ಮಕ್ಕಳ ಮೊಬೈಲ್‌ ಬಳಕೆಯ ಬಗ್ಗೆ ಎಚ್ಚರವಿರಲಿ

| Published : Jan 01 2024, 01:15 AM IST

ಮಕ್ಕಳ ಮೊಬೈಲ್‌ ಬಳಕೆಯ ಬಗ್ಗೆ ಎಚ್ಚರವಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಭವಿಷ್ಯ ಭಾರತದ ನಿರ್ಮಾತೃಗಳು. ಇವರಲ್ಲಿ ಉತ್ತಮ ಸಂಸ್ಕಾರ ಮೂಡಿಸುವ ಕೆಲಸ ಆಗಬೇಕು. ಅತಿಯಾದ ಪ್ರೀತಿ, ಮೋಹ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದ್ದು, ಪಾಲಕರು ಹಾಗೂ ಶಿಕ್ಷಕರು ಪ್ರೀತಿಯೊಂದಿಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು

ಧಾರವಾಡ: ಮನೆಯೇ ಮೊದಲ ಪಾಠಶಾಲೆ ಎಂಬುದು ಈಗ ಮೊಬೈಲೇ ಮೊದಲ ಪಾಠಶಾಲೆ ಎಂದು ಬದಲಾಗುತ್ತಿದೆ. ಇದು ಮಕ್ಕಳ ಭವಿಷ್ಯಕ್ಕೆ ತುಂಬಾ ಅಪಾಯಕಾರಿ ಎಂದು ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ. ಭಾಗೀರಥಿ ಪುಗಶೆಟ್ಟಿ ಎಚ್ಚರಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಾಯಿನಗರ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ 9ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ ಅವರು, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡುವ ಕೆಲಸ ತುರ್ತಾಗಿ ಆಗಬೇಕಿದೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಗುರಿ ಹೊತ್ತು ಸಾಗುವ ಚಕ್ಕಡಿಯ ಜೋಡೆತ್ತುಗಳಿದ್ದಂತೆ. ಮಕ್ಕಳು ನಿಮ್ಮನ್ನೇ ಅನುಕರಣೆ ಮಾಡಲಿದ್ದಾರೆ. ಹೀಗಾಗಿ ಶಿಕ್ಷಕರು, ಪಾಲಕರು ಮಾದರಿ ಆಗಿರಬೇಕು. ಭಾರತೀಯ ಸಂಸ್ಕೃತಿಯ ಪಾಲಕರು ನಾವಾಗಬೇಕು. ಮಕ್ಕಳನ್ನು ತಿದ್ದು ತೀಡುವಾಗ ಶಿಕ್ಷಕರು ಗದರಿಸಬೇಕಾಗುತ್ತದೆ. ಅದನ್ನು ಪಾಲಕರು ದೂರು ಎಂದು ಸ್ವೀಕರಿಸುವುದು ಬೇಡ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಆರೋಗ್ಯಕ್ಕೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಗುತ್ತಲ್ ಮಾತನಾಡಿ, ಮಕ್ಕಳು ಭವಿಷ್ಯ ಭಾರತದ ನಿರ್ಮಾತೃಗಳು. ಇವರಲ್ಲಿ ಉತ್ತಮ ಸಂಸ್ಕಾರ ಮೂಡಿಸುವ ಕೆಲಸ ಆಗಬೇಕು. ಅತಿಯಾದ ಪ್ರೀತಿ, ಮೋಹ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದ್ದು, ಪಾಲಕರು ಹಾಗೂ ಶಿಕ್ಷಕರು ಪ್ರೀತಿಯೊಂದಿಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಪ್ರಾಚಾರ್ಯ ಪಲ್ಲವಿ ಆಕಳವಾಡಿ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಸ್.ಡಿ. ರಾಜಪುರೋಹಿತ್, ಮೇಲ್ವಿಚಾರಕಿ ಶೈಲಾ ಥಾಂಕರ್, ಪ್ರೊ. ಹಳಿಯಾಳ ಇದ್ದರು.

ದೇಶಭಕ್ತಿ, ಜಾನಪದ ಹಾಗೂ ಚಿತ್ರಗೀತೆಗಳಿಗೆ ಮಕ್ಕಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು. ಇಲ್ಲಿ ಶಾಲೆಯ ಶಿಕ್ಷಕರೇ ಮಕ್ಕಳಿಗೆ ತರಬೇತಿ ನೀಡಿದ್ದು ವಿಶೇಷವಾಗಿತ್ತು. ಅದೇ ರೀತಿ ಎಲ್‌ಕೆಜಿ, ಯುಕೆಜಿ ಹಾಗೂ ಪೂರ್ವ ಪ್ರಾಥಮಿಕ ಮಕ್ಕಳೇ ನಿರೂಪಣೆ, ಸ್ವಾಗತ, ಪರಿಚಯ ನಡೆಸಿದರು.