ಬೇಸಿಗೆ ಸಮೀಪಿಸುತ್ತಿದ್ದು ಎಲ್ಲಾ 21 ಗ್ರಾಮ ಪಂಚಾಯಿತಿಗಳಲ್ಲಿಯೂ ಎಲ್ಲಿಯೂ ಕುಡಿಯುವ ನೀರಿಗೆ ಬರ ಬಾರದಂತೆ ಪಿಡಿಒಗಳು ಶ್ರಮಿಸಬೇಕು.

ಬಂಗಾರಪೇಟೆ: ಬೇಸಿಗೆಯಲ್ಲಿ ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಬಾರದಂತೆ ಅಧಿಕಾರಿಗಳು ಈಗನಿಂದಲೇ ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕಂದಾಯ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೇಸಿಗೆ ಸಮೀಪಿಸುತ್ತಿದ್ದು ಎಲ್ಲಾ 21 ಗ್ರಾಮ ಪಂಚಾಯಿತಿಗಳಲ್ಲಿಯೂ ಎಲ್ಲಿಯೂ ಕುಡಿಯುವ ನೀರಿಗೆ ಬರ ಬಾರದಂತೆ ಪಿಡಿಒಗಳು ಶ್ರಮಿಸಬೇಕು. ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಬರಬಹುದು. ಅಲ್ಲಿ ಪರ್ಯಾಯವಾಗಿ ಯಾವ ಕ್ರಮವಹಿಸಬೇಕು. ಎಲ್ಲಿ ಪೈಪ್ ಲೈನ್ ಹಾಕಬೇಕು ಎಂಬುದನ್ನು ಈಗನಿಂದಲೇ ಪಟ್ಟಿ ಮಾಡಿಕೊಳ್ಳಿ. ಒಟ್ಟಾರೆಯಾಗಿ ಎಲ್ಲಿಯೂ ಸಮಸ್ಯೆ ಬಾರದಂತೆ ಪಿಡಿಒಗಳು ನಿಗಾವಹಿಸಿ ಕ್ರಮವಹಿಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.ತಾಲೂಕಿನಾದ್ಯಂತ ನಿವೇಶವಿಲ್ಲದವರು ನಿವೇಶನಕ್ಕಾಗಿ 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಗೋಮಾಳ, ಸರ್ಕಾರಿ ಜಾಗವನ್ನು ಪತ್ತೆ ಮಾಡಿ ಮೊದಲ ಆದ್ಯತೆಯಾಗಿ ನಿವೇಶನಗಳನ್ನು ಮಾಡಿ ಮೂರು ತಿಂಗಳೊಳಗೆ 1 ಸಾವಿರ ನಿವೇಶನ ಹಂಚುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಕಂದಾಯ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ ನನ್ನ ವೇಗಕ್ಕೆ ತಕ್ಕಂತೆ ಸ್ಪಂದಿಸಬೇಕೆಂದು ಸೂಚಿಸಿದರು.ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರ ನಿವೇಶ ನೀಡಲಿದೆ ಎಂದು ಅರ್ಜಿ ಹಾಕಿದ್ದಾರೆ ಅವರ ಆಸೆಗೆ ತಣ್ಣಿರು ಹಾಕದೆ ಅವರ ಕನಸಿಗೆ ನೀರಾಕಬೇಕೆಂದರು.

ಸಭೆಯಲ್ಲಿ ತಹಸೀಲ್ದಾರ್ ಸುಜಾತ, ಗ್ರೇಡ್ 2 ತಹಸೀಲ್ದಾರ್ ಗಾಯತ್ರಿ, ತಾಪಂ ಇಒ ರವಿಕುಮಾರ್ ಇದ್ದರು.