ಸಾರಾಂಶ
ಧಾರವಾಡ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯ. ಮಳೆ ಪ್ರಮಾಣ ಹೆಚ್ಚಿದಂತೆ ಪ್ರವಾಹ, ಜಲಾವೃತ, ರಸ್ತೆ ಅಪಘಾತ, ವಿದ್ಯುತ್ ದೋಷ, ಮನೆ ಕುಸಿತ ಮುಂತಾದ ಅಪಾಯಗಳು ಉಂಟಾಗುವ ಸಾಧ್ಯತೆಯಿಂದ ಸಾರ್ವಜನಿಕರ ಜೀವ, ಆಸ್ತಿಯ ರಕ್ಷಣೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿದ ಅವರು, ಮುಂಗಾರು ಹಂಗಾಮಿನಲ್ಲಿ ಮಳೆ ಹಾನಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು. ನಿರಂತರ ಮಳೆಯಿಂದ ಮಣ್ಣಿನ ಮನೆಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಬಗ್ಗೆ ಅರಿವು ಮೂಡಿಸಬೇಕು ಮತ್ತು ಸಂಬಂಧಿತ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತಕ್ಷಣ ಕ್ರಮ ಕೈಗೊಳ್ಳಲು ತಿಳಿಸಿದರು.ಮಳೆಯಿಂದ ಜನ ಜಾನುವಾರು ಜೀವ ಹಾನಿ ಆಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ರಸ್ತೆ, ಸೇತುವೆ ಹಾನಿಯಾಗಿದ್ದಲ್ಲಿ ಪರಿಶೀಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಬೇಕು. ಜಡಿ ಮಳೆಯಿಂದ ಜಿಲ್ಲೆಯಲ್ಲಿರುವ ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ, ಬೆಡ್ತಿ ಹಳ್ಳ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಹರಿಯುತ್ತಿರುವ ಹಳ್ಳ ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ಜಲಮೂಲಗಳ ಸಮೀಪ ಸಂಚರಿಸದಂತೆ, ನೀರಿಗೆ ಇಳಿಯದಂತೆ ತಿಳಿಸಬೇಕು. ಜೀವ ಹಾನಿಗಳು ಸಂಭವಿಸಿದರೆ ಸಂಬಂಪಟ್ಟ ಅಧಿಕಾರಿಗಳನ್ನು ನೇರ ಹೂಣೆ ಎಂದು ಎಚ್ಚರಿಸಿದರು.
ತೊಂದರೆಗೀಡಾದ ಸಾರ್ವಜನಿಕರು ವಾಟ್ಸಪ್ ಸಂದೇಶದ ಮೂಲಕ ಸಹಾಯವಾಣಿ 8277803778 ಗೆ ಫೋಟೋ, ವಿಡಿಯೋಗಳನ್ನು ಕಳಿಸುವ ಮೂಲಕ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಇದ್ದರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.