ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗರಾತ್ರಿ ವೇಳೆ ಜಿಲ್ಲಾಧಿಕಾರಿ ಬಂಗಲೆ ಮುಂದೆ, ಹಗಲು ಎಸ್ಪಿ ಮನೆ ಬಾಗಿಲಲ್ಲಿ ಹೋಗುವಾಗ ಹುಷಾರು.
ಚಿತ್ರದುರ್ಗದ ಸಂಚಾರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸದಾಗಿ ಸೃಷ್ಟಿಯಾಗಿರುವ ಟ್ಯಾಗ್‌ಲೈನ್ ಇದು.ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಂಗಲೆ ಮುಂಭಾಗದ ರಸ್ತೆ, ಬೀದಿ ದೀಪಗಳಿಲ್ಲದೆ ರಾತ್ರಿ ಕಗ್ಗತ್ತಲಲ್ಲಿ ಮುಳುಗಿದ್ದರೆ, ಎಸ್‌ಪಿ ಮನೆ ಮಂಭಾಗ ಒಳಚರಂಡಿಯ ಮ್ಯಾನ್ ಹೋಲ್ ಪ್ಲೇಟ್ ಮುರಿದಿದ್ದು ಬ್ಯಾರಿಕೇಡ್ ಇಟ್ಟು ಅವಘಡಗಳ ತಪ್ಪಿಸಲಾಗುತ್ತಿದೆ.
ಕಳೆದ ಒಂದು ತಿಂಗಳಿಂದ ಬ್ಯಾರಿಕೇಡ್ ಹಾಗೆಯೇ ಇದೆ. ಜಿಲ್ಲಾಮಟ್ಟದ ಪ್ರಮುಖ ಅಧಿಕಾರಿಗಳ ಮನೆ ಮುಂಭಾಗದ ಪರಿಸ್ಥಿತಿ ಹೀಗಾದರೆ ದುರ್ಗದ ಇತರೆ ಭಾಗಗಳ ರಸ್ತೆಗಳ ಸಂಚಾರ ಸುರಕ್ಷತೆ ಹೇಗಿರಬೇಡ ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ.ಜಿಲ್ಲಾಧಿಕಾರಿ ಮನೆ ಮುಂಭಾಗದ ರಸ್ತೆ ಒಂದರ್ಥದಲ್ಲಿ ಸರ್ಕಲ್ ಇದ್ದಂತಿದೆ. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ಮುಂಭಾಗ, ಡಿಡಿಪಿಐ ಕಚೇರಿಯಿಂದ, ಕಾನ್ವೆಂಟ್ ಕಡೆಯಿಂದ ಬರುವ ರಸ್ತೆಗಳು ಡಿಸಿ ಮನೆ ಮುಂಭಾಗ ಕೂಡುತ್ತವೆ. ಅಲ್ಲಿಂದ ಭದ್ರಾ ಮೇಲ್ದಂಡೆ ಕಚೇರಿ, ಡಿವೈಎಸ್‌ಪಿ ಕಚೇರಿ, ಪಿಡಬ್ಲ್ಯೂಡಿ ಕಚೇರಿ ಮೂಲಕ ರಾತ್ರಿ ವೇಳೆ ಸಾಗಿದರೆ ಎಲ್ಲಿಯೂ ಬೀದಿ ದೀಪಗಳಿಲ್ಲ. ಒನಕೆ ಓಬವ್ವ ವೃತ್ತದಲ್ಲಿ ಹೈಮಾಸ್ಕ ದೀಪ ಎದುರಾಗುವ ತನಕವೂ ಕತ್ತಲೆಯೇ. ನಡೆದು ಹೋಗುವವರಿಗೆ ಭಯ ಸೃಷ್ಟಿಸುತ್ತದೆ.
