ನೀರು, ಮೇವಿನ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಿ

| Published : Jan 24 2024, 02:05 AM IST

ಸಾರಾಂಶ

ಗಜೇಂದ್ರಗಡ ತಾಲೂಕಿನಲ್ಲಿ ಈಗಾಗಲೇ ಬರ ಪರಸ್ಥಿತಿ ನಿರ್ಮಾಣವಾಗಿದ್ದು, ಎಲ್ಲ ಅಧಿಕಾರಿಗಳು ಮುತುವರ್ಜಿ ವಹಿಸಿ ನೀರಿನ ಹಾಗೂ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಶಶಿಕಾಂತ ಕೋಟಿಮನಿ ಹೇಳಿದರು.

ಗಜೇಂದ್ರಗಡ: ತಾಲೂಕಿನಲ್ಲಿ ಈಗಾಗಲೇ ಬರ ಪರಸ್ಥಿತಿ ನಿರ್ಮಾಣವಾಗಿದ್ದು, ಎಲ್ಲ ಅಧಿಕಾರಿಗಳು ಮುತುವರ್ಜಿ ವಹಿಸಿ ನೀರಿನ ಹಾಗೂ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಶಶಿಕಾಂತ ಕೋಟಿಮನಿ ಹೇಳಿದರು.ಸ್ಥಳೀಯ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಮಂಗಳವಾರ ತಾಪಂ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಸಾಮಾನ್ಯ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದ ಪರಿಣಾಮ ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಶು ಸಂಗೋಪನೆ, ಕೃಷಿ ಇಲಾಖೆ, ಜಲಜೀವನ ಮೀಷನ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಯಾವೂದೇ ಕಾರಣಕ್ಕೂ ನೀರಿನ ಹಾಗೂ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಉದ್ಯೋಗ ಖಾತ್ರಿಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಜನತೆ ಗುಳೆ ಹೋಗದಂತೆ ಉದ್ಯೋಗ ಸೃಷ್ಟಿಗೆ ಮುಂದಾದಾಗ ಮಾತ್ರ ಎದುರಾಗಿರುವ ಬರವನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದ ಅವರು, ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಬಿಡುಗಡೆಯಾದ ಅನುದಾನವನ್ನು ಸಕಾಲದಲ್ಲಿ ಬಳಸಿಕೊಳ್ಳುವ ನಿರೀಕ್ಷಿತ ಗುರಿಯನ್ನು ತಲುಪಬೇಕು. ಇಲ್ಲದಿದ್ದರೆ ಸರ್ಕಾರವು ಅನುದಾನವನ್ನು ಹಿಂಪಡೆದರೆ ಸಂಬಂಧಿಸಿದ ಅಧಿಕಾರಿಗಳು ಉತ್ತರವನ್ನು ನೀಡಬೇಕಾಗುತ್ತದೆ. ಹೀಗಾಗಿ ರಾಜ್ಯದಲ್ಲಿನ ೫ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ ಎಂದ ಅವರು, ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ತೃಪ್ತಿಕರವಾಗಿಲ್ಲ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದು ಅದರಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಲಿ ಎಂದರು.ತಹಸೀಲ್ದಾರ್ ಕಿರಣಕುಮಾರ ಪಾಟೀಲ, ತಾಪಂ ಇಒ ಡಾ.ಡಿ.ಮೋಹನ, ಆರ್.ಟಿ.ಮೆಣಸಗಿ, ಎಸ್.ಎಸ್.ಪಾಟೀಲ, ಎಸ್.ಡಿ.ಗೋರೆಬಾಳ, ಬಿ.ಎಸ್.ಭಜಂತ್ರಿ, ಎಚ್.ಕೆ.ಚುಂಚಾ, ಗೀತಾ ಆಲೂರ, ಜಗದೀಶ ಮಡಿವಾಳರ, ಡಾ.ಜಯಶ್ರೀ ಪಾಟೀಲ, ಗೀರೀಶ ಹೊಸೂರ, ರುದ್ರಗೌಡ ಪಾಟೀಲ ಸೇರಿ ಇತರರು ಇದ್ದರು.ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಾಗಾರಗಳ ಜತೆಗೆ ನಕಲು ರಹಿತ, ಸಿಸಿ ಕ್ಯಾಮೆರಾ ಸಹಿತ ಪರೀಕ್ಷೆ ಸಿದ್ಧ ಎನ್ನುವ ಸಾಲುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಧೈರ್ಯ ಹಾಗೂ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳತ್ತ ಪಾಲಕರು ಆಗಮಿಸದಂತೆ ಈಗಾಗಲೇ ಸಭೆಗಳ ಮೂಲಕ ಜಾಗೃತಿ ಮತ್ತು ವಿಷಯವಾರು ಹಿಂದುಳಿದ ವಿದ್ಯಾರ್ಥಿಗಳ ಮನೋಭಲ ಹೆಚ್ಚಿಸಲು ಶ್ರಮಿಸಲಾಗುತ್ತಿದ್ದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿದ್ದೇವೆ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಹೇಳಿದರು.