ಕನ್ನಡಪ್ರಭ ವಾರ್ತೆ ಅಥಣಿ
ದೇವರು ಕರುಣಿಸಿದ ಕಣ್ಣಿನ ದೃಷ್ಟಿಯನ್ನು ಚನ್ನಾಗಿ ಕಾಪಾಡಿಕೊಳ್ಳಬೇಕು. ಸೂಕ್ಷ್ಮ ಅಂಗವಾಗಿರುವ ಕಣ್ಣಿನ ಆರೋಗ್ಯದಲ್ಲಿ ದೃಷ್ಟಿ ಸಮಸ್ಯೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಅಮೂಲ್ಯ ಕಣ್ಣುಗಳ ರಕ್ಷಣೆ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ತಾಲೂಕ ಆರೋಗ್ಯ ಇಲಾಖೆ , ಲಕ್ಷ್ಮಣ ಸವದಿ ಫೌಂಡೇಶನ್ ಹಾಗೂ ಸಾಂಗ್ಲಿಯ ಟೆಕೆ ಅಯ್ ಕ್ಲಿನಿಕ್ ಆಶ್ರಯದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ 66ನೇ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಬದುಕಲ್ಲಿ ಅಂಧಾಕಾರ ಬರುವ ಅಪಾಯವಿದೆ. ಈ ಬಗ್ಗೆ ನಾವೆಲ್ಲರೂ ಜಾಗೃತಿ ವಹಿಸಬೇಕು ಎಂದರು.
ಅಥಣಿ ಸಾರ್ವಜನಿಕ ಆಸ್ಪತ್ರೆ ರಾಜ್ಯದ ಅತ್ಯುತ್ತಮ 10 ಆಸ್ಪತ್ರೆಗಳಲ್ಲಿ ಒಂದಾಗಿದ್ದು ನಮ್ಮೆಲ್ಲರಿಗೆ ಹೆಮ್ಮೆ. ಇಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನ ಒದಗಿಸುವ ಜೊತೆಗೆ ನನ್ನ ಹಾಗೂ ನಮ್ಮ ತಂದೆಯವರ ಹುಟ್ಟು ಹಬ್ಬದ ನಿಮಿತ್ತ ಟೆಕೆ ನೇತ್ರ ಚಿಕಿತ್ಸಾ ಆಸ್ಪತ್ರೆಯ ಸಹಕಾರದಿಂದ ಅನೇಕ ಉಚಿತ ಶಿಬಿರಗಳನ್ನು ನಡೆಸುವ ಮೂಲಕ ಸಾವಿರಾರು ಜನರ ಅಂಧತ್ವ ಸಮಸ್ಯೆ ನಿವಾರಿಸಲಾಗಿದ್ದು, ಸಾಮಾಜಿಕ ಸೇವೆ ಖುಷಿ ತಂದಿದೆ. ಇಂತಹ ಆರೋಗ್ಯ ಸೇವೆಗಳಿಗೆ ಸವದಿ ಪರಿವಾರ ಯಾವತ್ತು ಸಹಕಾರ ನೀಡುತ್ತದೆ ಎಂದು ಹೇಳಿದರು.ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರಲ್ಲಿ 40 ವರ್ಷಗಳ ನಂತರ ಸಹಜವಾಗಿ ಕಣ್ಣಿನ ದೋಷಗಳು ಕಂಡುಬರುತ್ತವೆ. ದೃಷ್ಟಿ ದೋಷಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಸಬೇಕು. ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ಮಾಡಿಸಬೇಕು, ಅಲ್ಲದೇ, ಕನ್ನಡಕ ಬಳಸುವಂತೆ ತಿಳಿಸಿದರು.
ಶಾಸಕ ಲಕ್ಷ್ಮಣ ಸವದಿ ಅವರು ತಾಲೂಕಿನ ಬಡ ಜನತೆಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆಗಳು ದೊರಕಲಿ ಎಂಬ ಉದ್ದೇಶದಿಂದ ಅನೇಕ ಸೌಲಭ್ಯಗಳನ್ನ ಒದಗಿಸಿದ್ದಾರೆ. ₹27 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಪ್ರಗತಿಯಲ್ಲಿದ್ದು, ತಾಲೂಕಿನ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಶಾಸಕರ ಜನಪರ ಕಾಳಜಿ ಪ್ರಶಂಶಿಸಿದ ಅವರು, ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.ನಂತರ 300ಕ್ಕೂ ಅಧಿಕ ಅಂಧತ್ವ ಸಮಸ್ಯೆ ಜನರಿಗೆ ಚಿಕಿತ್ಸೆ ನೀಡಲಾಯಿತು. 250 ಜನರಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆಗಾಗಿ ಸಾಂಗ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು.
ಈ ವೇಳೆ ಮುಖಂಡ ಬೀರಪ್ಪ ಯಕ್ಕಂಚಿ, ಟೆಕೆ ನೇತ್ರ ಚಿಕಿತ್ಸಾಲಯದ ಡಾ.ಆಕಾಶ.ಎಂ. ಹಾಗೂ ನೇತ್ರ ತಜ್ಞ ಡಾ.ರಮೇಶ ಹುಲಕುಂದ, ಸಾಮಾಜಿಕ ಕಾರ್ಯಕರ್ತ ಮಲ್ಲು ಕುಲ್ಲೊಳ್ಳಿ, ಮಿಲಿಂದ್ ಸಲಗರ, ಮಹಾಂತೇಶ ಟಕ್ಕಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.