ಪ್ರತಿ ಎರಡು ತಿಂಗಳಿಗೋ, ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯತ್ತದೆ. ಸಂಚಾರಿ ವ್ಯವಸ್ಥೆ ಸರಿಪಡಿಸಿ ಅಪಘಾತಗಳನ್ನು ತಪ್ಪಿಸುವುದು, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಚರ್ಚೆಗಳಾಗುತ್ತವೆ. ಸುಗಮ ಸಂಚಾರಕ್ಕೆ ಆಗಿರುವ ಅಡ್ಡಿ ಆತಂಕ ನಿವಾರಿಸುವಂತೆ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಕೆಲ ಖಡಕ್ ನಿರ್ದೇಶನಗಳನ್ನು ನೀಡಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತಾರೆ.ಚಿತ್ರದುರ್ಗ ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಸರಿಪಡಿಸಿ, ಮ್ಯಾನ್‌ಹೋಲ್ ಪ್ಲೇಟ್‌ಗಳ ಮುಚ್ಚಿ ಎಂಬ ಸಾಮಾನ್ಯ ನಿರ್ದೇಶನ ಪ್ರತಿ ಸಭೆಯಲ್ಲಿಯೂ ಜಿಲ್ಲಾಧಿಕಾರಿಗಳಿಂದ ಅಧಿಕಾರಿಗಳಿಗೆ ರವಾನೆಯಾಗುತ್ತದೆ.
ಆದರೆ ಅಧಿಕಾರಿಗಳೇಕೆ ಪಾಲನೆ ಮಾಡುತ್ತಿಲ್ಲ, ಸಭರಗಳ ಮಾಡುವುದೆಂದರೆ ವ್ಯರ್ಥ ಕಾಲ ಹರಣವಾ ಎಂಬ ಪ್ರಶ್ನೆ ಎದುರಾಗುತ್ತದೆ.ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಿದ ನಂತರ ಸುಗಮವಾಗಬೇಕಿದ್ದ ಸಂಚಾರ ವಾಹನ ಚಾಲಕರಿಗೆ ಮತ್ತಷ್ಟು ಸಂಚಕಾರ ತಂದಿದೆ. 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸ್ಕೂಟಿ ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವುದಕ್ಕೆ ನಿರ್ಬಂಧ ಹೇರುವಷ್ಟರ ಮಟ್ಟಿಗೆ ರಸ್ತೆಗಳು ತಮ್ಮ ಕರಾಳತೆಯ ಪ್ರದರ್ಶಿಸಿವೆ. ದ್ವಿಚಕ್ರ ವಾಹನಗಳು ಗುಂಡಿಯಲ್ಲಿ ಇಳಿದು ಹತ್ತಿದರೆ ಹಿರಿಯ ನಾಗರಿಕರ ಸೊಂಟದ ಡಿಸ್ಕ್‌ಗೆ ಹೊಡೆತ ಬೀಳುವುದು ಗ್ಯಾರಂಟಿ. ಹಿರಿಯ ನಾಗರಿಕರು ಎದ್ದೂ, ಬಿದ್ದು ಹೋಗುವ ದೃಶ್ಯಗಳು ನಿತ್ಯ ಸಾಮಾನ್ಯವಾಗಿವೆ.
ಎಸ್‌ಪಿ ಮನೆ ಹಾಗೂ ಪ್ರವಾಸಿ ಮಂದಿರದ ಗೋಡೆ ನಡುವೆ ಹೊಸದಾಗಿ ರಸ್ತೆ ಮಾಡಲಾಗಿದೆ. ವಾಸವಿ ವೃತ್ತದಿಂದ ಗಾಯತ್ರಿ ಕಲ್ಯಾಣ ಮಂಟಪ ಸಾಗಿ ಈ ರಸ್ತೆ ಜೆಸಿಆರ್ ಕಡೆ ಹೋಗುತ್ತದೆ. ಇಲ್ಲಿ ವಿದ್ಯುತ್ ಸಂಪರ್ಕಕ್ಕೆಂದು ರಸ್ತೆ ಅಗೆಯಲಾಗಿದ್ದು ಅದನ್ನು ಮುಚ್ಚುವ ಉಸಾಬರಿಗೆ ಹೋಗಿಲ್ಲ. 12 ಮೀಟರ್ ನಷ್ಟು ಉದ್ದನೆಯ ಕಂದಕ ಬಿದ್ದಿದೆ. ದ್ವಿಚಕ್ರ ವಾಹನಗಳು ಈ ಕಂದಕದಲ್ಲಿ ಇಳಿದು ಹೋಗುವುದೆಂದೆ ತ್ರಾಸದಾಯಕ ಕೆಲಸ. ರಾತ್ರಿ ವೇಳೆಯಂತೂ ನಡುವಿನಲ್ಲಿ ನಡುಕು ಉಂಟಾಗುತ್ತದೆ. ಗ್ಯಾಸ್ಲೈನ್, ಕುಡಿವ ನೀರಿನ ಮಾರ್ಗದ ಲೈನ್ ದುರಸ್ತಿಗಾಗಿ ಸಿಸಿ ರಸ್ತೆಯ ನಗರದಲ್ಲಿ ಮನಸೋ ಇಚ್ಚೆ ಅಗೆಯಲಾಗುತ್ತಿದ್ದು, ನಂತರ ಆ ರಸ್ತೆಗಳ ಯಥಾಸ್ಥಿತಿ ಕಾಪಾಡಲಾಗುತ್ತಿಲ್ಲ. ಇಲ್ಲೂ ಕೂಡಾ ಅದೇ ಪರಿಸ್ಥಿತಿ ಇದೆ.ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದ ಮೇರೆಗೆ ಕೆಲವು ಕಡೆ ಡಿವೈಡರ್‌ಗಳ ತೆರವುಗೊಳಿಸಲಾಗಿದ್ದು, ಅಂತಹ ಕಡೆ ರಸ್ತೆಯನ್ನು ಮರಳಿ ಸುಸ್ಥಿತಿಯಲ್ಲಿ ಇಡಲಾಗಿಲ್ಲ. ಡಿವೈಡರ್ ತೆರವು ಕಾರಣಕ್ಕೆ ರಸ್ತೆಗಳಲ್ಲಿ ಕಂದಕ ಬಿದ್ದಿದ್ದು ವಾಹನ ಚಾಲಕರು ಯೂಟರ್ನ್ ಮಾಡುವಾಗ ಭಯ ಪಡುವಂತಾಗಿದೆ. ಕೆಲವು ಕಡೆ ನಾಗರಿಕರೇ ಮನೆ ಪಾಯದ ಮಣ್ಣು ತುಂಬಿ ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜನಗಳ ಈ ನಡೆಯಿಂದಾಗಿ ಅಧಿಕಾರಿಗಳು ಅವಮಾನಕರ ಎಂದು ಸ್ವೀಕರಿಸದೇ ಇರುವುದು ಕೂಡಾ ಅಚ್ಚರಿ.
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಗುಂಡಿಗಳ ಮುಚ್ಚಿ ಎಂದು ಜಿಲ್ಲಾಧಿಕಾರಿಗಳು ನೀಡುತ್ತಿರುವ ಆದೇಶಗಳು ರಸ್ತೆಯಲ್ಲಿ ಬಿದ್ದು, ಎದ್ದು ಆಸ್ಪತ್ರೆ ಸೇರಿದವರ ಮಣ್ಣಲ್ಲಿ ಮುಚ್ಚಿ ಎಂಬಂತಾಗಿದೆ. ರಸ್ತೆ ಸುರಕ್ಷತೆಯ ಹೊಣೆ ಹೊತ್ತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ವಾರಕ್ಕೆ ಒಮ್ಮೆಯಾದರೂ ಪ್ರಮುಖ ರಸ್ತೆಯಲ್ಲಿ ಸ್ಕೂಟರ್ ಗಳಲ್ಲಿ ಹೋದರೆ ನಾಗರಿಕರು ದ್ವಿಚಕ್ರ ವಾಹನ ಚಾಲಕರು ಅನುಭವಿಸುತ್ತಿರುವ ಯಾತನೆಗಳು ಅರಿವಿಗೆ ಬಂದಾವು.ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ಸುರಕ್ಷಿತ ವಾಹನ ಚಾಲನೆ ಎಂದು ನಂಬಿರುವ ಪೊಲೀಸ್ ಇಲಾಖೆ, ಉತ್ತಮ ರಸ್ತೆಗಳು ಸುರಕ್ಷಿತ ವಾಹನ ಚಾಲನೆಗೆ ಪೂರಕ ಎಂಬುದ ಮರೆತಂತಿದೆ.