ಸಾರಾಂಶ
ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ಕಥೊಲಿಕ್ ಸಭಾ ಘಟಕ, ಮಾಧ್ಯಮ ಆಯೋಗ ಜಂಟಿಯಾಗಿ ಸೈಬರ್ ಕ್ರೈಂ - ಮಾಹಿತಿ ಕಾರ್ಯಾಗಾರ ಆಯೋಜಿಸಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ಸೈಬರ್ ವಂಚನೆಗೊಳಗಾಗುತ್ತಿದ್ದು ಆನ್ ಲೈನ್ ನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹರೀಶ್ ಆರ್. ಹೇಳಿದ್ದಾರೆ.ಅವರು ಭಾನುವಾರ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ಕಥೊಲಿಕ್ ಸಭಾ ಘಟಕ, ಮಾಧ್ಯಮ ಆಯೋಗ ಜಂಟಿಯಾಗಿ ಆಯೋಜಿಸಿದ್ದ ಸೈಬರ್ ಕ್ರೈಂ - ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಸೈಬರ್ ಅಥವಾ ಆನ್ ಲೈನ್ ಅಪರಾಧ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚನೆಗೊಳಗಾಗಿ ಕಳೆದುಕೊಂಡು ಹಣವನ್ನು ವಾಪಾಸ್ ಪಡೆಯಬಹುದು. ವಂಚನೆಗೆ ಒಳಗಾಗಿರುವುದು ಗೊತ್ತಾದ ತಕ್ಷಣವೇ, 1930 ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಎನ್.ಸಿ.ಆರ್.ಪಿ. ಪೋರ್ಟಲ್ ಮೂಲಕ ಕೂಡ ದೂರು ನೀಡಬಹುದು ಎಂದರು.ಇತ್ತೀಚಿನ ದಿನಗಳಲ್ಲಿ ವಿವಿಧ ತಾಂತ್ರಿಕ ಶೈಲಿಯ ಸೈಬರ್ ಅಪರಾಧಗಳು ನಡೆಯುತ್ತಿದ್ದು ಹ್ಯಾಕರ್ಸ್ ಮೂಲಕ ಖಾಸಗಿ ಮಾಹಿತಿ ಕದಿಯಲಾಗುತ್ತದೆ. ಬ್ಯಾಂಕಿನವರೆಂದು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ಒಟಿಪಿ ನಂಬರನ್ನು ಕೇಳಿದರೆ ಯಾರಿಗೂ ನೀಡಿ ಖಾತೆಯಲ್ಲಿರುವ ಹಣ ಕಳೆದುಕೊಳ್ಳಬೇಡಿ. ಕಸ್ಟಮ್ಸ್, ಆದಾಯ ತೆರಿಗೆ, ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ಫೋನ್ ಅಥವಾ ಇ ಮೇಲ್ ಮೂಲಕ ಬ್ಯಾಂಕ್ ಖಾತೆಯ ಮೂಲಕ ಮಾಹಿತಿಯನ್ನು ಕೇಳುವುದಿಲ್ಲ ಎಂದರು.ಎಂ.ಸಿ. ಬ್ಯಾಂಕ್ ಬ್ರಹ್ಮಾವರ ಶಾಖೆಯ ಪ್ರಬಂಧಕ ಒವಿನ್ ರೆಬೆಲ್ಲೊ ಅವರು ಡಿಜಿಟಲ್ ಪಾವತಿ ಕುರಿತು ಮಾಹಿತಿ ನೀಡಿದರು. ಅನಗತ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡುವುದನ್ನು ಕಡಿಮೆಗೊಳಿಸಿ ನಗದು ಪಾವತಿ ಮಾಡುವುದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. ಸುಲಭ ಹಣದ ಭರವಸೆ ನೀಡುವ ಯೋಜನೆಗಳಿಗೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದರು.ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು. ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಿರಣ್ ಕ್ರಾಸ್ತಾ ವಂದಿಸಿದರು. ರೆನಿಟಾ ಬಾರ್ನೆಸ್ ಕಾರ್ಯಕ್ರಮ ನಿರೂಪಿಸಿದರು.