ಸಾರಾಂಶ
ಹಾನಗಲ್ಲ: ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ರೀತಿಯ ವಿಕೋಪಗಳ ನಿರ್ವಹಣೆಗಾಗಿ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು. ಮಾನ್ಸೂನ್ ಆಪತ್ತುಗಳನ್ನು ಎದುರಿಸುವ ಸಿದ್ಧತೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ನಿರ್ಣಯಿಸಲಾಯಿತು.ಸಮಿತಿಯ ಅಧ್ಯಕ್ಷರಾದ ತಹಸೀಲ್ದಾರ್ ಎಸ್.ರೇಣುಕಮ್ಮ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಮಳೆ ಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿ ಸಂಭವಿಸುವ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಳೆ ಬೀಳುವ ಸಮಯದಲ್ಲಿ ವಿದ್ಯುತ್ ಅವಘಡಗಳು ಏರ್ಪಡುತ್ತವೆ. ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಗ್ರಾ.ಪಂ ಮಟ್ಟದಲ್ಲಿ ಸ್ಥಳೀಯ ಜನರ ಸಹಕಾರ ತೆಗೆದುಕೊಂಡು ಮಳೆ ಅವಾಂತರಗಳ ತಡೆಗೆ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಿಸಿದ ಸ್ಥಳೀಯ ಆಡಳಿತ ಈ ಗುಂಪುಗಳ ಸಂಪರ್ಕದಲ್ಲಿರಬೇಕು ಎಂದರು.ಅಧಿಕ ಮಳೆಯಾದಾಗ ಕೆರೆಗಳು ನೀರಿನ ಒತ್ತಡದಿಂದ ಒಡೆಯುವ ಸಂದರ್ಭಗಳಿರುತ್ತವೆ. ನೀರು ಸರಾಗವಾಗಿ ಹರಿದು ಹೋಗಲು ಮುಂಚಿತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು.ನೀರು ಹರಿಯುವ ಕಾಲುವೆ, ಹಳ್ಳಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ, ರಸ್ತೆ ಬದಿಯಲ್ಲಿ ನೀರು ಹರಿದು ಹೋಗಲು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪಿಡಬ್ಲುಡಿ ಮತ್ತು ಜಿ.ಪಂ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ನದಿಗಳು ಅಪಾಯದ ಮಟ್ಟದಲ್ಲಿ ಹರಿಯುವ ಸಮಯದಲ್ಲಿ ನದಿ ದಡಕ್ಕೆ ಹೋಗದಂತೆ ಜನರು ಮುಂಜಾಗೃತಿ ವಹಿಸಬೇಕು. ಈ ಬಗ್ಗೆ ನದಿ ಭಾಗದ ಗ್ರಾಮಗಳಲ್ಲಿ ಡಂಗೂರ ಸಾರಬೇಕು ಎಂದರು.ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ಕೆ.ಜಿ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರಾಘವೇಂದ್ರ, ಬೃಹತ್ ನೀರಾವರಿ ಇಲಾಖೆ ಎಂಜನಿಯರ್ ಜಾವೇದ್ ಮುಲ್ಲಾ, ತಾ.ಪಂ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ ಇದ್ದರು.