ಸೈಬರ್ ಅಪರಾಧದ ಬಗ್ಗೆ ಎಚ್ಚರದಿಂದ ಇರಿ: ಸಿದ್ದು ನಾಯ್ಕರ್

| Published : Oct 19 2025, 01:02 AM IST

ಸಾರಾಂಶ

ಒಂದು ವೇಳೆ ಸೈಬರ್ ಅಪರಾಧ ಕೃತ್ಯದಿಂದ ನಿಮ್ಮ ಹಣ ದೋಚುವ ಕಾರ್ಯ ಮಾಡಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಅಗತ್ಯ ಗದಗ ಸೈಬರ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಸಿದ್ದು ನಾಯ್ಕರ್ ಹೇಳಿದರು.

ಲಕ್ಷ್ಮೇಶ್ವರ: ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಸುಳ್ಳು ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುವುದು ಸೇರಿದಂತೆ ವಿವಿಧ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಗದಗ ಸೈಬರ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಸಿದ್ದು ನಾಯ್ಕರ್ ಹೇಳಿದರು.

ಶನಿವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಸೈಬರ್ ಅಪರಾಧ ಸುರಕ್ಷಾ ಸಲಹಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರ ಕಾರ್ಮಿಕರಿಗೆ ಹಾಗೂ ಪುರಸಭೆಯ ಕಚೇರಿಯ ಸಿಬ್ಬಂದಿಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಮೊಬೈಲ್‌ ಮೂಲಕ ಬರುವ ಅನಗತ್ಯ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು ಎಂದು ಹೇಳಿದರು.

ವಾಟ್ಸ್‌ಆ್ಯಪ್‌ ಮೂಲಕ ಬರುವ ಪಿಎಂ ಕಿಸಾನ್ ಯೋಜನೆ, ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡಿಸುವುದು, ಎಪಿಕೆ ಫೈಲ್‌ಗಳ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ, ವಿವಿಧ ಬ್ಯಾಂಕ್ ಅಧಿಕಾರಿಗಳ, ಪಾರ್ಸಲ್, ಕೋರಿಯರ್ ಹೆಸರಿನಲ್ಲಿ ಕರೆ ಮಾಡಿ ಕಾನೂನುಬಾಹಿರ ವಸ್ತುಗಳನ್ನು ಹೊರದೇಶಕ್ಕೆ ಸಾಗಾಟ ಮಾಡಿರುವುದಾಗಿ ಹೇಳಿ ವಾಟ್ಸ್‌ಆ್ಯಪ್‌ ಕರೆ ಮಾಡಿ ಹೆದರಿಸಿ ಹಣ ವಸೂಲಿ ಮಾಡುವ ಬಗ್ಗೆ ಎಚ್ಚರವಾಗಿರಿ. ನೀವು ಮಾದಕ ವಸ್ತುಗಳ ಕಳ್ಳ ಸಾಗಾಟಿಕೆಯಲ್ಲಿ ಭಾಗಿಯಾಗಿದ್ದೀರಿ, ನಿಮ್ಮ ಮನೆಯಲ್ಲಿ ಡ್ರಗ್ಸ್ ಇದೆ ಎಂದು ಹೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ನಿಮ್ಮಿಂದ ಹಣ ದೋಚುವ ಕಾರ್ಯ ಮಾಡುವ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಅವರು ಮಾಹಿತಿ ನೀಡಿದರು.

ಒಂದು ವೇಳೆ ಸೈಬರ್ ಅಪರಾಧ ಕೃತ್ಯದಿಂದ ನಿಮ್ಮ ಹಣ ದೋಚುವ ಕಾರ್ಯ ಮಾಡಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಮ್ಯಾನೇಜರ್ ಮಂಜುಳಾ ಹೂಗಾರ, ಮಂಜುನಾಥ ಮುದಗಲ್ಲ, ಹೆಡ್ ಕಾನ್‌ಸ್ಟೆಬಲ್‌ ನಾಮದೇವ ಪಾಸ್ತೆ ಇದ್ದರು. ಈ ವೇಳೆ ಪುರಸಭೆಯ ಹನುಮಂತಪ್ಪ ನಂದೆಣ್ಣವರ ಹಾಗೂ ಪೌರ ಕಾರ್ಮಿಕರು ಇದ್ದರು.