ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲದೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ ವತಿಯಿಂದ ಏರ್ಪಡಿಸಿದ್ದ ‘ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದ ಅವರು, ಇಂದಿನ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಗಳ ಕುರಿತು ಅರಿತು, ಸಂದೇಹಗಳಿದ್ದರೆ ಪರಿಹರಿಸಿಕೊಳ್ಳುವ ಮೂಲಕ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಮಾತನಾಡಿ, ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಸೇವೆ, ಕರ್ತವ್ಯ ನಿರ್ವಹಣೆ ವೇಳೆ ತಮಗೆ ಅನ್ವಯಿಸುವ ನಿಯಮಾವಳಿಗಳಿಗೆ ಬದ್ಧರಾಗಿರಬೇಕು. ತಮ್ಮ ಮಿತಿಗಳನ್ನು ಅರಿತು ಕರ್ತವ್ಯ ಅನುಷ್ಟಾನ ಮಾಡಬೇಕು ಎಂದರು.ಸರ್ಕಾರಿ ನೌಕರರು ಎಲ್ಲರಿಗೆ ಉತ್ತರದಾಯಿಯಾಗಿರುತ್ತಾರೆ. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದಾಗ್ಯೂ ಕೆಲವೊಮ್ಮೆ ಕೆಲ ಆಪಾದನೆಗಳಿಗೆ ಗುರಿಯಾಗುವ ಸಂದರ್ಭ ಬರುತ್ತದೆ. ಕೆಲವೊಮ್ಮೆ ಗೊತ್ತಿದ್ದೋ ಲೋಪಗಳು ಆಗುವ ಸಂಭವ ಇರುತ್ತದೆ. ಆದ್ದರಿಂದ ನಮ್ಮ ಕರ್ತವ್ಯದ ಚೌಕಟ್ಟು, ಆಳ ಮತ್ತು ಮಿತಿಯನ್ನು ಅರಿತು ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ಕಾಯ್ದೆ-ಕಾನೂನುಗಳ ಅರಿವು ಮುಖ್ಯ. ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಾ, ತಮ್ಮ ಅಧೀನ ಅಧಿಕಾರಿ, ನೌಕರರಿಗೂ ಮಾರ್ಗದರ್ಶನ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಮಾತನಾಡಿ, ಲೋಕಾಯುಕ್ತ ಸಂಸ್ಥೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ-1988 ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ-1984 ಅಡಿಯಲ್ಲಿ ತನಿಖೆ ಕೈಗೊಳ್ಳುತ್ತದೆ. ರಾಜ್ಯ ಅಧೀನವಾದ ನಿರ್ಣಯಗಳಿಗೆ ಸಂಬಂಧಿಸಿದಂತೆ ಲೋಕಯುಕ್ತ ತನಿಖೆ ಕೈಗೊಳ್ಳುತ್ತದೆ ಎಂದು ಈ ಎರಡು ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಎನ್.ಮೃತ್ಯುಂಜಯ ಲೋಕಾಯುಕ್ತ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಂಜುನಾಥ್ ಎಂ.ಎಚ್. ಚೌದರಿ ವಹಿಸಿದ್ದರು. ಲೋಕಾಯುಕ್ತ ಇನ್ಸೆಪೆಕ್ಟರ್ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.