿಗಳು ಮತ್ತು ಪೊಲೀಸರ ಬಲ ಪ್ರಯೋಗಿಸಿ ದೌರ್ಜನ್ಯದಿಂದ ಬಡ ರೈತರ ಭೂಮಿ ಕಸಿದುಕೊಳ್ಳಲು ಹೊರಟಿದೆ ಎಂದು ಆರೋಪಿಸಿದರು.ಬಿಡದಿ ಟೌನ್‌ಶಿಪ್ ಯೋಜನೆ ಕುಮಾರಸ್ವಾಮಿ ಕನಸಿನ ಕೂಸು ಅನ್ನುತ್ತಾರೆ. ಆದರೆ, ರೈತರು ಮನವಿ ಮಾಡಿದಾಗ ಅವರು ನಿಮ್ಮ ಬದುಕಿನ ಮೇಲೆ ಕಲ್ಲು ಹಾಕುವುದಿಲ್ಲವೆಂದು ಹೇಳಿ ಈ ಯೋಜನೆ ಕೈಬಿಟ್ಟಿದ್ದರು. ಆಗ ನೀವೆಲ್ಲರು ಸಂಭ್ರಮಾಚರಣೆ ಮಾಡಿದ್ರಿ. ಈಗ ಅದನ್ನು ನೀವೇಕೆ ಮುಂದುವರಿಸಿದ್ದೀರಿ. ನೀವು ಯೋಜನೆ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಮೋಸ ಮಾಡುತ್ತಿಲ್ಲವೆಂದು ಆತ್ಮಸ್ಥೈರ್ಯವಿದ್ದರೆ ಇಲ್ಲಿಗೆ ಬಂದು ಉತ್ತರ ಕೊಡಿ ನೋಡೋಣ ಎಂದು ಸವಾಲು ಹಾಕಿದರು.
ಈ ಯೋಜನೆ ಸಂಬಂಧ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿ, ಪೊಲೀಸರ ಮೂಲಕ ಹೆದರಿಸಲಿ, ಬೆದರಿಸಲಿ ಭಯಪಡಬೇಡಿ. ನಿಮಗೆ ಪ್ರಾಣ ಕೊಡಲು ನಾನು ಮತ್ತು ಕುಮಾರಸ್ವಾಮಿ ಸಿದ್ಧರಿದ್ದೇವೆ. ಕೃಷಿ ಭೂಮಿ ಕೊಟ್ಟು ಮಹಿಳೆಯರಿಗೆ ಕೌಶಲ್ಯ ತರಬೇತಿ ಕೊಡುತ್ತಾರಂತೆ. ಅಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡಿ ಜೀವನ ನಡೆಸಬೇಕಂತೆ. ಇಂತಹ ಮೂರ್ಖ ಸರ್ಕಾರಕ್ಕೆ ರೖೆತರ ಶಾಪ ತಟ್ಟದೆ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇವೇಗೌಡ ಮತ್ತು ಕುಮಾರಸ್ವಾಮಿ ನಿಮ್ಮಂತೆ ಅಧಿಕಾರಿಗಳ ಸಮೇತ ಸಿಂಡಿಕೇಟ್ ಮಾಡಿಕೊಂಡು ಜಮೀನು ಲೂಟಿ ಮಾಡಲು ಬಂದಿಲ್ಲ. ಇಲ್ಲಿ ಬೇನಾಮಿ ಹೆಸರಲ್ಲಿ ಸಾವಿರಾರು ಎಕರೆ ಜಮೀನು ಖರೀದಿಸಿದ್ದಾರೆ. ಅಂಚಿಪುರದಲ್ಲಿ ಜಮೀನೆ ಇಲ್ಲದ ಜಾಗದಲ್ಲಿ 18 ಎಕರೆ ಜಮೀನು ಪಹಣಿ ಕೂರಿಸಿದ್ದಾರೆ. ಈ ಯೋಜನೆಗೆ ಗುರುತಿಸಿರುವ 9600 ಎಕರೆ ಪೈಕಿ 2750 ಎಕರೆ ಇದ್ದ ಸರ್ಕಾರಿ ಜಮೀನು ಈಗ 750 ಎಕರೆಗೆ ಬಂದು ನಿಂತಿದೆ. ಉಳಿದ ಸರ್ಕಾರಿ ಜಮೀನು ಏನಾಯಿತು ಎಂದು ಪ್ರಶ್ನಿಸಿದರು.
ನಾವು ಇಲ್ಲಿಯೇ ಹುಟ್ಟಿ ಬೆಳೆದವರು. ನಮಗೂ ಜನರ ಬವಣೆ ಗೊತ್ತು. ನನಗೆ ಪೊಲೀಸ್ ಠಾಣೆ ದುರುಪಯೋಗ ಪಡಿಸಿಕೊಳ್ಳದಂತೆ ಹಾಗೂ ಜನರ ಮುಂದೆ ತಗ್ಗಿ ಬಗ್ಗಿ ನಡೆಯುವಂತೆ ಕುಮಾರಸ್ವಾಮಿ ಬುದ್ಧಿ ಹೇಳಿ ಕೊಟ್ಟಿದ್ದಾರೆ. ನಿಮ್ಮಂತೆ ಜನರ ಮೇಲೆ ದೌರ್ಜನ್ಯ ಎಸಗುವುದು, ಪತ್ನಿ ಹೆಸರಲ್ಲಿ ಸರ್ಕಾರಿ ಭೂಮಿ ಲೂಟಿ ಮಾಡುವುದನ್ನು ಹೇಳಿಕೊಟ್ಟಿಲ್ಲ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಹರಿಹಾಯ್ದರು.ಜಿಲ್ಲೆಯನ್ನು ಕುಮಾರಸ್ವಾಮಿ ಅಸ್ತಿತ್ವಕ್ಕೆ ತಂದರು. ಅದಕ್ಕೂ ಮೊದಲು ಆಡಳಿತ ನಡೆಸುತ್ತಿದ್ದ ನಿಮ್ಮಗಳ ಕೊಡುಗೆ ಏನಿದೆ?ಇಲ್ಲಿರುವ ಪ್ರತಿಯೊಂದು ಸರ್ಕಾರಿ ಕಚೇರಿಗಳ ಕಿಟಕಿಗಳು ಕುಮಾರಸ್ವಾಮಿ ಹೆಸರು ಹೇಳುತ್ತವೆ. ನೀರಾವರಿ ಯೋಜನೆಗಳೂ ಕುಮಾರಸ್ವಾಮಿ ಕೊಡುಗೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಧೈರ್ಯವಿದ್ದರೆ ಬರಲಿ ಎಂದು ಎ.ಮಂಜುನಾಥ್ ಸವಾಲು ಹಾಕಿದರು.
25ಕೆಆರ್ ಎಂಎನ್ 3.ಜೆಪಿಜಿಬಿಡದಿ ಹೋಬಳಿಯ ಬೈರಮಂಗಲ ಗ್ರಾಮದ ಶ್ರೀ ಭಕ್ತಾಂಜನೇಯ ದೇವಾಲಯದ ಆವರಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು.