ಕುಡಿಯುವ ನೀರು ಕಾಡದಂತೆ ಎಚ್ಚರ ವಹಿಸಿ

| Published : Jan 12 2024, 01:46 AM IST

ಸಾರಾಂಶ

ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕೃಷಿ ಮತ್ತು ಪಶುಸಂಗೋಪನಾ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತಾಲೂಕಿನಿಂದ ಬೇರೆಡೆಗೆ ಭತ್ತದ ಹುಲ್ಲು ಸಾಗಿಸುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.

ಕುರುಗೋಡು: ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಎಸ್.ಎಂ. ವಾಗೀಶ ಶಿವಾಚಾರ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕೃಷಿ ಮತ್ತು ಪಶುಸಂಗೋಪನಾ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತಾಲೂಕಿನಿಂದ ಬೇರೆಡೆಗೆ ಭತ್ತದ ಹುಲ್ಲು ಸಾಗಿಸುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಆರೋಗ್ಯ, ಶಿಕ್ಷಣ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಲು ಅಧಿಕಾರಿಗಳು ತಡಕಾಡಿದರು. ಮುಂದಿನ ಸಭೆಗೆ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳೊಂದಿಗೆ ಆಗಮಿಸಬೇಕು ಎಂದು ತಾಕೀತು ಮಾಡಿದರು.

ಸಭೆಗೆ ಗೈರಾದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ನೀಡುವಂತೆ ತಾಪಂ ಇಒ ಕೆ.ವಿ. ನಿರ್ಮಲಾ ಅವರಿಗೆ ಸೂಚನೆ ನೀಡಿದರು. ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಬೀದಿನಾಯಿ ಕಡಿತದಿಂದ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೀದಿನಾಯಿಗಳ ಅಂಕಿ- ಅಂಶಗಳನ್ನು ಸಂಗ್ರಹಿಸಿ, ಬೀದಿನಾಯಿ ನಿಯಂತ್ರಿಸಲು ಯೋಜನೆ ರೂಪಿಸಿ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಬೇಸಿಗೆಯಲ್ಲಿ ಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳತ್ತ ವಲಸೆ ಹೋಗದಂತೆ ಗ್ರಾಪಂ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಮೂಲಕ ನರೇಗಾ ಯೋಜನೆಯಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯಬೇಕು. ತಾಲೂಕಿನ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಶೌಚಾಲಯಗಳ ಕೊರತೆ ಬಗ್ಗೆ ಪಟ್ಟಿ ಮಾಡಿ ನೀಡಬೇಕು ಎಂದು ಸೂಚಿಸಿದರು.

ತಾಪಂ ಇಒ ಕೆ.ವಿ. ನಿರ್ಮಲಾ ಮತ್ತು ನರೇಗಾ ತಾಲೂಕು ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ ಇದ್ದರು.