ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ

| Published : Aug 08 2024, 01:35 AM IST

ಸಾರಾಂಶ

ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ, ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು. ಎಲ್ಲೂ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯಲ್ಲಿರುವ 186 ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯದಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಕಾಲೇಜು ಪ್ರಾಂಶುಪಾಲರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಾಬಾದಕರ್ ಕರೆ ನೀಡಿದರು.

ಅವರು ಬುಧವಾರ ನಗರದ ಚನ್ನಬಸವ ಪಟ್ಟದ್ದೆವರು ರಂಗಮಂದಿರಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಮತ್ತಿತರ ಇಲಾಖೆಗಳ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ವಿವಿಧ ಇಲಾಖೆಯಡಿ ನಡೆಯುವ ವಸತಿ ಶಾಲೆ, ನಿಲಯಗಳ ಪ್ರಾಂಶುಪಾಲರು ಮತ್ತು ವಾರ್ಡ್‌ನಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ, ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು. ಎಲ್ಲೂ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಾಗೇನಾದರೂ ಆದರೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಾನೇ ಖುದ್ದಾಗಿ ದೂರ ನೀಡಿ ತಪ್ಪಿತಸ್ಥ ವಿರುದ್ಧ ಕ್ರಮ ಜರುಗಿಸುವಂತೆ ಮಾಡುತ್ತೇನೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಶ್ರೀಧರ್ ಮಾತನಾಡಿ, ಮಿಷನ್ ಇಂದ್ರ ಧನುಷ್ ಯೋಜನೆ ಉದ್ದೇಶ ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡುವದಾಗಿದೆ. ಹಲವಾರು ಕಾಯ್ದೆ ಕಾನೂನುಗಳು ಜಾರಿಗೆ ಬಂದರು ಇನ್ನು ಅಫರಾಧಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಶಾಲೆಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳ ಕುರಿತು ಅವರಿಗೆ ತಿಳಿ ಹೇಳಬೇಕೆಂದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.

ನಮ್ಮ ರಾಜ್ಯದಲ್ಲಿ ವಿವಿಧ ಕಡೆ ಮಕ್ಕಳ ಮೇಲೆ ಅಮಾನವೀಯ ಘಟನೆಗಳು ನಡೆದಿರುವುದನ್ನು ಕಾಣುತ್ತೆವೆ. ಮಕ್ಕಳ ರಕ್ಷಣಾ ನೀತಿ ಪಾಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳದ ಪ್ರಾದೇಶಿಕ ಸಂಯೋಜಕರಾದ ಡಾ.ಕೆ. ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕರಾದ ಸಿಂಧು ಎಚ್.ಎಸ್. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಂಗೀತಾ ಪಾಟೀಲ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ್, ಶಿಕ್ಷಣಾಧಿಕಾರಿ ಗುಂಡಪ್ಪ. ಶಾರದಾ ಕಲ್ಮಲಕರ್. ಧನ ಲಕ್ಷ್ಮೀ ಪಾಟೀಲ, ಗೌರಿ ಶಂಕರ್ ಪರತಾಪೂರ ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳು ಹಾಗೂ ವಸತಿ ಶಾಲೆ ಮತ್ತು ನಿಲಯಗಳ ಪ್ರಾಂಶುಪಾಲರು. ವಾರ್ಡನಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.